ಜಾತಿ ನಿಂದಿಸಿ ಹಲ್ಲೆ: ದೂರು
ಶಿರಹಟ್ಟಿ: ತಾಲೂಕಿನ ಹೊಳೆ ಇಟಗಿ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿವೆ. ಈ ಕುರಿತು ಮುತ್ತಪ್ಪ ದಾಸರ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದ್ದಕ್ಕೆ ಮತ್ತು ಕಾಮಗಾರಿ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ತೋರಿಸಿದ್ದಕ್ಕೆ ಸಿಟ್ಟಾಗಿ ಶುಕ್ರವಾರ ಬೆಳಗ್ಗೆ ಮನೆಗೆ ಹೊಕ್ಕು ಜಾತಿ ನಿಂದನೆ ಮಾಡಿ ಚಪ್ಪಲಿಯಿಂದ ಹೊಡೆದು ಇತನ ಮೇಲೆ ಹಲ್ಲೆ ಮಾಡಲಾಗಿದ್ದು, ಇವನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಮುತ್ತಪ್ಪ ದಾಸರ ಪತ್ನಿ ಶಶಿಕಲಾ ಮುತ್ತಪ್ಪ ದಾಸರ ಇವರು ಅಶೋಕ ಹಳ್ಳೆಪ್ಪನವರ, ಮಂಜುನಾಥ ಶಂಕಿನದಾಸರ, ಪ್ರಭಯ್ಯ ನಂದಿಬೇವೂರಮಠ, ಶಿವಾನಂದ ತಳವಾರ, ಪ್ರವೀಣ ಶಂಕಿನದಾಸರ, ಮಾಧವ ಶಂಕಿನದಾಸರ, ಸೋಮಶೇಖರಯ್ಯ ನಂದಿಬೇವೂರಮಠ, ಸಹದೇವಪ್ಪ ಹಳ್ಳೆಪ್ಪನವರ, ನರೇಂದ್ರ ಶಂಕಿನದಾಸರ ಎಂಬುವವರ ಮೇಲೆ ಶಿರಹಟ್ಟಿ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಡಿ. ಶರಣಪ್ಪ, ಡಿವೈಎಸ್ಪಿ ವಿಜಯ ಡಂಬಳ, ಸಿಪಿಐ ಶ್ರೀನಿವಾಸ ಮೇಟಿ, ಪಿಎಸ್ಐ ಆರ್.ಎಚ್. ಕಟ್ಟಿಮನಿ ಬೆಳಗ್ಗೆ ಹೊಳೆ ಇಟಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಂದು ಸ್ವಾಭಿಮಾನಿ ಕನ್ನಡಿಗರ ವೇದಿಕೆ ಉದ್ಘಾಟನೆ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸ್ವಾಭಿಮಾನಿ ಕನ್ನಡಿಗರ ವೇದಿಕೆಯನ್ನು ಪಟ್ಟಣದ ಹಾವಳಿ ಹನುಮಪ್ಪನ ದೇವಸ್ಥಾನದ ಹತ್ತಿರ ನ. 30ರ ಸಂಜೆ 6 ಗಂಟೆಗೆ ಉದ್ಘಾಟನೆ ಜರುಗಲಿದೆ. ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಶ್ರೀಗಳು ಸಾನ್ನಿಧ್ಯವಹಿಸುವರು. ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪುರಸಭೆಯ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಪುರಸಭೆಯ ಸದಸ್ಯ ಮಹೇಶ ಹೊಗೆಸೊಪ್ಪಿನ, ಗಣೇಶ ಬೇವಿನಮರದ, ಎಚ್.ಎಸ್. ಸೋಂಪುರ, ಸ್ವಾಭಿಮಾನಿ ಕನ್ನಡಿಗರ ವೇದಿಕೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ, ಪ್ರೇಮ ಶೇಠ, ವಿಜಯಕುಮಾರ ಹತ್ತಿಕಾಳ, ಆನಂದ ವಾಚದಮಠ, ಕರಣರಾಮ್ ಪಟೇಲ್, ಸಂಗಮೇಶ ತಮ್ಮನಗೌಡರ, ಪ್ರಶಾಂತ ನೆಲುವಿಗಿ, ಶಿರಹಟ್ಟಿ ತಾಲೂಕು ಸ್ವಾಭಿಮಾನಿ ಕನ್ನಡಿಗರ ವೇದಿಕೆಯ ಅಧ್ಯಕ್ಷ ಬಸವರಾಜ ಹೊಗೆಸೊಪ್ಪಿನ ಮುಂತಾದವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯಮಟ್ಟಕ್ಕೆ ಆಯ್ಕೆ
ಮುಂಡರಗಿ: ತಾಲೂಕಿನ ಹಳ್ಳಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಜಂದಿಪೀರಾ ಬಾಗವಾನರ ಅವರು ಶಿಕ್ಷಕರಿಗಾಗಿ ನಡೆದ ಜಿಲ್ಲಾ ಮಟ್ಟದ ಸಹ ಪಠ್ಯಚಟುವಟಿಕೆಗಳ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 2013-14ನೇ ಸಾಲಿನ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಹಾಗೂ ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರ ವತಿಯಿಂದ ಬುಧವಾರ ಗದಗನಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಲಾಗಿತ್ತು.
ದಿನಗೂಲಿ ನೌಕರರ ವೇತನ ಬಿಡುಗಡೆಗೆ ಆಗ್ರಹ: ಮನವಿ
ಗಜೇಂದ್ರಗಡ: ಸ್ಥಳೀಯ ಹಾಸ್ಟೆಲ್ ದಿನಗೂಲಿ ನೌಕರರ ವೇತನ ಬಿಡುಗಡೆಗೊಳಿಸಲು ಆಗ್ರಹಿಸಿ ಎಸ್ಎಫ್ಐ ಸಂಘಟನೆ ಕಾರ್ಯಕರ್ತರು ಈಚೆಗೆ ವಿಶೇಷ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಜಿಲ್ಲೆಯ ಬಹುತೇಕ ಹಾಸ್ಟೆಲ್ಗಳು ದಿನಗೂಲಿ ನೌಕರರ ಮೇಲೆ ಅವಲಂಬಿತವಾಗಿವೆ. ಆದರೆ, ಹಾಸ್ಟೆಲ್ನಲ್ಲಿ ದಿನಗೂಲಿ ನೌಕರರಿಗೆ ಕೆಲಸದ ಭದ್ರತೆ, ಕನಿಷ್ಠ ಕೂಲಿ ಹಣ ಸಮಯಕ್ಕೆ ಸಿಗದಿರುವುದರಿಂದ ಬದುಕು ಸಾಗಿಸುವುದು ದುಸ್ತರವಾಗಿದೆ. ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟಕರವಾಗಿದೆ. ಜತೆಗೆ ಹಾಸ್ಟೆಲ್ ದಿನಗೂಲಿ ನೌಕರರ ಮೇಲೆ ನಿತ್ಯ ಒಂದಲ್ಲೊಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಸ್ಟೆಲ್ ದಿನಗೂಲಿ ನೌಕರರ ಸಂಕಷ್ಟಗಳಿಗೆ ಸ್ಪಂದಿಸಿ ನೌಕರರಿಗೆ ಅನ್ಯಾಯವೆಸಗುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಅವರ ಬಾಕಿ ವೇತನ ಬಿಡುಗಡೆಗೆ ಮುಂದಾಗಬೇಕು ಎಂದರು. ಶಿವಾನಂದ ಬೋಸ್ಲೆ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಎಸ್ಸಿ, ಎಸ್ಟಿ, ಬಿಸಿಎಂ ಹಾಸ್ಟೆಲ್ ಮತ್ತು ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಅಡುಗೆ, ಸ್ವಚ್ಛತೆ, ಕಾವಲು ಮುಂತಾದ ಕೆಲಸ ನಿರ್ವಹಿಸುತ್ತಿರುವ ನೌಕರರು ಹತ್ತಾರು ವರ್ಷಗಳಿಂದ ಗುತ್ತಿಗೆ, ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ. ಅವರನ್ನು ಕಾಯಂಗೊಳಿಸಿ ಕಾನೂನುಬದ್ಧ ವೇತನ ನೀಡಲು ಸರ್ಕಾರ ಮುಂದಾಗಬೇಕು ಎಂದರು. ವಿಶೇಷ ತಹಸೀಲ್ದಾರ್ ಪರವಾಗಿ ಕಚೇರಿಯ ಅಧಿಕಾರಿ ಎನ್.ಎಚ್.ನದಾಫ ಸಂಘಟಿಕರಿಂದ ಮನವಿ ಸ್ವೀಕರಿಸಿದರು. ರೂಪಣ್ಣ ಜಾಟೋತ್ತರ, ಲಕ್ಷ್ಮವ್ವ, ಪಾರವ್ವ, ಉಮ್ಮವ್ವ, ನಿಂಗಪ್ಪ ಸೋಂಪುರ ರಾಮು ರಾಠೋಡ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

