ಗದಗ

ಮೂಲ ಸೌಲಭ್ಯವಿಲ್ಲದೆ ಬಡವರ ಗೋಳು

Published On :

ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ಹಮಾಲರ ಕಾಲೋನಿಯಲ್ಲಿ ರಾತ್ರಿಯಾದರೆ ಸಾಕು, ಹಾವು ಚೇಳುಗಳ ಕಾಟಕ್ಕೆ ಬೇಸತ್ತು ಇಲ್ಲಿನ ನಿವಾಸಿಗಳು ಜೀವ ಭಯದಿಂದ ಮನೆಯನ್ನು ತೊರೆದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
20 ವರ್ಷಗಳ ಹಿಂದೆ ಗಂಗಣ್ಣ ಮಹಾಂತಶೆಟ್ಟರ್ ಶಾಸಕರಾಗಿದ್ದ ಅವಧಿಯಲ್ಲಿ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು 8 ಎಕರೆ ಜಮೀನನ್ನು ಎಪಿಎಂಸಿಯ ಹಿಂದಿನ ಗುಡ್ಡದ ಹತ್ತಿರ ಇರುವ ಅಮೂಲ್ಯ ಜಾಗವನ್ನು ಸರ್ಕಾರ ಹಾಗೂ ಎಪಿಎಂಸಿಯ ಸಹಕಾರದಿಂದ ಮಂಜೂರು ಮಾಡಿಸಿಕೊಟ್ಟಿದ್ದರು. ಅದರಲ್ಲಿ 4 ಎಕರೆ ಭೂಮಿಯನ್ನು ಅಗ್ನಿಶಾಮಕ ಇಲಾಖೆಗೆ ನೀಡಲಾಗಿದ್ದು, ಉಳಿದ 4 ಎಕರೆಯಲ್ಲಿ 2-3 ಎಕರೆ ವಿಸ್ತೀರ್ಣದಲ್ಲಿ ಸುಮಾರು 80 ನಿವೇಶನಗಳಲ್ಲಿ ಹಮಾಲರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.
ಹಾವು, ಚೇಳುಗಳ ಆಶ್ರಯತಾಣ: 3 ವರ್ಷಗಳ ಹಿಂದೆ ಇಲ್ಲಿ ಮನೆಗಳನ್ನು ಕಟ್ಟಲು ಆರಂಭಿಸಲಾಗಿದ್ದು, ಕೆಲವು ನಿವೇಶನಗಳು ಮುಕ್ತಾಯಗೊಂಡು ಜನ ವಸತಿ ಪ್ರಾರಂಭವಾಗಿದೆ. ಆದರೆ, ಇಲ್ಲಿನ ನಿವಾಸಿಗಳು ಮೂಲ ಸೌಲಭ್ಯ ವಂಚಿತರಾಗಿದ್ದಾರೆ. ಸರಿಯಾದ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್ ಇಲ್ಲದೇ ಪರದಾಡುವಂತಾಗಿದೆ. ರಸ್ತೆಯಲ್ಲಿನ ಕಲ್ಲುಗಳು ಕಿತ್ತು ಹೋಗಿ ಸಂಚಾರ ಮಾಡಲು ಹರಸಾಹಸ ಪಡಬೇಕಾಗಿದೆ. ರಸ್ತೆ ಪಕ್ಕದ ಚರಂಡಿಗಳಲ್ಲಿ ಮುಳ್ಳಿನ ಕಂಟಿಗಳು ಬೆಳೆದು ಹಾವು, ಚೇಳುಗಳ ಆಶ್ರಯ ತಾಣವಾಗಿವೆ. ರಾತ್ರಿವೇಳೆ ಹಾವು, ಚೇಳುಗಳ ಕಾಟಕ್ಕೆ ಬೇಸತ್ತು ಇಲ್ಲಿನ ಜನತೆ ಮಕ್ಕಳನ್ನು ಕಟ್ಟಿಕೊಂಡು ಮನೆ ಬಿಟ್ಟು ಹೋಗುವಂತಾಗಿದೆ ಎಂದು ಸೋಮವ್ವ ಸೆರಸೂರಿ ತಮ್ಮ ಅಳಲು ತೋಡಿಕೊಂಡರು. ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗದೆ ಸಾಕಷ್ಟು ತೊಂದರೆಯಾಗಿದೆ. ಬೀದಿ ದೀಪಗಳು ಇಲ್ಲದೆ ಇರುವುದರಿಂದ ರಾತ್ರಿ ವೇಳೆಯಲ್ಲಿ ಜನತೆ ಹೊರಗಡೆ ಸಂಚಾರ ಮಾಡುವುದು ದುಸ್ತರವಾಗಿದೆ. ರಾತ್ರಿ ವೇಳೆಯಲ್ಲಿ ಮನೆಯಲ್ಲಿ ವಿದ್ಯುತ್ ದೀಪಗಳು ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳ ಓದಿಗೆ ತೊಡಕಾಗಿದೆ. ಎಪಿಎಂಸಿಯ ಅಧಿಕಾರಿಗಳು ಇದು ತಮಗೆ ಸಂಬಂಧಿಸಿದ ವಿಷಯವಲ್ಲ ಎಂಬಂತೆ ನಿಷ್ಕಾಳಜಿ ವಹಿಸಿದ್ದಾರೆ ಎಂದು ಇಲ್ಲಿನ ನಿವಾಸಿಗಳಾದ ಹನುಮಂತಪ್ಪ ಕುರಿ, ಗೋವಿಂದಪ್ಪ ಸೆರಸೂರಿ, ಹನುಮಪ್ಪ ಸೆರಸೂರಿ, ಬೀರಪ್ಪ ಗದ್ದಿ, ಬಸವರಾಜ ಕೆರೂರ, ನೀಲಪ್ಪ ಬಾಲೆಹೊಸೂರ, ಮಾಯವ್ವ ಮಲ್ಲಿಗವಾಡ, ಲಕ್ಷ್ಮವ್ವ ಸೆರಸೂರಿ, ಪುಷ್ಪಾ ಅಣ್ಣಿಗೇರಿ ಆರೋಪಿಸುತ್ತಾರೆ. ಈ ಹಿಂದಿನ ಶಾಸಕ ರಾಮಣ್ಣ ಲಮಾಣಿ ಅವರ ಆಡಳಿತ ಅವಧಿಯಲ್ಲಿ ಹಮಾಲರ ಕಾಲೋನಿಯ ಬೀದಿ ದೀಪಗಳಿಗೆ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೇಕಾದ ರು. 3 ಲಕ್ಷ ಮೂಲ ಧನವನ್ನು ಹೆಸ್ಕಾಂ ಇಲಾಖೆಗೆ ಮಂಜೂರಿ ಮಾಡಿ ಆ ಹಣವನ್ನು ಎಪಿಎಂಸಿ ಕಾಯರ್ಯದರ್ಶಿಯವರ ಹೆಸರಿಗೆ ಚೆಕ್ ನೀಡಲಾಗಿದ್ದರೂ ಇದುವರೆಗೆ ಎಪಿಎಂಸಿ ಯಾವುದೇ ಕಾರ್ಯ ಮಾಡಿಲ್ಲ ಎಂದು ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.