ಗದಗ

ಎಂಇಎಸ್ ಶಾಸಕರ ವಿರುದ್ಧ ಪ್ರತಿಭಟನೆ

Published On :

ಗದಗ: ಎಂಇಎಸ್ ಶಾಸಕ ಸಂಭಾಜಿ ಪಾಟೀಲರು ಬೆಳಗಾವಿಯಲ್ಲಿ ನೀಡಿರುವ ಹೇಳಿಕೆ ಖಂಡಿಸಿ, ಜೈಭೀಮಸೇನಾ ಸಂಘಟನೆಯ ವತಿಯಿಂದ ಬುಧವಾರ ನಗರದ ಗಾಂಧಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜೈಭೀಮ ಸೇನಾದ ಅಧ್ಯಕ್ಷ ಗಣೇಶ ಹುಬ್ಬಳ್ಳಿ ಮಾತನಾಡಿ, ಕಿತ್ತೂರು ರಾಣಿಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮೈಲಾರ ಮಹಾದೇವಪ್ಪನವರು, ಹುಯಿಲಗೋಳ ನಾರಾಯಣರಾಯ ಸೇರಿದಂತೆ ಹಲವು ಮಹನೀಯರು ಈ ನಾಡಿನಲ್ಲಿ ಹುಟ್ಟಿ, ನಾಡು, ನುಡಿ, ನೆಲಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ್ದಾರೆ. ಈ ನಾಡಿನ ಭಾಷೆ, ನೆಲಕ್ಕಾಗಿ ಯಾರಾದರೂ ಚ್ಯುತಿ ತಂದರೆ ಅಂಥವರ ವಿರುದ್ಧ ಕನ್ನಡಿಗರು ಜಾತ್ಯತೀತ, ಪಕ್ಷಾತೀತವಾಗಿ ಹೋರಾಡಲು ಸಿದ್ಧರಿದ್ದಾರೆ ಎಂದರು.
ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಮಹಾರಾಷ್ಟ್ರ ಏಕೀಕರಣ ಸಮಿತಿ ಇಬ್ಬರು ಶಾಸಕರನ್ನು ಹೊಂದಿದೆ. ಇದರ ಬದಲು ನಾಲ್ವರು ಶಾಸಕರನ್ನು ಹೊಂದಿದ್ದರೆ ಕರ್ನಾಟಕ ಸರ್ಕಾರದ ಶವಹೊರುತ್ತಿದ್ದೆವು ಎನ್ನುವುದು ಖಂಡನಾರ್ಹ ಎಂದರು.
ಬೆಳಗಾವಿಯಲ್ಲಿ ಪದೇ ಪದೇ ಖ್ಯಾತೆ ತೆಗೆದು ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್‌ನ ಪುಂಡಾಟಿಕೆ ನಿಲ್ಲಬೇಕು. ಜತೆಗೆ ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ತಮ್ಮ ಭಾಷಣದುದ್ದಕ್ಕೂ ಮರಾಠಿ ಭಾಷಿಕರನ್ನು ಪ್ರಚೋದಿಸುತ್ತ ಕನ್ನಡಿಗರು ಮತ್ತು ಕರ್ನಾಟಕದ ವಿರುದ್ಧ ಕೀಳುಮಟ್ಟದ ಶಬ್ದ ಬಳಸಿ, ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನಾರ್ಹವಾಗಿದೆ ಎಂದರು.
ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲ ಇವರನ್ನು ವಿಧಾನಸಭಾ ಸದಸ್ಯತ್ವದಿಂದ ರದ್ದುಗೊಳಿಸಬೇಕು. ಇಲ್ಲದೇ ಇಲ್ಲದಿದ್ದರೆ ಸಮಿತಿಯ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಹೋಬಳೇಶ ಯಶವಂತಪುರ, ರಾಘವೇಂದ್ರ ಪರಾಪುರ, ಮಂಜುನಾಥ ಕೌಜಲ್, ದೀಪಕ ಕಲ್ಮನಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.