ಗದಗ

ಜಿಂಕೆ ಹಾವಳಿಗೆ ನೆಲ ಕಚ್ಚಿದ ಬೆಳೆ

Published On :

ಕನ್ನಡಪ್ರಭ ವಾರ್ತೆ, ನರೇಗಲ್ಲ, ನ. 19
ಪ್ರಸಕ್ತ ಸಾಲಿನಲ್ಲಿ ಸ್ವಲ್ಪ ಉತ್ತಮ ಮಳೆಯಾಗಿದ್ದು, ರೈತರು ನೆಮ್ಮದಿಯಿಂದಿರಬೇಕೆಂದರೆ ಬೆಳೆಗಳಿಗೆ ಜಿಂಕೆ ಹಾವಳಿ ಶುರುವಾಗಿರುವುದು ರೈತರಲ್ಲಿ ಚಿಂತೆಗೆ ಕಾರಣವಾಗಿದೆ.
ಬಿತ್ತನೆ ಮಾಡಿದ ಗೋದಿ, ಕಡಲೆ, ಸೂರ್ಯಕಾಂತಿ, ಕುಸುಬೆ ಹಾಗೂ ಜೋಳದ ಬೆಳೆಗಳು ಉತ್ತಮವಾಗಿ ಬೆಳೆದಿವೆ. ಆದರೆ ಬೆಳೆಯಲ್ಲಿ ಜಿಂಕೆಗಳ ಹಿಂಡು ಬಂದು ಬೆಳೆಯನ್ನೆಲ್ಲ ನಾಶಪಡಿಸುತ್ತಿದ್ದು, ಇದರಿಂದಾಗಿ ಮಳೆಯಾಗಿ ಉತ್ತಮ ಬೆಳೆ ಬಂದರೂ ಜಿಂಕೆಗಳ ಹಾವಳಿಯಿಂದಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಈಚೆಗೆ ಸುರಿದ ಹಸ್ತಾ ಮಳೆಯು ಉತ್ತಮವಾಗಿ ಆಗಿದ್ದರಿಂದ ಇದನ್ನು ನಂಬಿಕೊಂಡ ರೈತರು ಕೃಷಿ ಚಟುವಟಿಕೆ ಹುಮ್ಮಸ್ಸಿನಿಂದಲೇ ಕೈಗೊಂಡಿದ್ದರು. ಅಲ್ಲದೇ ಬಹುತೇಕ ಎಲ್ಲ ರೈತರು ಬಿತ್ತನೆ ಮಾಡಿದ್ದಾರೆ. ಹೊಲಕ್ಕೆ ಬೇಕಾದ ಬೀಜ, ರಸಗೊಬ್ಬರಗಳನ್ನು ಸಾಲ-ಸೋಲ ಮಾಡಿ ಖರೀದಿಸಿ, ಅಪಾರ ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಬಿತ್ತಿದ ಬಳಿಕ ಬೆಳೆ ಏನೋ ಬಂದಿದೆ. ಆದರೆ ಜಿಂಕೆಗಳು ಬೆಳೆಗಳ ಮೇಲೆ ದಾಳಿ ಮಾಡಿ ಸಂಪೂರ್ಣವಾಗಿ ಹಾಳುಮಾಡುತ್ತಿರುವುದರಿಂದ ರೈತರಿಗೆ ಏನು ಮಾಡಬೇಕೆನ್ನುವುದು ತೋಚದಂತಾಗಿದೆ.
30-40 ಜಿಂಕೆಗಳ ದಂಡು: ರೈತರು ಬೆಳೆದ ಸೂರ್ಯಕಾಂತಿ, ಕಡಲೆ, ಜೋಳ, ಗೋದಿ, ಕುಸುಬಿ ಬೆಳೆಯ ಮೇಲೆ ಒಮ್ಮಿಂದೊಮ್ಮೆಲೆ 30 ರಿಂದ 40 ಜಿಂಕೆಗಳ ದಂಡು ಹೊಲಕ್ಕೆ ಹೊಕ್ಕು ಬೆಳೆಯನ್ನು ಹಾಳುಮಾಡುತ್ತಿವೆ. ಸಾಲ-ಸೋಲ ಮಾಡಿ ಬಿತ್ತನೆ ಮಾಡಿರುವ ಚಿಂತೆ ಒಂದಡೆಯಾದರೆ, ಬೆಳೆದು ನಿಂತ ಬೆಳೆಯೂ ಈಗ ನಾಶವಾಗುತ್ತಿದೆ. ಇವುಗಳ ಮಧ್ಯೆ ಕಡಲೆ ಬೆಳೆಗೆ ಕೀಟಬಾಧೆ ಆವರಿಸಿದ್ದು, ಇದರ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಿಸಲು ಔಷಧಿ ತರಲು ಹೋದಾಗ ಕ್ರಿಮಿನಾಶಕಗಳ ಬೆಲೆಯೂ ಏರಿಕೆಯಾಗಿರುವುದು ರೈತರನ್ನು ಮತ್ತಷ್ಟು ಕಂಗೆಡಿಸಿದೆ.
ಬೆಳೆಹಾನಿ: ಒಣ ಬೇಸಾಯವನ್ನೇ ನಂಬಿರುವ ಈ ಭಾಗದ ರೈತರು ತಾವು ಬೆಳೆಯುವ ಆಹಾರ ಹಾಗೂ ವಾಣಿಜ್ಯ ಬೆಳೆಗಳ ಮೇಲೆ ತುಂಬಾ ಹಣ ವ್ಯಯಮಾಡಿ ಬಿತ್ತನೆ ಕಾರ್ಯ ಕೈಗೊಂಡಿದ್ದರೂ ಬೆಳೆಯನ್ನು ಪ್ರಾಣಿಗಳು ತುದಿತುದಿಯಾಗಿ ಕಡಿದು ಹಾಕಿ ಸಂಪೂರ್ಣ ನಾಶಮಾಡಿದ್ದು, ನರೇಗಲ್ಲ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಹಾಗೂ ಚಿಕ್ಕ ಹಿಡುವಳಿದಾರರ ಪರಸ್ಥಿತಿ ಚಿಂತಾಜನಕವಾಗಿದೆ. ಅವರನ್ನೇ ನಂಬಿ ಬದುಕುವವರ ಪರಿಸ್ಥಿತಿಯಂತು ಹೇಳತೀರದು.
3 ವರ್ಷದಿಂದ ಮಳೆಯಾಗದೇ ತೊಂದರೆಯಲ್ಲಿದ್ದೆವು. ಆದರೆ, ಈ ಬಾರಿ ಉತ್ತಮ ಮಳೆಯಾಗಿದ್ದು, ಬೆಳೆದ ಅಲ್ಪ ಸ್ವಲ್ಪ ಬೆಳೆಯನ್ನು ಕೂಡ ಈ ಜಿಂಕೆಗಳು ತಿಂದು ಹೊಲಗಳಲ್ಲಿ ಓಡಾಡಿ ಹಾಳು ಮಾಡುತ್ತಿವೆ. ಇದರಿಂದಾಗಿ ನಮಗೆ ಏನು ಮಾಡುವುದು ಎನ್ನುವುದೇ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಹೊಲಕ್ಕೆ ನುಗ್ಗಿ ಬೆಳೆಗಳನ್ನು ಹಾಳು ಮಾಡುವ ಜಿಂಕೆಗಳನ್ನು ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಸಾಗಿಸಲು ಕ್ರಮ ಕೈಗೊಳ್ಳಬೇಕು.
-ರಂಗಪ್ಪ ನಾಯ್ಕರ, ಮಂಜಪ್ಪ ಅಂಕದ
ನರೇಗಲ್ಲ ಪಟ್ಟಣದ ರೈತರು

 ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.