ಆಸರೆ ನೀಡಿದವರ ಮಗಳನ್ನೇ ಮದುವೆಯಾದ
ಗದಗ: ಆಸರೆ ನೀಡಿದವರ ಮನೆಯ ಮಗಳನ್ನೇ ಮದುವೆಯಾದ ಪ್ರಸಂಗವೊಂದು ನಗರದಲ್ಲಿ ಜರುಗಿದ್ದು, ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಮೊದಲು ಅಣ್ಣ ತಂಗಿಯಂತೆ ಇದ್ದವರು ಏಕಾಏಕಿ ನಾಪತ್ತೆಯಾಗಿ ಬುಧವಾರ ಸತಪತಿಗಳಾಗಿ ಪ್ರತ್ಯಕ್ಷರಾಗಿದ್ದಾರೆ. ಮದುವೆಯಾಗಿ ಮರಳಿ ಬಂದವರನ್ನು ಹುಡುಗಿ ಮನೆಯವರು ಗದಗ ರೇಲ್ವೆ ನಿಲ್ದಾಣದಲ್ಲಿಯೇ ಥಳಿಸಿದ ಘಟನೆಯೂ ನಡೆದಿದೆ.
ಘಟನೆ ವಿವರ: ಅವಳಿ ನಗರದ (ಬೆಟಗೇರಿ) ಯುವಕ ದಿಲೀಪ್ಸಿಂಗ್ ಎನ್ನುವ ವ್ಯಕ್ತಿ ಹೆಸ್ಕಾಂ ಇಲಾಖೆಯಲ್ಲಿ ನೌಕರನಾಗಿದ್ದು, ಈತನು ಚಿತ್ರದುರ್ಗ ತಾಲೂಕು ತಳಕೆ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದ. ಅದೇ ಹೆಸ್ಕಾಂ ಇಲಾಖೆಯಲ್ಲಿ ಕಿರಿಯ ಅಭಿಯಂತರಾಗಿ ಸೇವೆ ಸಲ್ಲಿಸುತ್ತಿದ್ದ ತಿಪ್ಪೇಸ್ವಾಮಿ ಎನ್ನುವವರಿಗೆ ಪರಿಚಯವಾಗಿ ಅವರ ಮನೆಯಲ್ಲಿಯೇ ಆಶ್ರಯ ಪಡೆದಿದ್ದು, ಅವರೂ ಕೂಡಾ ಇವನನ್ನು ಮನೆ ಮಗನಂತೆಯೇ ನೋಡಿಕೊಳ್ಳುತ್ತಿದ್ದರು. ತಿಪ್ಪೇಸ್ವಾಮಿಯವರ ಮಗಳು ರಶ್ಮಿ ಹಾಗೂ ದಿಲೀಪ್ಸಿಂಗ್ ಅಣ್ಣ ತಂಗಿಯಂತೆ ಜೀವನ ಸಾಗಿಸುತ್ತಿದ್ದರು. ಆದರೆ, ತಿಪ್ಪೇಸ್ವಾಮಿಯವರ ಅಣ್ಣ (ರಶ್ಮಿಯ ದೊಡ್ಡಪ್ಪ ಹಾಗೂ ದೊಡ್ಡಮ್ಮ) ರಶ್ಮಿ ಹಾಗೂ ದಿಲೀಪ್ಸಿಂಗ್ ನಡುವೆ ಅಕ್ರಮ ಸಂಬಂಧವಿದೆ ಎಂದು ಊರೆಲ್ಲ ಹೇಳಿದ್ದರಂತೆ, ಇದರಿಂದ ಮನನೊಂದ ರಶ್ಮಿ ಅಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಗ, ಇದೇ ದಿಲೀಪ್ಸಿಂಗ್ ಅವಳಿಗೆ ಸಾಂತ್ವನ ಹೇಳಿ ಬದುಕುವ ಧೈರ್ಯ ತುಂಬಿದ್ದೇ ಇವರ ಮಧ್ಯೆ ಪ್ರೇಮಾಂಕುರವಾಗಲು ಕಾರಣವಾಗಿ ಈಗ ಮದುವೆ ಮಾಡಿಕೊಂಡಿದ್ದೇವೆ ಎನ್ನುವುದು ಮದುವೆಯಾಗಿರುವ ರಶ್ಮಿಯ ಹೇಳಿಕೆಯಾಗಿದೆ.
ಶಿರಡಿಯಲ್ಲಿ ಮದುವೆ: ಈ ಪ್ರಕರಣಕ್ಕೆ ನಿಜವಾದ ತಿರುವು ಬಂದಿದ್ದು ಕಳೆದ ಒಂದು ವಾರದ ಹಿಂದಷ್ಟೇ. ಇವರಿಬ್ಬರೂ ಮನೆಯಿಂದ ನಾಪತ್ತೆಯಾದಾಗ ವಿಷಯ ಹೊರಬಿದ್ದಿದೆ. ಅಂದು ನಾಪತ್ತೆಯಾಗಿದ್ದ ಇವರು ಶಿರಡಿಗೆ ತೆರಳಿ ವಿವಾಹ ಮಾಡಿಕೊಂಡು ಬುಧವಾರ ರೇಲ್ವೆ ಮೂಲಕ ಗದುಗಿಗೆ ಆಗಮಿಸಿದ್ದಾರೆ. ಅವರು ಗದುಗಿಗೆ ಆಗಮಿಸುತ್ತಿರುವ ಮಾಹಿತಿ ಚಿತ್ರದುರ್ಗದಲ್ಲಿರುವ ಕುಟುಂಬಕ್ಕೆ ಲಭ್ಯವಾಗುತ್ತಿದ್ದಂತೆ ಬೆಳಗ್ಗೆಯೇ ರೇಲ್ವೆ ನಿಲ್ದಾಣಕ್ಕೆ ಆಗಮಿಸಿ, ದಿಲೀಪ್ಸಿಂಗ್ ಹಾಗೂ ರಶ್ಮಿಯನ್ನು ಚೆನ್ನಾಗಿ ಥಳಿಸಿದ್ದಾರೆ. ಇದಕ್ಕೆ ಹುಡುಗಿ ಕಡೆಯವರು ಕೊಡುವ ಕಾರಣವೆಂದರೆ ಆ ಹುಡುಗನಿಗೆ ಮೊದಲೇ ಮದುವೆಯಾಗಿದೆ. ಅವನನ್ನು ಬಿಟ್ಟು ಬಾ, ಮರಳಿ ನಮ್ಮ ಮನೆಗೆ ಹೋಗೋಣ ಎಂದರೂ ರಶ್ಮಿ ಮಾತ್ರ ಬರುವುದಿಲ್ಲ ಎಂದು ಹೇಳಿದ್ದರಿಂದ ಹುಡುಗಿಯ ಕಡೆಯವರಿಗೆ ತೀವ್ರ ನಿರಾಸೆಯಾಗಿದೆ. ಇಷ್ಟೆಲ್ಲಾ ಗೊಂದಲ ಗದಗ ರೇಲ್ವೆ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದಿದ್ದರಿಂದ ನೋಡಿದವರು ದಂಗಾಗುವಂತಾಗಿತ್ತು. ಆದರೆ ಕೊನೆಗೆ ಎರಡೂ ಕುಟುಂಬದವರು ಸೇರಿ ನಾವು ಈ ಕುರಿತು ಠಾಣೆಗೆ ಯಾವುದೇ ದೂರು ನೀಡುವುದಿಲ್ಲ. ನಮ್ಮ ನಮ್ಮಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೊರನಡೆದು ಹೋದದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

