ಸ್ವಗ್ರಾಮದಲ್ಲೇ ಅನಾಥಳಾದ ಅಜ್ಜಿ
ಕನ್ನಡಪ್ರಭ ವಾರ್ತೆ, ರೋಣ, ನ. 25
ಸಂಬಂಧಿಕರು, ಬಂಧು-ಬಳಗ ಎಲ್ಲರೂ ಇದ್ದು, ಇಲ್ಲದಂತೆ ಒಂದೊತ್ತಿನ ಊಟಕ್ಕೂ ಗತಿಯಿಲ್ಲದೆ ಅನಾರೋಗ್ಯ ಪೀಡಿತಳಾಗಿ 2 ವಾರದಿಂದ ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ 68 ವಯಸ್ಸಿನ ವೃದ್ಧೆ ಸಾವು ಬದುಕಿನೊಂದಿಗೆ ನರಳಾಡುತ್ತಿದ್ದಾಳೆ.
ಹೌದು, ಸಂಗನಬಸವ್ವ ಪಟ್ಟೇದ ಎಂಬ ಅಜ್ಜಿಗೆ ಅಣ್ಣಂದಿರು, ಅಳಿಯಂದಿರು ಇದೇ ಗ್ರಾಮದಲ್ಲಿಯೇ ಇದ್ದಾರೆ. ಆದರೆ, ಅವರ್ಯಾರು ಇವಳತ್ತ ಗಮನ ಹರಿಸುತ್ತಿಲ್ಲ. 12 ವರ್ಷ ಹಿಂದೆ ಅವಳ ಅಣ್ಣಂದಿರೇ ಅಜ್ಜಿಯನ್ನು ಮನೆಯಿಂದ ಹೊರ ಹಾಕಿದ್ದಾರೆ. ಗ್ರಾಮದ ಮನೆ ಮನೆಗೆ ಹೋಗಿ ಬೇಡಿ ತಿನ್ನುತ್ತಿದ್ದಳು. ಕಲವೊಮ್ಮೆ ಶಾಲೆಯಲ್ಲಿನ ಮಧ್ಯಾಹ್ನದ ಬಿಸಿಯೂಟ ಮಾಡಿ ಬದುಕುತ್ತಿದ್ದಳು. ಒಂದು ತಿಂಗಳ ಹಿಂದೆ ಎಡಗಾಲಿನ ಕಿರು ಬೆರಳಿಗೆ ಗಾಯವಾಗಿದ್ದು, ಅದು ನಂಜಾಗಿ ಗಾಯ ವಾಸಿಯಾಗದೇ ಕಿರು ಬೆರಳು ತುಂಡಾಗಿದ್ದು, ಗಾಯವಾದ ಸ್ಥಳದಲ್ಲಿಂದ ಹುಳುಗಳು ಹೊರಬರುತ್ತಿವೆ. ಇದರಿಂದ ಈ ವೃದ್ಧ ಜೀವಕ್ಕೆ ನಡೆಯಲಾಗುತ್ತಿಲ್ಲ.
ಆದೇಶ ಉಲ್ಲಂಘನೆ: ಹಸಿವು ಮತ್ತು ಅನಾರೋಗ್ಯದಿಂದ ದೇಶದಲ್ಲಿ ಯಾರೂ ಸಾಯಬಾರದು, ಆ ದಿಸೆಯಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಆದರೆ, ಇಲ್ಲಿ ಮಾತ್ರ ಅದು ಅನ್ವಯವಾಗಿಲ್ಲ.
ಹಲವು ದಿನಗಳಿಂದ ವೃದ್ಧೆ ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿಯೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಗಮನ ಹರಿಸಿಲ್ಲ. ಇನ್ನೂ ಗ್ರಾಪಂ ಆಡಳಿತ ಮಂಡಳಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಚಿಕಿತ್ಸೆ ಅಗತ್ಯ: ವೃದ್ಧೆಯ ಎಡಗಾಲಿನ ಗಾಯ ವಾಸಿಯಾಗಲು ತುರ್ತು ಚಿಕಿತ್ಸೆ ಅಗತ್ಯವಿದೆ.
ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆರೋಗ್ಯ ಇಲಾಖೆ ಗಮನ ಹರಿಸಿ, ಇವಳಿಗೆ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ವೃದ್ಧೆ ಹಸಿವು ಮತ್ತು ಗಾಯದ ನೋವಿನಿಂದ ಜೀವಕಳೆದುಕೊಳ್ಳಬಹುದೆಂದು ಆತಂಕದಿಂದ ಚಿಕ್ಕಮಣ್ಣೂರ ಗ್ರಾಮದ ರಮೇಶ ನಾಡಗೌಡ್ರ, ಮೌಲಾಸಾಬ ನದಾಫ, ಬಸವರಾಜ ಕೊಪ್ಪದ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ವೃದ್ಧೆಗೆ ಇಬ್ಬರು ಅಣ್ಣಂದಿರು, ಅಣ್ಣನ ಮಕ್ಕಳು (ಅಳಿಯಂದಿರು) ಇದ್ದಾರ. ಅವರ್ಯಾರು ಇವಳ ಅನಾರೋಗ್ಯ ಕುರಿತು ಗಮನ ಹರಿಸುತ್ತಿಲ್ಲ. ಮನೆಯವರೇ ಉಪಚರಿಸದಿದ್ದರೆ ಹೇಗೆ? ಅನೇಕ ತಿಂಗಳಿಂದ ಗ್ರಾಮಸ್ಥರೇ ವೃದ್ಧೆಗೆ ಆಸರೆಯಾಗಿದ್ದಾರೆ. ಆದರೀಗ ವೃದ್ಧೆಯ ಆರೋಗ್ಯ ಹದಗೆಟ್ಟಿದ್ದು ತುರ್ತು ಚಿಕಿತ್ಸೆ ಅಗತ್ಯವಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವೃದ್ಧೆಯನ್ನು ಯಾವುದಾದರೊಂದು ಅನಾಥಾಶ್ರಮಕ್ಕೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಲ್ಲಿ ಮುಂದಾಗಬೇಕು.
ಟ ಶಿವಾನಂದ ಪಟ್ಟೇದ, ರಾಘವೇಂದ್ರ ಸೋಮನಗೌಡ್ರ
ಚಿಕ್ಕಮಣ್ಣೂರ ಗ್ರಾಮಸ್ಥರು
ವಾರದ ಹಿಂದೆ ಚಿಕ್ಕಮಣ್ಣೂರ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಪಂ ಕಾರ್ಯಾಲಯದಲ್ಲಿದ್ದ ವೃದ್ಧೆಯ ಕುರಿತು ಗ್ರಾಮಸ್ಥರಲ್ಲಿ ವಿಚಾರಿಸಿದೆ. ಆಗ ಯಾವುದಾದರೂ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕುರಿತು ಕೇಳಿದಾಗ, ಈಗ ಬೇಡ ಸರ್ ಅಂದಿದ್ದರಿಂದ ನಾನು ಮುಂದಿನ ಕ್ರಮಕ್ಕೆ ಮುಂದಾಗಲಿಲ್ಲ. ಕೂಡಲೇ ಗ್ರಾಮಕ್ಕೆ ಹೋಗಿ ಮತ್ತೊಮ್ಮೆ ಪರಿಶೀಲಿಸಲಾಗುವುದು. ಗಾಯ ವಾಸಿಯಾಗಲು ಅಗತ್ಯ ಚಿಕಿತ್ಸೆ ಕೊಡಿಸಲಾಗುವುದು. ಅಗತ್ಯಬಿದ್ದಲ್ಲಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.
ನಾನೇನ್ ಮಾಡ್ಬೇಕ್ರಿ. ನನಗಿಂತ ದೊಡ್ಡವ ನಮ್ಮ ಅಣ್ಣ ಮಾಸ್ತರ್ ಆಗಿ ನಿವೃತ್ತಿ ಆಗ್ಯಾನ. ಅವನತ್ರ ಸಾಕಷ್ಟು ಹಣ ಐತಿ, ಅವನೇ ಇವಳ ಬಗ್ಗೆ ತಲಿ ಕೆಡಸಿಕೊಳ್ದ ಸುಮ್ನ ಅದಾನ... ನಾನ್ಯಾಕ ತಲಿ ಕೆಡಿಸಿಕೊಳ್ಳಬೇಕ್ರಿ.
ಈಶಪ್ಪ ಪಟ್ಟೇದ
ವೃದ್ಧೆಯ ಅಣ್ಣ
ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

