ಗದಗ

ಕಿತ್ತು ಹೋದ ಸೇತುವೆಗಿಲ್ಲ ದುರಸ್ತಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ನ. 22  
ತಾಲೂಕಿನ ಅರಿಷಿಣಗೋಡಿ, ಹಿರೇಕೊಪ್ಪ, ಕುರಗೋವಿನಕೊಪ್ಪ ಗ್ರಾಮಗಳ ಜನತೆ ಪ್ರತಿ ದಿನ ನರಗುಂದಕ್ಕೆ ಬಂದು ಹೋಗಬೇಕೆಂದರೆ ಜೀವ ಭಯದಲ್ಲಿಯೇ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಅರಿಷಿಣಗೋಡಿ ಪಕ್ಕದ ದೊಡ್ಡಹಳ್ಳದ ಸೇತುವೆ ಮಳೆಗೆ ಕಿತ್ತು ಹೋಗಿ ಹಲವಾರು ತಿಂಗಳುಗಳೇ ಕಳೆದು ಹೋಗಿವೆ. ಆದರೆ, ಅಧಿಕಾರಿಗಳು ಮಾತ್ರ ಗಮನ ನೀಡದೇ ಇರುವುದರಿಂದ ಈ ದುಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದೇ ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಇಲ್ಲಿನ ಜನತೆಗೆ ಬೇಸರ ಮೂಡಿಸಿದೆ.
ಪ್ರಸಕ್ತ ಸಾಲಿನ ಮಳೆಗಾಲದಲ್ಲಿನ ನೀರಿನ ರಭಸಕ್ಕೆ ಕಿತ್ತು ಹೋದ ಸೇತುವೆ ಇಂದಿಗೂ ಅದೇ ಸ್ಥಿತಿಯಲ್ಲಿಯೇ ಇದೆ. ಈ ಎಲ್ಲ ಗ್ರಾಮಸ್ಥರು ಪ್ರತಿ ದಿನ ಈ ಕಿತ್ತು ಹೋದ ಸೇತುವೆ ಮೇಲೆಯೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ವಾಹನ ದಾಟುವಾಗಲೂ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಸ್ವಲ್ಪ ಆಯ ತಪ್ಪಿದರೂ ಹಳ್ಳದಲ್ಲಿ ಬೀಳುವುದು ಖಚಿತ. ಈ ಬಗ್ಗೆ ಮೂರು ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಗೆ ಅಧಿಕಾರಿಗಳಿಗೆ ಕೂಡಲೇ ಇದನ್ನು ದುರಸ್ತಿಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕೇವಲ ಕಾಟಾಚಾರಕ್ಕೆನ್ನುವಂತೆ ಸಣ್ಣ ಸಣ್ಣ ಚೀಲದಲ್ಲಿ ಮಣ್ಣು ಹಾಗೂ ಮರಳು ತುಂಬಿ ಹಾಕಿ ಕೈ ತೊಳೆದುಕೊಂಡಿದ್ದು, ಇಂದಿಗೂ ಜನತೆ ಜೀವ ಕೈಯಲ್ಲಿ ಹಿಡಿದುಕೊಂಡು, ಆಡಳಿತ ವರ್ಗಕ್ಕೆ ಹಿಡಿಶಾಪ ಹಾಕುತ್ತಾ ಅದೇ ಚೀಲಗಳ ಮೇಲೆಯೇ ಸಂಚರಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಪರದಾಟ: ತಾಲೂಕಿನ ಕುರುಗೋವಿನಕೊಪ್ಪ ಗ್ರಾಮವು ಜಿಲ್ಲೆಯ ಕೊನೆಯ ಗ್ರಾಮವಾಗಿದ್ದು, ಪಕ್ಕದಲ್ಲಿಯೇ ಬೆಳಗಾವಿ ಜಿಲ್ಲೆಗೆ ಹೊಂದಿಕೊಂಡಿದೆ. ಈ ಗ್ರಾಮದ ಪ್ರತಿ ದಿನ ನೂರಾರು ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸೇತುವೆ ಸರಿಯಾಗಿಲ್ಲದೇ ಇರುವುದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಇದರಿಂದ ಅಲ್ಲಿನ ಮಕ್ಕಳು ಪಕ್ಕದ ರಾಮದುರ್ಗ ತಾಲೂಕಿನ ಸುರೇಬಾನಕ್ಕೆ ಹೋಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಅವರ ಭವಿಷ್ಯದ ಸಂದರ್ಭದಲ್ಲಿ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಓದಿರುವ ಕುರಿತು ತೊಂದರೆಯಾಗಲಿದೆ ಎನ್ನುವ ಅಭಿಪ್ರಾಯ ಗ್ರಾಮಸ್ಥರದ್ದಾಗಿದೆ. ಕೂಡಲೇ ಬ್ರಿಡ್ಜ್ ದುರಸ್ತಿ ಮಾಡಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವತ್ತ ಗಮನ ನೀಡಬೇಕಿದೆ.
ಅಧಿಕಾರಿಗಳು ಗಮನ ನೀಡಲಿ: ಕೇವಲ ಮಕ್ಕಳು ಮಾತ್ರವಲ್ಲ, ತಮ್ಮ ನಿತ್ಯ ಕೆಲಸಕ್ಕಾಗಿ ತಾಲೂಕು ಕೇಂದ್ರವಾದ ನರಗುಂದವನ್ನು ಆಶ್ರಯಿಸುವುದು ಈ ಗ್ರಾಮಸ್ಥರಿಗೆ ಅನಿವಾರ್ಯ. ವ್ಯಾಪಾರ ವಹಿವಾಟಿಗಾಗಿ ಅವರು ಬೇರೆ ನಗರ ಪಟ್ಟಣಕ್ಕೆ ತೆರಳಿದರೂ, ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಕ್ಕೂ ನರಗುಂದಕ್ಕೆ ಬರಬೇಕಾಗುತ್ತದೆ. ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಈ ಕುರಿತು ತಕ್ಷಣವೇ ಕ್ರಮ ತೆಗೆದುಕೊಂಡು ಕಿತ್ತು ಹೋಗಿರುವ ಸೇತುವೆಯನ್ನು ಕೂಡಲೇ ದುರಸ್ತಿಗೊಳಿಸಬೇಕು ಎನ್ನುವುದು ಇಲ್ಲಿನ ಎಲ್ಲ ಜನರ ಆಗ್ರಹವಾಗಿದೆ.


ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.