ಬೆಳೆಗೆ ಪರಿಸರಕ್ಕೆ ತಕ್ಕಂತೆ ಔಷಧೋಪಚಾರ ಅವಶ್ಯ
ಗದಗ: ರೈತರು ತಾವು ಬಿತ್ತನೆ ಮಾಡಿದ ಬೆಳೆಗೆ ಪರಿಸರಕ್ಕೆ ಅನುಗುಣವಾಗಿ ಔಷಧೋಪಚಾರ ಮಾಡಿದಲ್ಲಿ ಇಳುವರಿ ಹೆಚ್ಚಿಗೆ ಪಡೆಯಲು ಸಹಕಾರಿಯಾಗಲಿದೆ ಎಂದು ಕೆವಿಕೆಯ ಬೇಸಾಯ ಶಾಸ್ತ್ರತಜ್ಞ ವಿ.ಡಿ. ವೈಕುಂಠೆ ಹೇಳಿದರು.
ಅವರು ಶುಕ್ರವಾರ ತಾಲೂಕಿನ ನಾರಾಯಣಪುರ ಗ್ರಾಮದ ರೈತ ಮಲ್ಲನಗೌಡ ಪಾಟೀಲ ಅವರ ಹೊಲದಲ್ಲಿ ಜಿಪಂ ಗದಗ, ರಾಜ್ಯ ಕೃಷಿ ಇಲಾಖೆ, ಆತ್ಮಯೋಜನೆ ಕೃಷಿ ಇಲಾಖೆ ಗದಗ ಇವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷೇತ್ರ ಕೃಷಿ ಪಾಠಶಾಲೆಯಲ್ಲಿ ರೈತರಿಗೆ ಮಾಹಿತಿ ನೀಡಿದರು.
ಇಂದು ರೈತರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಲ್ಲಿ ರೈತರ ಬೆಳೆಗೆ ಬಂದೊದಗುವ ಕೀಟ ಬಾಧೆಯೂ ಒಂದು. ಕಾರಣ ಈ ಸಮಸ್ಯೆಗೆ ಬೇಕಾದ ಸೂಕ್ತ ನಿರ್ವಹಣಾ ಕ್ರಮ ಹಾಗೂ ಬೆಳೆಯು ಬೆಳೆದ ನಂತರ ಉತ್ತಮವಾಗಿ ಬೆಳೆಯಲು ಬೇಕಾದ ಸೂಕ್ತ ನಿರ್ವಹಣಾ ಕ್ರಮಗಳ ಕುರಿತು ಜಿಲ್ಲೆಯಾದ್ಯಂತ ರೈತರಿಗೆ ಈ ಕ್ಷೇತ್ರಪಾಠ ಶಾಲೆಯ ಮೂಲಕ ಮಾಹಿತಿ ನೀಡಲಾಗುತ್ತಿದೆ. ರೈತರು ತಾವು ಬೆಳೆದ ಬೆಳೆಗೆ ಹೆಚ್ಚಿನ ರೀತಿಯಲ್ಲಿ ಕ್ರಿಮಿನಾಶಕ ಸಿಂಪಡಿಸದೇ ನೈಸರ್ಗಿಕವಾಗಿ ಕೀಟಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಇದರಲ್ಲಿ ಪಕ್ಷಿಗಳು ಕಡಲೆ ಬೆಳೆಯಲ್ಲಿರುವ ಕೀಟಗಳನ್ನು ಹೆಚ್ಚಾಗಿ ತಿನ್ನಲಿದ್ದು, ಹಾಗಾಗಿ ಪಕ್ಷಿಗಳು ಹೊಲಕ್ಕೆ ಹೆಚ್ಚಾಗಿ ಬರಲು ಹೊಲಗಳಲ್ಲಿ ಪಕ್ಷಿಗಳು ತಿನ್ನುವ ಮಂಡಕ್ಕಿ(ಚುರುಮುರಿ)ಯಂತಹ ಆಹಾರಗಳನ್ನಿಡುವುದು, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬಹುದು. ಕಡಲೆ ಬೆಳೆಯ ಜತೆಗೆ ಶೇ. 20ರಷ್ಟು ಬಿಳಿಜೋಳ, ಸೂರ್ಯಕಾಂತಿಯಂತಹ ಬೆಳೆ ಬೆಳೆಯುವುದು. ಅಲ್ಲದೇ ಕಿಟಗಳು ಬೆಳೆದು ಚಿಟ್ಟೆಯಾಗಿ ಮಾರ್ಪಡಲಿದ್ದು, ಈ ಚಿಟ್ಟೆಗಳ ನಿಯಂತ್ರಣಕ್ಕೆ ಹೊಲಗಳಲ್ಲಿ ಕೃಷಿ ಇಲಾಖೆ ನೀಡುವ ಮೋಹಕ ಬಲೆಗಳನ್ನು ಹಾಕುವುದರಿಂದ ಕೀಟಗಳ ನಿಯಂತ್ರಣ ಮಾಡಬಹುದಾಗಿದೆ ಎಂದರು.
ಕೃಷಿ ವಿಷಯ ತಜ್ಞ ಎಸ್.ಕೆ. ಮುದ್ಲಾಪುರ ಹೊಲದಲ್ಲಿ ಮೋಹಕ ಬಲೆಗಳನ್ನು ಅಳವಡಿಸುವ ಕುರಿತು ರೈತರಿಗೆ ಮಾಹಿತಿ ನೀಡಿದರು. ವಿಷಯ ತಜ್ಞ ಎನ್.ಎಚ್. ಬಂಡಿ, ಎಸ್.ಎಚ್. ಆದಾಪುರ, ಕೃಷಿ ಅಧಿಕಾರಿ ಎ.ಜಿ. ಪಲ್ಲೇದ, ಶಿವರಾಜ ಹಿರೇಮಠ, ರೈತರಾದ ವೀರೇಶ ಮುದೋಳಮಠ, ಶಿವಲಿಂಗಪ್ಪ ಹಂಚಿನಾಳ, ನಾಗಪ್ಪ ಹಂಚಿನಾಳ, ಹಾಲಸ್ವಾಮಿ ಹಿರೇಮಠ, ವೀರಪ್ಪ ಹಂಚಿನಾಳ, ಸೋಮಯ್ಯ ಮುಳಗುಂದಮಠ, ವಿನೋದ ಅಸೂಟಿ, ತೋಟಯ್ಯ ಹಿರೇಮಠ ಸೇರಿದಂತೆ ಕೋಟುಮಚಗಿ-ನಾರಾಯಣಪುರ ಗ್ರಾಮದ ರೈತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

