ಕಾರ್ಮಿಕರ ಕೊರತೆ: ಹತ್ತಿ ಬೆಳೆಗಾರರಿಗೆ ಸಂಕಷ್ಟ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 29
ಈ ವರ್ಷ ಚಲೋ ಮಳೆಯಾಗಿ ಬಂಗಾರದಂಗ ಬೆಳೆ ಬಂದೈತ್ರೀ... ಆದ್ರ ಕೈಗೆ ಬಂದಿದ್ದು, ಬಾಯಿಗೆ ಬರವಲ್ಲದು ನೋಡ್ರೀ. ಇದು ತಾಲೂಕಿನ ಹತ್ತಿ ಬೆಳೆಗಾರರ ನೋವಿನ ನುಡಿಯಾಗಿದೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ತಾಲೂಕಿನಾದ್ಯಂತ 3.075 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಹತ್ತಿ ಹಾಗೂ 10.050 ಹೆಕ್ಟೇರ್ ಒಣಬೇಸಾಯ ಪ್ರದೇಶ ಸೇರಿ ಒಟ್ಟು 13.125 ಹೆಕ್ಟೇರ್ ಪ್ರದೇಶದಲ್ಲಿ ಸಾಲಿಮಾರ, ಬನ್ನಿ, ಪ್ರತಾಪ್, ಡಾ. ಬ್ರ್ಯಾಂಡ್ ಮತ್ತಿತರ ತಳಿಯ ಹತ್ತಿ ಬಿತ್ತನೆ ಮಾಡಲಾಗಿದೆ. ಸಕಾಲಕ್ಕೆ ಉತ್ತಮ ಮಳೆಯಾದುದರಿಂದ ಬೆಳೆಯು ಚೆನ್ನಾಗಿದ್ದು, ಸಮೃದ್ಧ ಫಸಲನ್ನು ಹೊತ್ತು ನಿಂತಿದೆ.
ಉತ್ತಮ ಬೆಳೆಯೊಂದಿಗೆ ಉತ್ತಮ ಫಸಲು ಅಲ್ಲದೆ ಉತ್ತಮ ಧಾರಣೆಯೂ ಇದೆ. ಈ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹತ್ತಿ ಬೆಲೆ ಪ್ರತಿ ಕ್ವಿಂಟಲ್ಗೆ ರು. 5 ಸಾವಿರದ ವರೆಗೆ ಇದೆ. ಆದರೆ, ರೈತ ಮಾತ್ರ ತನ್ನ ಹೊಲದಲ್ಲಿರುವ ಫಸಲನ್ನು ಪೇಟೆಗೆ ತೆಗೆದುಕೊಂಡು ಹೋಗದ ಸ್ಥಿತಿ ತಲುಪಿದ್ದಾನೆ. ಕಾರಣ ಹೊಲದಲ್ಲಿ ಮೈ ದುಂಬಿಕೊಂಡಿರುವ ಹತ್ತಿಯನ್ನು ಬಿಡಿಸುವ ಕೆಲಸಕ್ಕೆ ಜನ ಬರದಿರುವುದು.
ಒಂದು ಎಕರೆ ಹೊಲದಲ್ಲಿನ ಹತ್ತಿ ಬೆಳೆಗೆ ಬೀಜ, ಗೊಬ್ಬರ, ಔಷಧಿ ಅಲ್ಲದೆ ಇತರೆ ಖಚು ಸೇರಿ ರು. 15ರಿಂದ 20 ಸಾವಿರ ಖರ್ಚು ಮಾಡಿದ್ದೇವೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಅಕಾಲಿಕ ಮಳೆಯಾದರೆ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ. ಯಾವ ದೇವರ ಶಾಪವೋ ಕಷ್ಟಪಟ್ಟು ಬೆಳೆದ ಬೆಳೆಯೂ ಕಣ್ಣುಂದೆಯೇ ನೀರು ಪಾಲಾದರೆ ಮತ್ತೆ ಸಾಲದ ಶೂಲಕ್ಕೆ ಸಿಲುಕುವಂತಾಗುತ್ತದೆ ಎನ್ನುತ್ತಾರೆ ರೈತ ಫಕೀರಪ್ಪ ಹೊಸಳ್ಳಿ.
ಮೂರು ಎಕರೆ ಹೊಲದಲ್ಲಿ ಹತ್ತಿ ಬೆಳೆದಿದ್ದೇನೆ. ಸಾಕಷ್ಟು ಹತ್ತಿಯೂ ಒಡೆದಿದೆ. ಆದರೆ, ಅದನ್ನು ಬಿಡಿಸಲು ಆಳುಗಳೇ ಸಿಗುತ್ತಿಲ್ಲ. ಗೋವಿನ ಜೋಳದ ತೆನೆ ಮುರಿಯುವ ಕಾರ್ಯ ಇದೇ ಸಮಯದಲ್ಲಿ ಇರುವುದರಿಂದ ಆಳುಗಳ ಕೊರತೆಯುಂಟಾಗಿದೆ. ಸರ್ಕಾರದ ಕೆಲ ಯೋಜನೆಗಳಿಂದ ಸಹ ಈ ಪರಿಸ್ಥಿತಿಯುಂಟಾಗಿದೆ. ಇದೇ ರೀತಿ ಮುಂದುವರಿದಲ್ಲಿ ಗಿಡದಲ್ಲಿ ಬಿಟ್ಟಿರುವ ಹತ್ತಿಯು ಮಣ್ಣಿಗೆ ಬಿದ್ದು ಸಂಪೂರ್ಣವಾಗಿ ಹಾಳಾಗುವ ಭಯ ಉಂಟಾಗಿದೆ.
ಹತ್ತಿ ಬೆಳೆದ ರೈತ
ಪ್ರಸಕ್ತ ವರ್ಷದಲ್ಲಿ ತಾಲೂಕಿನಾದ್ಯಂತ 2.495 ಹೆಕ್ಟೇರ್ ಪ್ರದೇಶದಲ್ಲಿ ಕನಕ ಬಿಟಿ ಹತ್ತಿ ಬಿತ್ತನೆ ಮಾಡಿದ್ದು, ಆಳೆತ್ತರ ಬೆಳೆದ ಗಿಡಗಳಲ್ಲಿ ಮೊಗ್ಗು, ಕಾಯಿ ಬಿಡದೆ ಬೆಳೆ ಸಂಪೂರ್ಣ ಹಾಳಾಗಿರುವ ಕುರಿತಂತೆ ರೈತ ಸಂಪರ್ಕ ಕೇಂದ್ರಗಳಿಗೆ ದೂರುಗಳು ಬಂದಿವೆ. ಇತರೆ ತಳಿಗಳಿಂದ ನೀರಾವರಿ ಮತ್ತು ಒಣ ಬೇಸಾಯ ಸೇರಿ ಒಟ್ಟು 13,125 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದು, ಉತ್ತಮವಾದ ಫಸಲು ಬಂದಿದೆ.
-ಪ್ರಹ್ಲಾದ್ ರಾವ್
ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ
-ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

