ಅವ್ಯವಹಾರ: ಸಿಒಡಿ ತನಿಖೆಗೂ ಸಿದ್ಧ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ನ. 26
ಸ್ಥಳೀಯ ಪುರಸಭೆ ಆಡಳಿತ ಕೋಟ್ಯಂತರ ಅನುದಾನ ಲಪಟಾಯಿಸಿದೆ ಎಂದು ವಿಪಕ್ಷ ನಾಯಕರು ಮಾಡಿರುವ ಆರೋಪ ಕುರಿತು ಸಿಒಡಿ ತನಿಖೆಗೆ ಒಳಪಡಿಸಿದರೂ ಅದನ್ನು ಎದುರಿಸಲು ಸಿದ್ಧ ಎಂದು ಸ್ಥಾಯಿ ಸಮಿತಿ ಚೇರ್‌ಮನ್ ಅಶೋಕ ವನ್ನಾಲ ಹೇಳಿದರು.
ಅವರು ಪಟ್ಟಣದ ಪುರಸಭೆ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಪುರಸಭೆಯಲ್ಲಿ ಅನುದಾನ ದುರ್ಬಳಕೆ ನಡೆದಿದೆ ಎಂದು ಜನರ ದಾರಿ ತಪ್ಪಿಸುವ ಬದಲು ಸಿಬಿಐ ಅಥವಾ ಸಿಒಡಿ ಅಧಿಕಾರಿಗಳಿಂದ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರ ಬೀಳಲಿ. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪುರಸಭೆಯಲ್ಲಿ ಸಾರ್ವಜನಿಕರ ಹಣ ವ್ಯಾಪಕ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಲಿ. ಕಸ ಹಾಗೂ ಉದ್ಯಾನವನ ನಿರ್ವಹಣೆ ಬಗ್ಗೆ ಟೆಂಡರ್ ಮೂಲಕ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಪೌರಾಢಳಿತ ನಿಯಮ ಗಾಳಿಗೆ ತೂರಿ ಲಕ್ಷಾಂತರ ಹಣ ಲೂಟಿ ಮಾಡಿದ್ದಾರೆ. ನಗರದ ಪುರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಳ್ಳುತ್ತಿಲ್ಲ, ಸಾರ್ವಜನಿಕರ ಹಣ ವ್ಯಾಪಕ ದುರುಪಯೋಗವಾಗಿದೆ. ವಾಣಿಜ್ಯ ಆಸ್ತಿಗಳ ತೆರಿಗೆ ವಸೂಲಾತಿ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಆರೋಪದಲ್ಲಿ ಹುರಳಿಲ್ಲ ಎಂದರು.
ಬೀದಿ ದೀಪ ನಿರ್ವಹಣೆ ಮತ್ತು ಕಸ ವಿಲೇವಾರಿ ಸೇರಿ ಮೂರು ವಿಭಾಗಗಳ ನಿರ್ವಹಣೆಗೆ ಸ್ಥಳೀಯ ಉಮಾ ಮಹೇಶ್ವರಿ ಇಲೆಕ್ಟ್ರಿಕಲ್ ಇವರ ಗುತ್ತಿಗೆ ಅವಧಿ 2013-14ನೇ ಸಾಲಿನ ಮಾರ್ಚ್ ಅವಧಿಯವರೆಗೂ ಕಾಲಾವಕಾಶವಿದೆ. ಕಮಿಟಿಯ ಒಪ್ಪಂದ ಮೇರೆಗೆ 3 ವರ್ಷಗಳವರೆಗೂ ಮುಂದುವರಿಸಬಹುದು. ಹೀಗಿದ್ದರೂ ಟೆಂಡರ್ ಅವಧಿ ಮುಗಿದಿದೆ ಎಂದು ಪತ್ರಿಕೆಯಲ್ಲಿ ಹೇಳಿಕೆ ನೀಡಿ, ರಾಜಕೀಯ ತೇಜೋವಧೆ ಮಾಡಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ ಎಂದರು.
ಶಾಸಕರು 1346 ವಾಜಪೇಯಿ ಆಶ್ರಯ ಮನೆಗಳ ಜಿಪಿಎಸ್ ತೆಗೆದು ಹಾಕಿ, ಜನರ ಮನೆ ಕಟ್ಟಿಸಲು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಬಡವರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು. ಇಲ್ಲಿದ್ದ ವಾಜಪೇಯಿ ಮಾದರಿ ಶಾಲೆ, ಆದರ್ಶ ಶಾಲೆ ರೋಣಕ್ಕೆ ಸ್ಥಳಾಂತರಿಸಿ ರಾಜಕೀಯ ಮಾಡುತ್ತಿದ್ದಾರೆ. ಕಳೆದ 6 ತಿಂಗಳಿಂದ ಜಿಗಳೂರ ಕೆರೆಯ ಗಜೇಂದ್ರಗಡ ಶಾಶ್ವತ ಕುಡಿಯುವ ನೀರು ಕಾಮಗಾರಿ ನಿಲ್ಲಿಸಿದ್ದಾರೆ. ಇದು ಖಂಡನೀಯ. ಅಭಿವೃದ್ಧಿ ಕಾರ್ಯಕ್ಕೆ ಸಲಹೆ, ಸೂಚನೆ ನೀಡಿದರೆ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇವೆ. ಅನಗತ್ಯ ಆರೋಪ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಸರಿಯಲ್ಲ ಎಂದರು. ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸದಸ್ಯ ಬುಡ್ಡಪ್ಪ ಮೂಲಿಮನಿ, ವಿಜಯ ರಾಯಬಾಗಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

