ಗದಗ

ತರಕಾರಿ ಮಾರುಕಟ್ಟೆಗೆ ಆಗ್ರಹಿಸಿ ಪ್ರತಿಭಟನೆ

Published On :

ಗಜೇಂದ್ರಗಡ: ಸ್ಥಳೀಯ ಕಾಯಿಪಲ್ಲೆ ವ್ಯಾಪಾರಸ್ಥರಿಗೆ ಪ್ರತ್ಯೇಕ ಮಾರುಕಟ್ಟೆ ನೀಡಿ, ಹಂದಿ, ಬಿಡಾಡಿ ದನಗಳ ಉಪಟಳದಿಂದ ಮುಕ್ತಗೊಳಿಸಿ ಎಂದು ಆಗ್ರಹಿಸಿ ತರಕಾರಿ ವ್ಯಾಪಾರಸ್ಥರು ಗುರುವಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಸ್ಥ ಅಲ್ಲಾಭಕ್ಷಿ ಗೊಡೇಕಾರ ಮಾತನಾಡಿ, 20 ವರ್ಷದಿಂದ ಪಟ್ಟಣದ ದುರ್ಗಾವೃತ್ತ, ಜೋಡು ರಸ್ತೆಗೆ ಹೊಂದಿಕೊಂಡ ಸಿದ್ಧಾರೂಢ ಮಠಕ್ಕೆ ಸಂಚರಿಸುವ ರಸ್ತೆ ಮೇಲೆ ಕಾಯಿಪಲ್ಲೆ ಮಾರಾಟ ಮಾಡಲಾಗುತ್ತಿದೆ. ಆದರೆ, ಬಿಡಾಡಿ ದನಗಳು ಹಾಗೂ ಹಂದಿಗಳ ಉಪಟಳದಿಂದ ತರಕಾರಿ ಮಾರಾಟಗಾರರಿಗೆ ತೀವ್ರ ತೊಂದರೆಯಾಗಿದೆ ಎಂದರು. ಆರ್.ಸಿ. ಬಾಗಮಾರ ಮಾತನಾಡಿ, ಪ್ರತ್ಯೇಕ ಕಾಯಿಪಲ್ಲೆ ಮಾರುಕಟ್ಟೆಗಾಗಿ 2 ದಶಕದಿಂದ ಸ್ಥಳೀಯ ಶಾಸಕರಿಗೆ, ಪುರಸಭೆ ಮುಖ್ಯಾಧಿಕಾರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಿತ್ಯ ಇಕ್ಕಟ್ಟಿನ ಜಾಗದಲ್ಲಿ ಮತ್ತು ರಸ್ತೆಯ ಬದಿ ಹಾಗೂ ರಸ್ತೆಯ ಮೇಲೆಯೇ ವ್ಯಾಪಾರ ಮಾಡುವ ದುಸ್ಥಿತಿಯಲ್ಲಿದ್ದೇವೆ. ನಿತ್ಯ ವಾಹನ ಸವಾರರಿಂದ, ಪ್ರಯಾಣಿಕರಿಂದ ಬೈಯಿಸಿಕೊಂಡು ವ್ಯಾಪಾರ ಮಾಡುವ ಅನಿವಾರ್ಯತೆ ಉಂಟಾಗಿದೆ. ನೂರಾರು ಬಿಡಾಡಿ ದನಗಳು, ಹಂದಿಗಳು ಏಕಾಏಕಿ ಕಾಯಿಪಲ್ಲೆ ಬುಟ್ಟಿಗೆ ಬಾಯಿ ಹಾಕಿ ನಷ್ಟ ಮಾಡುತ್ತವೆ. ಇವುಗಳನ್ನು ಓಡಿಸಲು ಕಟ್ಟಿಗೆ ಉಪಯೋಗಿಸಿದರೆ ಅದರ ಮಾಲೀಕರು ಜಗಳಕ್ಕೆ ಮುಂದಾಗುತ್ತಾರೆ. ಜತೆಗೆ ಹಣ ನೀಡಿ ಎಂದು ಧಮುಕಿ ಹಾಕುತ್ತಾರೆ ಎಂದು ದೂರಿದ ಅವರು, ಪುರಸಭೆ ಅಧಿಕಾರಿಗಳು ಒಂದು ಅಂಗಡಿಯಿಂದ ಪ್ರತಿದಿನ ರು. 3 ಕರ ವಸೂಲಿ ಮಾಡಬೇಕೆನ್ನುವ ಟೆಂಡರ್ ಆದೇಶವಿದೆ. ಇದರ ಹೊರತಾಗಿಯೂ ಪ್ರತಿ ಅಂಗಡಿಯಿಂದ ರು. 10, 20 ರವರೆಗೆ ಕರವಸೂಲಿ ಮಾಡುತ್ತಾರೆ. ಇದನ್ನು ಪ್ರಶ್ನಿಸಿದರೆ ಅಂಗಡಿ ಇಡಲು ತೊಂದರೆ ಮಾಡುತ್ತಾರೆ ಎಂದರು. ಬಳಿಕ ಸ್ಥಳೀಯ ಠಾಣೆಯ ಪಿಎಸ್‌ಐ ಎಸ್.ಎಚ್. ನಡುಗಡ್ಡಿ ಹಾಗೂ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿದರು. ಕೆ.ಡಿ. ಕಟ್ಟಿಮನಿ, ಬಾಬು ಗೊಲಗೇರಿ, ಮಹ್ಮದ ಬಾಗವಾನ, ಆರ್.ಎಚ್. ಚಾಮಲಾಪುರ, ಎಂ.ಎಸ್. ಗೊಲಗೇರಿ, ದಾವಲಸಾಬ ಹಿರೇಹಾಳ, ನಾಗರಾಜ ಬಳಿಗೇರ, ಎಸ್.ಸಿ. ಬಾಗಮಾರ, ಡಿ.ಎಚ್. ಹಿರೇಹಾಳ, ಎಂ.ಎಚ್. ಕಟ್ಟಿಮನಿ, ಮಹಾಂತೇಶ ಪವಾರ, ಇಮಾಂಬಿ ಚಾಮಲಾಪುರ, ಇಮ್ಮವ್ವ ಜಾಲಿಹಾಳ, ಮಲಕಮ್ಮ ಕಟ್ಟಿಮನಿ, ಮಕ್ತುಂಬಿ ಹಿರೇಹಾಳ, ಬಾಷು ಕಂದಗಲ್, ಆರ್.ಟಿ ಚಾಮಲಾಪುರ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.