ಎಂಇಎಸ್ ಹೇಳಿಕೆ ಖಂಡಿಸಿ ಶವಯಾತ್ರೆ
ಕನ್ನಡಪ್ರಭ ವಾರ್ತೆ, ಗದಗ, ನ. 26
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದನ್ನು ವಿರೋಧಿಸಿ, ಬೆಳಗಾವಿಯಲ್ಲಿ ಮಾಹಾಮೇಳಾವ ನಡೆಸಿದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲ ಅವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ಮಂಗಳವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಜರುಗಿಸಿ ತಹಸೀಲ್ದಾರ್ ಕಚೇರಿಯ ಮುಂಭಾಗ ಎಂಇಎಸ್ ಪ್ರತಿಕೃತಿ ದಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ ಚೌಹಾಣ್ ಮಾತನಾಡಿ, ಸದಾ ಕನ್ನಡನಾಡಿನ ವಿರುದ್ಧ ತಗಾದೆ ತಗೆಯುತ್ತ ಎಂಇಎಸ್ ನಾಡದ್ರೋಹ ಮಾಡುತ್ತ ಬಂದಿರುತ್ತದೆ. ಹಲವಾರು ಸಂದರ್ಭದಲ್ಲಿ ಇದು ರುಜುವಾತಾಗಿದೆ. ಹೀಗಾಗಿ ಎಂಇಎಸ್ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧಿಸಬೇಕು.
ಜತೆಗೆ ಸೋಮವಾರ ಬೆಳಗಾವಿಯಲ್ಲಿ ಜರುಗಿದ ಎಂಇಎಸ್ನ ಮಹಾಮೇಳಾವದಲ್ಲಿ ಕರ್ನಾಟಕ ರಾಜ್ಯದವರೇ ಆದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲ ಪ್ರಚೋದನಕಾರಿ ಭಾಷಣ ಮಾಡಿ, ರಾಜ್ಯದ ಮುಗ್ಧ ಜನರನ್ನು ದಾರಿ ತಪ್ಪಿಸುವ ಯತ್ನ ನಡೆಸಿರುವುದು ಖಂಡನಾರ್ಹ. ಜತೆಗೆ ನಮ್ಮ ರಾಜ್ಯ ಸರ್ಕಾರದ ಶವಯಾತ್ರೆ ನಡೆಸುತ್ತಿದ್ದೆವು ಎಂದು ಬಹಿರಂಗ ಹೇಳಿಕೆ ಕೊಟ್ಟಿರುವುದರಿಂದ ಇವರ ಶಾಸಕತ್ವವನ್ನು ರದ್ದುಗೊಳಿಸಬೇಕು ಹಾಗೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಅವರಿಬ್ಬರನ್ನು ನಮ್ಮ ರಾಜ್ಯದಿಂದ ಗಡಿಪಾರು ಮಾಡಬೇಕು. ಅಂದಾಗ ಮಾತ್ರ ಕನ್ನಡಿಗರಿಗೆ ಆದ ನೋವಿಗೆ ಅಲ್ಪ ಪ್ರಮಾಣದ ತೃಪ್ತಿಯಾಗುತ್ತದೆ. ರಾಜ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಕ್ರಮಕೈಗೊಳ್ಳುವ ಮೂಲಕ ಇವರ ಉದ್ಧಟತನವನ್ನು ಮಟ್ಟಹಾಕಬೇಕು.
ನಾವು ಕನ್ನಡಿಗರು ಎಂದೂ ಯಾವುದೇ ಭಾಷೆಯ ವಿರೋಧಿಗಳಲ್ಲ. ನಮ್ಮ ನಾಡಿನಲ್ಲಿ ಹಲವಾರು ಭಾಷೆಯ ಜನರು ಉತ್ತಮ ಜೀವನ ನಡೆಸುತ್ತಿದ್ದು, ಅವರ ಮೇಲೆ ರಾಜ್ಯದ ಯಾವೋಬ್ಬ ಪ್ರತಿನಿಧಿ, ಜನತೆ ವಿರೋಧಿಸಿಲ್ಲ. ಮಾತೃ ಭಾಷೆಯ ಜತೆಗೆ ನಾಡ ಭಾಷೆಯನ್ನು ಯಾರು ಗೌರವಿಸುತ್ತಾರೋ ಅವರಿಗೆ ನಮ್ಮ ಗೌರವ ಇರುತ್ತದೆ. ಆದರೆ, ಅದನ್ನು ಬಿಟ್ಟು ಕನ್ನಡನಾಡು ಹಾಗೂ ಭಾಷೆಯನ್ನು ಯಾರು ಗೌರವಿಸುವುದಿಲ್ಲವೋ ಅವರಿಗೆ ಈ ನಾಡಿನಲ್ಲಿ ನೆಲೆ ಊರಲು ಬಿಡುವುದಿಲ್ಲ. ಹಾಗಾಗಿ ಕನ್ನಡಿಗರಿಗೆ ಆದಂತಹ ನೋವನ್ನು ರಾಜ್ಯ ಸರ್ಕಾರ ಈ ಕೂಡಲೇ ಮನಗಂಡು ಈ ಇಬ್ಬರು ಶಾಸಕರುಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರು ನಗರದ ಗಾಂಧಿ ವೃತ್ತದಲ್ಲಿ ಎಂಇಎಸ್ನ ಪ್ರತಿಕೃತಿಯನ್ನು ಹಿಡಿದು ಪ್ರತಿಭಟನೆ ನಡೆಸಿ, ಮೆರವಣಿಗೆಯ ಮೂಲಕ ತಹಸೀಲಾರ್ ಕಚೇರಿಗೆ ಆಗಮಿಸಿ, ಕಚೇರಿಯ ಮುಂಭಾಗದ ರಸ್ತೆಯಲ್ಲಿ ಎಂಇಎಸ್ನ ಅಣಕು ಶವವನ್ನು ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಸವರಾಜ ಗಡ್ಡೆಪ್ಪನವರ, ಮೈಲಾರಪ್ಪ ಕೋಟಪ್ಪನವರ, ಜೋಸಫ್ ಉದೋಜಿ, ರಮೇಶ ರಾಠೋಡ, ಈಶ್ವರ ಲಕ್ಷ್ಮೇಶ್ವರ, ಸತೀಶ ಪಾಟೀಲ, ಹಾಲಪ್ಪ ವರವಿ, ಅಬ್ದುಲ್ರಿಯಾಜ ಹುನಗುಂದ, ದುರ್ಗಪ್ಪ ಪೂಟಪಾನಿ, ರಾಜೇಶ ಮುಟಗಾರ, ವಿಜಯ ಬಳ್ಳಾರಿ, ಅನೀಲ ಶಾಂತಗಿರಿ ಮುಂತಾದವರು ಪಾಲ್ಗೊಂಡಿದ್ದರು.
ಸಂಭಾಜಿ, ಅರವಿಂದ ಹೇಳಿಕೆ ಖಂಡಿಸಿ ಪ್ರತಿಭಟನೆ
ನರಗುಂದ: ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಕನ್ನಡ ನಾಡಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನಾರ್ಹ. ಈ ಕೂಡಲೇ ಅವರ ಶಾಸಕತ್ವ ರದ್ದುಗೊಳಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಮಂಗಳವಾರ ಕನ್ನಡಪರ ಸಂಘಟನೆಗಳ ಒಕ್ಕೂಟ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ಗಾಂಧಿಚೌಕ್ನಲ್ಲಿ ಎಂಇಎಸ್ನ ಪ್ರತಿಕೃತಿ ದಹಿಸಿ ಪ್ರತಿಭಟಿಸಿದವು.
ಕನ್ನಡಪರ ಸಂಘಟನೆಗಳ ಮುಖಂಡ ಚನ್ನು ನಂದಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ರಾಜ್ಯದ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನಾರ್ಹ. ಸಂಭಾಜಿ ರಾಜ್ಯ ಸರ್ಕಾರಕ್ಕೆ ಹಾಗೂ ಸಮಸ್ತ ಕನ್ನಡಿಗರಿಗೂ ಅವಮಾನವನ್ನುಂಟು ಮಾಡಿದ್ದಾರೆ. ಇಂತಹ ನಾಡದ್ರೋಹದ ಕೃತ್ಯ ಎಸಗುವವರನ್ನು ರಾಜ್ಯದ ಜನತೆ ಎಂದೂ ಕ್ಷಮಿಸಲಾರರು. ಕನ್ನಡಿಗರ ಆಶೀರ್ವಾದದಿಂದ ಶಾಸಕನಾಗಿರುವ ಸಂಭಾಜಿ ಪಾಟೀಲ ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ. ಈ ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಆರ್.ಎಂ. ಕೋರಿ, ಅಪ್ಪಾಸಾಬ್ ಕೋರಿ, ಗುರುಪಾದಪ್ಪ ಕುರಹಟ್ಟಿ, ಸಿ.ವೈ. ಹಿರೇಮಠ, ಎಸ್. ಅಂದಾನಪ್ಪ, ಬಸು ತಾವರೆ, ಗಿರೀಶ ಸುಬೇದಾರ, ಪ್ರವೀಣ ಪವಾರ, ಗಣೇಶ ಪಲ್ಲಿ, ಚೇತನ ಕಾಲಚಟ್ಟಿ, ಈರಬಸಯ್ಯ ಹಿರೇಮಠ, ವಾಸು ಹೆಬ್ಬಳ್ಳಿ, ವಿ.ಕೆ. ಕುದರಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

