ಗಜೇಂದ್ರ್ರಗಡ ಪುರಸಭೆಯಲ್ಲಿ ಅವ್ಯವಹಾರ: ಆರೋಪ
ಗಜೇಂದ್ರಗಡ: ಸ್ಥಳೀಯ ಪುರಸಭೆ ಆಡಳಿತ ಟೆಂಡರ ಪ್ರಕ್ರಿಯೆ ನಡೆಸದೇ ಸರ್ಕಾರದ ನಿಯಮ ಗಾಳಿಗೆ ತೂರಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಎಸ್.ಎಂ. ಅರಗಿದ್ದಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುರಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದೆ. 2013 ಮಾರ್ಚ್ ಅಂತ್ಯಕ್ಕೆ ಮುಗಿದಿರುವ ಎಲ್ಲ ಟೆಂಡರ್ ಪ್ರಕ್ರಿಯೆಗೆ ಮರು ಟೆಂಡರ್ ಕರೆಯದೇ ಒಳಗೊಳಗೆ ತಮಗೆ ಬೇಕಾದವರಿಗೆ ಕಾಮಗಾರಿ ಆದೇಶ ನೀಡಿ ಸಾರ್ವಜನಿಕರ ತೆರಿಗೆ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ದೂರಿದರು. ಪಟ್ಟಣದ ಸಾರ್ವಜನಿಕ ಶೌಚಾಲಯ, ಬೀದಿ ದೀಪ ನಿರ್ವಹಣೆ ಮತ್ತು ಕಸ ವಿಲೇವಾರಿ ಸೇರಿ 3 ವಿಭಾಗಗಳ ನಿರ್ವಹಣೆ ನಿರ್ವಹಿಸುತ್ತಿದ್ದ ಸ್ಥಳೀಯ ಉಮಾಮಹೇಶ್ವರಿ ಇಲೆಕ್ಟ್ರಿಕಲ್ ಇವರ ಗುತ್ತಿಗೆ ಅವಧಿ 2013 ಮಾರ್ಚ್ ಅಂತ್ಯಕ್ಕೆ ಕೊನೆಗೊಂಡಿದ್ದರೂ. ಮತ್ತೆ ಟೆಂಡರ್ ಕರೆಯದೇ ಮರಳಿ ಇವರಿಗೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.
ಪುರಸಭೆ ದಾಖಲೆಯಲ್ಲಿ 13 ಸಾರ್ವಜನಿಕ ಶೌಚಾಲಯಗಳಿದ್ದು, ಪ್ರಸ್ತುತ ಕೇವಲ 5 ರಿಂದ 6 ಶೌಚಾಲಯಗಳು ಮಾತ್ರ ಸಾರ್ವಜನಿಕರ ಬಳಕೆಯಲ್ಲಿವೆ. ಆದರೆ 13 ಶೌಚಾಲಯಗಳಿಗೆ ಪ್ರತಿ ತಿಂಗಳು ರು. 84 ಸಾವಿರ ಖರ್ಚು ಮಾಡಲಾಗುತ್ತಿದೆ. ಪಟ್ಟಣದ ಹೃದಯ ಭಾಗದ ಜೋಡು ರಸ್ತೆಗೆ ಅಳವಡಿಸಿರುವ ಬೀದಿ ದೀಪ ಸೇರಿ ಎಲ್ಲ ಬಡಾವಣೆಗಳ ಬೀದಿ ದೀಪಗಳ ನಿರ್ವಹಣೆಗಾಗಿ ಪ್ರತಿ ತಿಂಗಳು ರು. 77 ಸಾವಿರ ಮಾಡಲಾಗತ್ತಿದ್ದು ಇದರಲ್ಲಿಯೂ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಸ್ಥಳೀಯ ಎಲ್ಲ ಬಡಾವಣೆಗಳ ಕಸ ವಿಲೇವಾರಿಗಾಗಿ ಪುರಸಭೆಯಿಂದ ರು. 84 ಸಾವಿರ ಖರ್ಚು ಮಾಡಲಾಗುತ್ತಿದೆ ಎನ್ನುವ ಅಧಿಕಾರಿಗಳ ಹೇಳಿಕೆ ಹಾಸ್ಯಾಸ್ಪದ. ಮತ್ತೊಂದು ಆಘಾತಕಾರಿ ವಿಷಯವೆಂದರೆ ಪಟ್ಟಣದ ಗುಡ್ಡದ ಬಳಿ ಪುರಸಭೆ ವತಿಯಿಂದ ನಿರ್ಮಿಸಿರುವ ಉದ್ಯಾನವನ ನಿರ್ವಹಣೆಗೆ ಪ್ರತಿ ತಿಂಗಳು ರು. 85 ಹಣ ಖರ್ಚು ಮಾಡಲಾಗುತ್ತಿದೆ. ಈ ಎಲ್ಲ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನೀಡದಿರುವುದು ಖಂಡನೀಯ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ ಮಾತನಾಡಿ, ಪುರಸಭೆಯಲ್ಲಿನ ಅವ್ಯವಹಾರಗಳ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಪೌರಾಡಳಿತ ನಿಯಮಾವಳಿ ಗಾಳಿಗೆ ತೂರಿದ ಸ್ಥಳೀಯ ಪುರಸಭೆ ಆಡಳಿತ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದರು. ಶ್ರೀಕಾಂತ ಅವಧೂತ್, ಎಫ್.ಎಸ್. ಕರಿದುರಗನವರ, ಮಾರುತಿ ಕಲ್ಲೋಡ್ಡರ, ಶಶಿಧರ ವಕ್ಕಲರ, ಶರಣಪ್ಪ ಕೊಟಗಿ, ಷಣ್ಮುಕಪ್ಪ ನಿಡಗುಂದಿ, ಕೊಟ್ರೇಶ ಚಿಲಕಾ, ಯಂಕಣ್ಣ ಸೊನ್ನದ, ಉಮೇಶ ರಾಠೋಡ, ಶ್ರೀಧರ ಗಂಜಿಗೌಡ್ರ, ದಾದು ಹಣಗಿ, ಹಸನ ತಟಗಾರ, ಶ್ರೀಕಾಂತ ತಾಳಿಕೋಟಿ, ಮುತ್ತಣ್ಣ ಲಕ್ಕಲಕಟ್ಟಿ, ಹನುಮಂತಪ್ಪ ಕಲ್ಲೊಡ್ಡರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

