ಗದಗ

ಅನಾಥ ಅಜ್ಜಿಗೆ ಚಿಕಿತ್ಸೆ, ನೆರವಿನ ಹಸ್ತ

Published On :

 ಕನ್ನಡಪ್ರಭ ವಾರ್ತೆ, ರೋಣ, ನ. 26
ತಾಲೂಕಿನ ಚಿಕ್ಕಮಣ್ಣೂರ ಗ್ರಾಮದಲ್ಲಿ ಬಂಧು-ಬಳಗ ಎಲ್ಲ ಇದ್ದರೂ ಅನಾರೋಗ್ಯ ಪೀಡಿತಳಾಗಿ ಬೀದಿಗೆ ಬಿದ್ದು ನರಕಯಾತನೆ ಅನುಭವಿಸುತ್ತಿದ್ದ 68 ವಯಸ್ಸಿನ ಅಜ್ಜಿಯ ಕರುಣಾಜನಕ ಸ್ಥಿತಿಯ ಕುರಿತು ನ. 26ರಂದು 'ಕನ್ನಡಪ್ರಭ' ಸ್ವಗ್ರಾಮದಲ್ಲಿ ಅನಾಥಳಾದ ಅಜ್ಜಿ ಎಂಬ ಸಚಿತ್ರ ವರದಿ ಪ್ರಕಟಿಸಿತ್ತು. ವರದಿಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕರಾದ ಪರಮೇಶ್ವರಪ್ಪ ಅವರು ಸ್ಪಂದಿಸಿ, ಅಜ್ಜಿಗೆ ಚಿಕಿತ್ಸೆ ನೀಡಿ ಹಾಗೂ ವೃದ್ಧಾಶ್ರಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆಸ್ಪತ್ರೆಗೆ ದಾಖಲು: ಮಂಗಳವಾರ ವರದಿ ಪ್ರಕಟವಾಗುತ್ತಿದಂತೆ ಎಚ್ಚೆತ್ತುಕೊಂಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕ ಪರಮೇಶ್ವರಪ್ಪ ಅವರು ರೋಣ ತಾಲೂಕು ಸಿಡಿಪಿಒ ಅಧಿಕಾರಿ ಬಿ.ಎಸ್. ಮೋಕಾಶಿ, ಮಹಿಳಾ ಸಾಂತ್ವನ ಕೇಂದ್ರದ ಸಹಾಯಕಿ ಮಹೇಶ್ವರಿ ಇವರನ್ನು ಚಿಕ್ಕಮಣ್ಣೂರ ಗ್ರಾಮಕ್ಕೆ ಕಳುಹಿಸಿ ಅಜ್ಜಿಯ ಸ್ಥಿತಿಗತಿ ಕುರಿತು ಮಹಿತಿ ಪಡೆದರು. ಬಳಿಕ ಅಜ್ಜಿಗೆ 108 ಆರೋಗ್ಯ ರಕ್ಷಾ ವಾಹನದ ಮೂಲಕ ರೋಣ ಡಾ. ಭೀಮಸೇನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೃದ್ಧೆಯ ಆರೋಗ್ಯ ಚೇತರಿಕೆಯಾಗುವವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಬಳಿಕ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದಲ್ಲಿರುವ ವೃದ್ಧಾಶ್ರಮಕ್ಕೆ ಕಳುಹಿಸಲಾಗುವುದು ಎಂದು 'ಕನ್ನಡಪ್ರಭಕ್ಕೆ' ತಿಳಿಸಿದ್ದಾರೆ.
ವರದಿಗೆ ಗ್ರಾಮಸ್ಥರಿಂದ ಮೆಚ್ಚುಗೆ: ವೃದ್ಧೆಯ ಗೋಳಾಟ ನಿತ್ಯ ನೋಡುತ್ತಿದ್ದ ಗ್ರಾಮಸ್ಥರು ಕನ್ನಡಪ್ರಭ ವರದಿಯನನ್ನು ಝೆರಾಕ್ಸ್ ಪ್ರತಿ ಮಾಡಿಸಿಕೊಂಡು ಓದಿದ್ದಾರೆ. ಇಂತಹ ಮಾನವೀಯ ಮೌಲ್ಯಗಳ ಕುರಿತು ಬೆಳಕು ಚೆಲ್ಲಿದ ಪತ್ರಿಕೆಯ ವರದಿ ಕುರಿತು ಚಿಕ್ಕಮಣ್ಣೂರ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ವೃದ್ಧೆಗೆ ಆರೋಗ್ಯ ಚಿಕಿತ್ಸೆ ಕೊಡಿಸುವಲ್ಲಿ ಮತ್ತು ವೃದ್ಧಾಶ್ರಮಕ್ಕೆ ಕಳುಹಿಸಲು ನೆರವಾದ ವರದಿ ಅಭಿನಂದನಾರ್ಹವಾಗಿದೆ ಎಂದು ಗ್ರಾಮಸ್ಥ ಅಶೋಕಜ್ಜ ಹಿರೇಮಠ, ನಿಂಗಪ್ಪ ಮಾದರ, ಸಂಗಯ್ಯ ಹಿರೇಮಠ, ಶಿವಪ್ಪ ಪಟ್ಟೇದ, ಯಲ್ಲಪ್ಪ ಹೊಸಳ್ಳಿ, ಸಂಗಪ್ಪ ಮುದೋಳ, ಅಡಿವೆಪ್ಪ ಗಡಗಿ, ಮುದಕಪ್ಪ ಕುಂಬಾರ ಸೇರಿದಂತೆ ಮುಂತಾದವರು ಶ್ಲಾಘಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.