ಏಕರೂಪ ಶಿಕ್ಷಣ ನೀತಿ ಜಾರಿಯಾಗಲಿ
ಗದಗ: ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಯಾದಾಗ ಮಾತ್ರ ರಾಜ್ಯ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಈಶಪ್ಪ ನಾಯ್ಕರ ಹೇಳಿದರು.
ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಜಯಕರ್ನಾಟಕದ ಶಿಕ್ಷಣ ತೇರಿಗೆ ಚಾಲನೆ ನೀಡಿ ಮಾತನಾಡಿದರು.
ನಾಡಿನ ಅಭಿವೃದ್ಧಿ ಮತ್ತು ಸಮ-ಸಮಾಜದ ಸೃಷ್ಟಿಗೆ ಶಿಕ್ಷಣ ಅತೀ ಅವಶ್ಯಕ. ಈ ಶಿಕ್ಷಣ ಇಂದು ಕೆಲವರ ಲಾಭಕ್ಕಾಗಿ ಖಾಸಗೀಕರಣ, ವ್ಯಾಪಾರೀಕರಣವಾಗುತ್ತಿದೆ. ಈಗಿನ ಶಿಕ್ಷಣ ಪದ್ಧತಿಯು ಅಸಮಾನತೆ ಹಾಗೂ ತಾರತಮ್ಯದ ಮಹಾಕೂಪವಾಗಿದೆ. ಬಡಮಕ್ಕಳು ಮಾತೃಭಾಷಾ ಮಾಧ್ಯಮದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರೆ, ಶ್ರೀಮಂತರ ಮಕ್ಕಳು ಆಂಗ್ಲಭಾಷಾ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಜಗತ್ತಿನ ಅನೇಕ ಶಿಕ್ಷಣ ತಜ್ಞರು ಪ್ರತಿಪಾದಿಸುವಂದೇನೆಂದರೆ ಎಲ್ಲ ಮಕ್ಕಳು ತಮ್ಮ ನೆರೆಹೊರೆಯ ಸಮಾನ ಶಾಲೆಗಳಲ್ಲಿ ಮಾತೃಭಾಷಾ ಮಾಧ್ಯಮದ ಮೂಲಕ ಸಮಾನ ಗುಣಮಟ್ಟದ ಶಿಕ್ಷಣ ಪಡೆದರೆ ಮಾತ್ರ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅದು ಕಷ್ಟಸಾಧ್ಯ ಎಂದು ತಿಳಿಸಿದ್ದಾರೆ. ಇಂದು ಶಿಕ್ಷಣ ಮಾರಾಟದ ವಸ್ತುವಾಗಿದ್ದು, ದಿನದಿಂದ ದಿನಕ್ಕೆ ವೇಗವಾಗಿ ಖಾಸಗೀಕರಣವಾಗುತ್ತಿದೆ. ಗುಣಮಟ್ಟದ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ ಎಂದರು.
ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಭೇದ-ಭಾವ ಇರಬಾರದು. ಶ್ರೀಮಂತರಿಗೊಂದು, ಬಡವರಿಗೊಂದು ವಿದ್ಯೆಯ ಮಾದರಿ ಇರಬಾರದು. ಲೋಕಗ್ರಹಿಕೆಯಲ್ಲಿ ಸಮಾನಭಾವ ಸಾಧ್ಯವಾದಾಗ ಮಾತ್ರ ಎಲ್ಲರೂ ಎಲ್ಲರನ್ನೂ ಪ್ರೀತಿಸಲು, ಗೌರವಿಸಲು ಸಾಧ್ಯವಾಗುತ್ತದೆ. ಈ ವಿಚಾರವಾಗಿ ನಮ್ಮ ಸಂಘಟನೆಯು ಕಳೆದ 2 ವರ್ಷದಿಂದ ವಿಚಾರ ಸಂಕಿರಣವನ್ನು ನಡೆಸಿ ಸಾರ್ವಜನಿಕರ ಅಭಿಪ್ರಾಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹಾಗೂ ಹಲವಾರು ಬುದ್ದಿ ಜೀವಿಗಳು, ಸಾಹಿತಿಗಳು, ಚಿಂತಕರು, ಬರಹಗಾರರ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆದು ಒಂದು ಹಂತದಲ್ಲಿ ಮನವಿ ಸಲ್ಲಿಸಲಾಗುತ್ತಿದೆ.
ಹಕ್ಕೊತ್ತಾಯಗಳು: ರಾಜ್ಯದಲ್ಲಿ ಏಕರೂಪ ಸಮಾನ ಶಿಕ್ಷಣ ನೀತಿ, ಸಮಾನ ಶಾಲೆಗಳು ಜಾರಿಯಾಗಬೇಕು. ರೈತರ ಹಿತದೃಷ್ಟಿಗೆ ಪೂರಕವಾಗಿ ಪ್ರೌಢಶಿಕ್ಷಣದ ಹಂತದಿಂದ ಕೃಷಿ ಪಠ್ಯಕ್ರಮ ಅಳವಡಿಸಬೇಕು. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಾದ ಆಟದ ಮೈದಾನ, ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ಸುಸಜ್ಜಿತ ಕೊಠಡಿ, ಶೌಚಾಲಯಗಳನ್ನು ಒದಗಿಸುವುದು. ಪ್ರಾಥಮಿಕ ಹಂತದಿಂದಲೇ ಪ್ರತಿಯೊಂದು ಪಠ್ಯಕ್ರಮದ ಅನುಗುಣವಾಗಿ ನುರಿತ ಶಿಕ್ಷಕರನ್ನು ನೇಮಸಬೇಕು ಎಂದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಏಕರೂಪ ಸಮಾನ ಶಿಕ್ಷಣದ ತೇರಿನ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಂತರ ಸಂಘಟನೆಯಿಂದ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ ಚೌಹಾಣ್, ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಕವಲೂರು, ರಮೇಶ ಆನವಟ್ಟಿ, ಅಪ್ಪಣ್ಣ ಓಲೇಕಾರ, ಕೆ.ಎಸ್. ಮಕಾಂದಾರ, ನಾಗರಾಜ, ನೀಲಮ್ಮ ಪಾಟೀಲ, ರವಿಕಾಂತ ಅಂಗಡಿ, ಐ.ಎಸ್.ಪೂಜಾರ, ರಾಠೋಡ, ನಾಗಲಿಂಗ ಐಲಿ ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

