ಗದಗ

ರಾಜಕಾಲುವೆ ಅತಿಕ್ರಮಣ: ಕಟ್ಟಡಗಳ ನಿರ್ಮಾಣ

Published On :

ಕನ್ನಡಪ್ರಭ ವಾರ್ತೆ, ಗದಗ, ನ. 19
ರಾಜಕಾಲುವೆಗಳನ್ನು ಅತಿಕ್ರಮಣ, ಒತ್ತುವರಿ ಮಾಡಿಕೊಂಡ ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬಂದು, ಎಲ್ಲರಲ್ಲಿಯೂ ಆಶ್ಚರ್ಯಕ್ಕೆ ಕಾರಣವಾಗಿತ್ತು. ಆದರೆ, ಅದಕ್ಕಿಂತ ಆಶ್ಚರ್ಯವೆಂದರೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಾಲುವೆಗಳ ಮೇಲೆಯೇ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿ (ಅತಿಕ್ರಮಣ) ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದು, ಈ ಬಗ್ಗೆ ಗಮನ ನೀಡಬೇಕಾದ ನಗರಸಭೆ ಹಾಗೂ ಜಿಲ್ಲಾಡಳಿತ ಜಾಣ ಕುರುಡುತನ ನೀತಿ ಪ್ರದರ್ಶಿಸುತ್ತಿದೆ.
ರಾಜಕಾಲುವೆಗಳನ್ನು ಅತಿಕ್ರಮಣ ಮಾಡಿಕೊಂಡಿರುವವರು ಎಷ್ಟು ಪ್ರಭಾವಿ ಶಾಲಿಗಳಾಗಿದ್ದಾರೆ ಎಂದರೆ, ಈ ಕುರಿತು ಅವರನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವಳಿ ನಗರದ ಹೃದಯ ಭಾಗದಲ್ಲಿ ಹಾಯ್ದು ಹೋಗಿರುವ ಪ್ರಮುಖ 3 ರಾಜಕಾಲುವೆ (ದೊಡ್ಡ ಚರಂಡಿ) ನೋಡಲು ಸಿಗುವುದೇ ಇಲ್ಲ. ಯಾಕೆಂದರೆ ನಗರದ ಹೃದಯ ಭಾಗ ಪ್ರಾರಂಭವಾಗುತ್ತಿದ್ದಂತೆ ಕಾಲುವೆಯ ಮೇಲೆಯೇ ಸ್ಲ್ಯಾಬ್ ಹಾಕಿ ತಮ್ಮ ಸ್ವಂತ ಸ್ಥಳದಲ್ಲಿ ಅಂಗಡಿ ನಿರ್ಮಿಸುವಂತೆ ಕಟ್ಟಡ ನಿರ್ಮಿಸಿದ್ದಾರೆ. ಅದರಲ್ಲಿಯೂ ಕೆಲವರು 2ನೇ ಅಂತಸ್ತಿನ ಕಟ್ಟಡ ನಿರ್ಮಿಸಿ ಅದರಿಂದಲೇ ಬಾಡಿಗೆ ಪಡೆಯುವವರು ಅವಳಿ ನಗರದಲ್ಲಿದ್ದಾರೆ.
ಹಲವೆಡೆ ಅತಿಕ್ರಮಣ: ನಗರದ ಕಾಯಿಪಲ್ಲೆ ಮಾರುಕಟ್ಟೆ ಪ್ರದೇಶದಿಂದ ಪ್ರಾರಂಭವಾಗುವ ಈ ರಾಜಕಾಲುವೆಯ ಅತಿಕ್ರಮಣ, ಅವಳಿ ನಗರ ದಾಟಿ ಹೊರಗಡೆ ಹೋಗುವವರೆಗೂ ಅತಿಕ್ರಮಣವಾಗಿದೆ. 2005-06ನೇ ಸಾಲಿನಲ್ಲಿಯೇ ಈ ಕುರಿತು ನಗರಸಭೆಯ ಅಧಿಕಾರಿಗಳು ಜಿಲ್ಲಾಡಳಿತ ಮತ್ತು ಪೌರಾಯುಕ್ತ ಇಲಾಖೆಗೆ ಪತ್ರವನ್ನು ಬರೆದು ಅತಿಕ್ರಮಣ ಬಗ್ಗೆ ಉಲ್ಲೇಖಿಸಿದ್ದರು. ವಿಪರ್ಯಾಸವೆಂದರೆ. ಇಂದಿಗೂ ಹಲವೆಡೆ ಅತಿಕ್ರಮಣ ಮುಂದುವರಿದಿದೆ. ಅವುಗಳ ತೆರವು ಕಾರ್ಯಾಚರಣೆ ನಡೆದಿಲ್ಲ. ಬದಲಾಗಿ ಇಂದಿಗೂ ರಾಜಕಾಲುವೆಗಳ ಮೇಲೆ ಅಲ್ಲಲ್ಲಿ ಕಟ್ಟಡ ಕಾಮಗಾರಿಗಳು ಚಾಲನೆಯಲ್ಲಿರುವುದು ದುರಂತವೇ ಸರಿ.
ಅತಿಕ್ರಮಣ ಬಗ್ಗೆ ಪ್ರಶ್ನಿಸಿಲ್ಲ: ಅವಳಿ ನಗರದಲ್ಲಿ ರಾಜಕಾಲುವೆಗಳನ್ನು ಅತಿಕ್ರಮಣ ಮಾಡಿಕೊಂಡಿರುವ ಪ್ರತಿಯೊಬ್ಬರೂ ತಮ್ಮ ಜಾಣತನವನ್ನು ಪ್ರದರ್ಶಿಸಿದ್ದು, ರಾಜಕಾಲುವೆಗಳು ನಿರ್ಮಾಣ ಹಂತದಲ್ಲಿ ಇದ್ದಷ್ಟೇ ಅಗಲವನ್ನು ಬಿಟ್ಟಿದ್ದಾರೆ.
ಆದರೆ ಕಾಲುವೆಯ ಮಧ್ಯಭಾಗದಿಂದ ಕಾಲುವೆ ಎರಡೂ (ತಡೆಗೋಡೆ) ಬದಿಗಳಿಗಿಂತ ಎತ್ತರದಲ್ಲಿ ಪಿಲ್ಲರ್‌ಗಳನ್ನು ಹಾಕಿ ಅದರ ಮೇಲೆ ಸ್ಲ್ಯಾಬ್ ಮೇಲೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಕಟ್ಟಡದ ಬುಡದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಾ ಬಂದಿದ್ದರಿಂದ ಇಲ್ಲಿಯವರೆಗೂ ಈ ಅತಿಕ್ರಮಣ ಬಗ್ಗೆ ಯಾರೂ ಚೆಕಾರ ಎತ್ತಿಲ್ಲ.
ಕಣ್ಣುಮುಂದೆ ಕಾಣುತ್ತಿದೆ
ರಾಜಕಾಲುವೆ ಅತಿಕ್ರಮಣ ಅವಳಿ ನಗರದ ಒಂದು ಮೊಲೆಯಲ್ಲಿ ನಡೆದಿಲ್ಲ. ಹೃದಯ ಭಾಗದಲ್ಲಿಯೇ ಅತಿಕ್ರಮಣ ನಡೆದಿದ್ದು, ಸದ್ಯ ತರಕಾರಿ ಮಾರುಕಟ್ಟೆಗೆ ತೆರಳುವ ಮುಖ್ಯ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿ ನಡೆದಿದ್ದು, ಮಾರುಕಟ್ಟೆ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಕಾಲುವೆ ಹಾಯ್ದು ಹೋಗಿದೆ, ಅದು ಅತಿಕ್ರಮಣವಾಗಿದೆ ಎನ್ನುವುದು ನಗರಸಭೆ, ಜಿಲ್ಲಾಡಳಿತಕ್ಕೆ ಗೊತ್ತಿದ್ದರೂ ಜಾಣ ಕುರುಡತನ ಪ್ರದರ್ಶಿಸುತ್ತಿದ್ದು, ಪರಿಹಾರ ದೊರೆಯುತ್ತದೆಯೋ ದೇವರೇ ಬಲ್ಲ.
ಪ್ರಭಾವಿಗಳ ಶಾಮೀಲು ಶಂಕೆ
ಅವಳಿ ನಗರದಲ್ಲಿ ನಡೆದಿರುವ ರಾಜಕಾಲುವೆಗಳ ಅತಿಕ್ರಮಣದ ವಿಷಯದಲ್ಲಿ ಹಲವಾರು ಪ್ರಭಾವಿಗಳ ಕೈವಾಡವಿರುವ ಶಂಕೆ ಇದೆ. ಅದಕ್ಕಾಗಿಯೇ ಅವರೆಲ್ಲ ರಾಜಾರೋಷವಾಗಿ ಲಕ್ಷಾಂತರ ಹಣ ಖರ್ಚು ಮಾಡಿ ಕಟ್ಟಡ ನಿರ್ಮಿಸಿ, ಅಲ್ಲಿಯೇ ವಾಸಿಸುತ್ತಿದ್ದಾರೆ. ಈ ಬಗ್ಗೆ ಯಾರು ಏನೇ ಕೇಳಿದರೂ, ರಾಜಕಾಲುವೆಯ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳ ಕುರಿತು ಸಮೀಕ್ಷೆ ನಡೆಸುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ನಗರಸಭೆಯ ಅಧಿಕಾರಿಯೋರ್ವರು 'ಕನ್ನಡಪ್ರಭಕ್ಕೆ' ತಿಳಿಸಿದರು.


 ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.