ಕನ್ನಡ ಭಾಷೆ ಜನರಲ್ಲಿ ಜಾಗೃತಿ ಮೂಡಲಿ
ಕನ್ನಡಪ್ರಭ ವಾರ್ತೆ, ಗದಗ, ನ. 27
ಕನ್ನಡಿಗ-ಕನ್ನಡ-ಕರ್ನಾಟಕ ಕುರಿತ ಜನ ಜಾಗೃತಿ ಇನ್ನಷ್ಟು ಹೆಚ್ಚಾಗಬೇಕೆಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಮಂಗಳವಾರ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 2147ನೇ ಶಿವಾನುಭವದಲ್ಲಿ ರಾಜ್ಯೋತ್ಸವ ನಿಮಿತ್ತ ಕನ್ನಡ ತಿಂಗಳಿನ ವಿಶೇಷ ಕಾರ್ಯಕ್ರಮದಡಿ ನಡೆದ ಕರ್ನಾಟಕ ಭೌಗೋಳಿಕ ವಿಸ್ಮಯ ದರ್ಶನ ನುಡಿಚಿತ್ರ ಪ್ರದರ್ಶನ ಹಾಗೂ ಎಸ್.ಎನ್. ಆದಿ ಬರೆದ ಕನಸು ಬಿತ್ತುವ ಭಾಷಣಗಳು ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕನ್ನಡ ನೆಲದ ಭೌಗೋಳಿಕ ವಿಶಿಷ್ಟತೆಯನ್ನು ರಾಜ್ಯದ ಎಲ್ಲ ಐತಿಹಾಸಿಕ ಸಾಂಸ್ಕೃತಿಕ ತಾಣಗಳು, ನಿಸರ್ಗ ರಮಣೀಯ ಸ್ಥಳಗಳ ಪ್ರತ್ಯಕ್ಷ ದೃಶ್ಯ ವಿವರಣೆಯೊಂದಿಗೆ ಪರಿಚಯಿಸಿದ ನುಡಿಚಿತ್ರ ಸ್ಲೈಡ್ ಶೋ ಕಾರ್ಯಕ್ರಮ ಎಲ್ಲೆಡೆ ನಡೆಯಬೇಕಾದ ಮಾದರಿಯ ಕಾರ್ಯ. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಲಿಂಗಾಯತ ಪ್ರಗತಿಶೀಲ ಸಂಘ ಕನ್ನಡ ತಿಂಗಳಿನ ನಾಲ್ಕೂ ಶಿವಾನುಭವಗಳನ್ನು ಅದ್ಧೂರಿ-ಅರ್ಥಪೂರ್ಣವಾಗಿ ಆಚರಿಸಿದ್ದು ಅಭಿನಂದನೀಯ. ಕನ್ನಡದ ಬೇಂದ್ರೆ, ಕುವೆಂಪು, ಕಾರಂತರಂತಹ ಮಹನೀಯರ ಬದುಕೇ ಒಂದು ವಿಸ್ಮಯ ಅವರಿಂದ ಪ್ರೇರಿತ ಬದುಕು ನಮ್ಮದಾಗಬೇಕು. ಕನ್ನಡ ಗೇಯ ಗೀತೆಗಳ ಹರಿಕಾರರಾದ ಕಾಳಿಂಗರಾವರನ್ನು ಮರೆಯಲಾಗದು. ನಾಡು, ನುಡಿ ಜನರನ್ನು ಕಟ್ಟುವ ಜತೆಗೆ ಮನಸ್ಸನ್ನು ಬೆಳೆಸುವ ಕಾರ್ಯ ಇದರೊಂದಿಗೆ ಸಾಗಿದೆ. ಒಂದು ಮಠದ ಸಾಧನೆ ಎಲ್ಲವೂ ಮಠದ ಸ್ವಾಮಿಗಳೊಬ್ಬರಿಂದಲೇ ಆಗದು. ಶ್ರೀಮಠದ ಸದ್ಭಕ್ತರಿಂದಲೇ ಎಲ್ಲ ವಿಧಾಯಕ ಕೆಲಸಗಳು ನಡೆದುಕೊಂಡು ಬಂದಿವೆ. ಜಾತಿಗಿಂತ ನೀತಿ ದೊಡ್ಡದು. ಶಿಕ್ಷಣಕ್ಕಿಂತ ಸಂಸ್ಕೃತಿ, ಸಂಸ್ಕಾರ ದೊಡ್ಡದು ಎಂಬ ನೀತಿ ಪರಿಪಾಲನೆಯಾಗುತ್ತಿದೆ. ಮೌಢ್ಯತೆಗಳಿಂದ ದೂರ ಸಿಡಿದು ಜನ್ಮ ತಾಳಿದ ಲಿಂಗಾಯತ ಧರ್ಮದ ಕೆಲವರು ಇಂದಿಗೂ ಕೂಡ ಧಾರ್ಮಿಕ, ಬೌದ್ಧಿಕ, ಸಾಂಸ್ಕೃತಿಕ ಮೌಢ್ಯತೆಯ ಪ್ರಭಾವಳಿಗೆ ಸಿಲುಕಿರುವುದು ವಿಷಾದನೀಯ ಎಂದರು. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಪ್ರೊ. ಆದಿ ಅವರ ಕನಸು ಬಿತ್ತುವ ಭಾಷಣಗಳು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಶಿವಾನುಭವ ಸಮಿತಿ ಚೇರ್ಮನ್ ಎಸ್.ಎನ್. ಆದಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಮ್ಮ ಕುರಡಗಿ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಖಜಾಂಚಿ ಪ್ರಭಯ್ಯ ಹಿರೇಮಠ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ ಮುಂತಾದವರು ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಸ್ವಾಗತಿಸಿದರು. ಪ್ರೊ. ನಾಯಕ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

