ಒಡೆದ ಪೈಪ್, ನೀರು ಪೋಲು
ಗಜೇಂದ್ರಗಡ: ಸಮೀಪದ ವೀರಾಪುರ ಗ್ರಾಮದಲ್ಲಿ ನೀರು ಪೂರೈಕೆ ಮಾಡುವ ಮುಖ್ಯ ಪೈಪ್ಗಳು ಒಡೆದು ಎಲ್ಲೆಂದರಲ್ಲಿ ನೀರು ಸೋರುತ್ತಿವೆ. ಇದರಿಂದ ಸರಿಯಾಗಿ ನೀರು ಬರದೆ ಇಲ್ಲಿನ ಜನತೆ ಪರಿತಪಿಸುವಂತಾಗಿದೆ.
ಇದನ್ನು ದುರಸ್ತಿ ಮಾಡಿದ ಕೆಲ ದಿನ ಬಳಿಕ ಮತ್ತೆ ಯಥಾಸ್ಥಿತಿ ಮುಂದುವರಿಯುತ್ತಿದೆ. ಇದರಿಂದ ಕುಡಿಯುವ ನೀರಿಗಾಗಿ ಜನ ಪದೇ ಪದೇ ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಶುದ್ಧ ಕುಡಿಯುವ ನೀರು ಘಟಕ (ವಾಟರ್ ಫಿಲ್ಟರ್) ಸೇವೆಗೆ ದೊರಕದಿರುವುದು ಗ್ರಾಮಸ್ಥರಿಗೆ ಬೇಸರ ಮೂಡಿಸಿದೆ.
ಗದಗ ಜಿಪಂ ಅನುದಾನದಲ್ಲಿ ರಾಮಾಪುರ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದ ಎಲ್ಲ ಬಡಾವಣೆಯಲ್ಲಿ ಪಿಯುಸಿ ಪೈಪ್ಗಳನ್ನು ಅಳವಡಿಸಲಾಗಿದೆ. ಇದರಿಂದ ನಿವಾಸಿಗಳ ಮನೆಗಳ ನಲ್ಲಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಂಡು ಮೂರು ತಿಂಗಳೂ ಆಗಿಲ್ಲ. ಆಗಲೇ ಓಣಿಯ ಎಲ್ಲ ಪೈಪ್ಗಳು ಎಲ್ಲೆಂದರಲ್ಲಿ ಒಡೆದು ನೀರು ಸೋರುತ್ತಿವೆ. ಇದು ಕಳಪೆ ಕಾಮಗಾರಿ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ರಸ್ತೆ ತುಂಬಾ ಕೆಸರು: ನೀರು ಪೂರೈಕೆ ಮುಖ್ಯ ಪೈಪ್ಗಳು ಒಡೆದು ಓಣಿಯಲ್ಲಿ, ರಸ್ತೆ ತುಂಬೆಲ್ಲಾ ನೀರು ಹರಿದು ಪೋಲಾಗುತ್ತಿದೆ. ಅಲ್ಲದೆ ರಸ್ತೆಯೆಲ್ಲ ಕೆಸರುಮಯವಾಗಿ ಮಾರ್ಪಾಡಾಗುತ್ತದೆ. ಹೀಗೆ ಆದಾಗೊಮ್ಮೆ ನೆಲವನ್ನು ಅಗೆದು ಪೈಪ್ಲೈನ್ ದುರಸ್ತಿ ಮಾಡುತ್ತಾರೆ. ಒಂದು ಕಡೆ ದುರಸ್ತಿ ಮಾಡಿ ಸರಿಹೋಯಿತು ಎನ್ನುವಾಗಲೇ ಮತ್ತೊಂದು ಕಡೆ ಸೋರುವುದು ಪ್ರಾರಂಭವಾಗುತ್ತದೆ. ಇದರಿಂದ ಮನೆಗಳಿಗೆ ನೀರು ಪೂರೈಕೆ ಮಾಡುವಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ತೊಂದರೆ ನಿವಾರಣೆಗೆ ಶಾಶ್ವತ ಪರಿಹಾರ ನೀಡಲು ಜಿಪಂ ಎಂಜಿನಿಯರ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲಾ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ಶರಣಪ್ಪ ಕಡಬಲಕಟ್ಟಿ.
ಪ್ರಾರಂಭಗೊಳ್ಳದ ಘಟಕ: ಗ್ರಾಮದಲ್ಲಿ ರು. 10 ಲಕ್ಷ ರು. ವೆಚ್ಚದಲ್ಲಿ ಸ್ಥಾಪಿಸಿರುವ (ಆರ್ಓ ಪ್ಲ್ಯಾಂಟ್) 10 ಪೈಸೆಗೆ ಒಂದು ಲೀಟರ್ ಶುದ್ಧ ಕುಡಿವ ನೀರು ಪೂರೈಕೆ ಕೇಂದ್ರ ಪ್ರಾರಂಭಿಸದಿರುವುದೂ ಗ್ರಾಮದ ಜನತೆಗೆ ಬೇಸರ ಮೂಡಿಸಿದೆ. ಗ್ರಾಮೀಣ ಬಡ ಜನತೆಗೆ ಶುದ್ಧ ಕುಡಿವ ನೀರು ದೊರೆಯಲಿ ಎನ್ನುವ ಉದ್ದೇಶದಿಂದ ಸರ್ಕಾರ ಈ ಶುದ್ಧ ಕುಡಿಯುವ ನೀರು ಸರಬರಾಜ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ಸೇವೆಗೆ ಮಾತ್ರ ದೊರೆಯುತ್ತಿಲ್ಲ.
ಗ್ರಾಮದ ಜನತೆಗೆ ಕೊಳವೆ ಬಾವಿಯಿಂದ ಸಂಗ್ರಹಿಸಿದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಅದರಲ್ಲಿ ಸಾಕಷ್ಟು ಪ್ಲೋರೈಡ್ ಅಂಶ ಇರುವುದರಿಂದ ಅನೇಕ ಜನ ಕಿಡ್ನಿಯಲ್ಲಿ ಕಲ್ಲು, ಹಲ್ಲು ಬೇನೆ ಇತರ ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಜನರು ಶುದ್ಧ ನೀರು ಪಡೆದು ಆರೋಗ್ಯವಂತರಾಗಿರಲಿ ಎನ್ನುವ ಉದ್ದೇಶದಿಂದ ಸ್ಥಾಪಿತವಾಗಿರುವ ಈ ಶುದ್ಧ ಕುಡಿಯುವ ನೀರು ಪೂರೈಕೆ ಕೇಂದ್ರ ಪ್ರಾರಂಭಿಸದಿರುವುದಕ್ಕೆ ಇಲ್ಲಿನ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮೂಲ ಉದ್ದೇಶ ಈಡೇರದೆ, ಜತೆಗೆ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಜಲಾಗಾರ ಇದ್ದು ಇಲ್ಲದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

