ಸಮಸ್ಯೆಗಳ ಸರಮಾಲೆಗೆ ಪರಿಹಾರ ಸಿಗುವುದೇ?
ಮುಂಡರಗಿ: ವಿಧಾನಸಭೆ ಚುನಾವಣೆ ಮುಗಿದ ನಂತರ ಅಂದರೆ 6 ತಿಂಗಳ ಹಿಂದೆ ಅಧಿಕಾರಿಗಳ ಪರಿಚಯಕ್ಕಾಗಿ ಜರುಗಿದ ಪ್ರಥಮ ಕೆಡಿಪಿ ಸಭೆ ನಡೆದಿದ್ದನ್ನು ಬಿಟ್ಟರೆ, ನ. 30ರಂದು ಜರುಗುತ್ತಿರುವುದು ನೂತನ ಶಾಸಕರ 2ನೇ ಕೆಡಿಪಿ ಸಭೆಯಾಗಿದೆ.
ಮೊದಲ ಸಭೆಯ ಸಂದರ್ಭದಲ್ಲಿ ಕಾಂಗ್ರೆಸ್ನ ಎಲ್ಲ ಕಾರ್ಯಕರ್ತರೂ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಂದು ಅಧಿಕಾರಿಗಳನ್ನು ಹೆಚ್ಚು ಮಾತನಾಡಿಸದೇ ಕೇವಲ ಪರಸ್ಪರ ಪರಿಚಯ ಮಾಡಿಕೊಳ್ಳುವ ಸಭೆ ಮಾತ್ರ ನಡೆದಿತ್ತು. ಇದೀಗ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಅನೇಕ ಸಮಸ್ಯೆಗಳಿವೆ. ಕೆಲವು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಇನ್ನು ಕೆಲವು ಗ್ರಾಮಗಳಲ್ಲಿ ಮಹಿಳಾ ಶೌಚಾಲಯದ ಸಮಸ್ಯೆ, ಕೆಲವು ಗ್ರಾಮಗಳಲ್ಲಿ ಸಂತೆ ನಡೆಸಲು ಜಾಗೆಯ ಸಮಸ್ಯೆ, ಹಾಸ್ಟೇಲ್ಗಳ ಸ್ವಚ್ಛತೆಯ ಸಮಸ್ಯೆ ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಪಟ್ಟಣ ಸೇರಿದಂತೆ ಪುರಸಭೆ ವ್ಯಾಪ್ತಿಯ ಶಿರೋಳ, ರಾಮೇನಹಳ್ಳಿ ಗ್ರಾಮಗಳಲ್ಲಿ ಸಾಕಷ್ಟು ಸ್ವಚ್ಛತೆಯ ಕೊರತೆಯಿದೆ. ರಾಮೇನಹಳ್ಳಿ ಹಾಗೂ ಮುಂಡರಗಿ ಪಟ್ಟಣದಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿಯೇ ಅನೇಕ ಮಕ್ಕಳು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಪಟ್ಟಣದಲ್ಲಿ ಪುರಸಭೆಯಿಂದ ಅಲ್ಲಲ್ಲಿ ಇಡಲಾಗಿರುವ ಕಸದ ತೊಟ್ಟಿಯ ಸುತ್ತಮುತ್ತ ಸಾರ್ವಜನಿಕರು ತಿಪ್ಪೆ ನಿರ್ಮಾಣ ಮಾಡಿದ್ದಾರೆ. ಹೈಮಾಸ್ಕ್ ದೀಪಗಳು ಕಾರ್ಯ ಸ್ಥಗಿತಗೊಳಿಸಿವೆ.
ಸರ್ಕಾರಿ ಮೆಟ್ರಿಕ್ಪೂರ್ವ ಬಾಲಕರ, ಹಾಗೂ ಬಾಲಕಿಯರ, ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ಎಸ್ಸಿ, ಎಸ್ಟಿ ಹಾಸ್ಟೆಲ್ಗಳು ಹಾಗೂ ಬಿಸಿಎಂ ಹಾಸ್ಟೆಲ್ಗಳು ಅನೇಕ ಸಮಸ್ಯೆ ಎದುರಿಸುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ.
ತಾಲೂಕಿನ ವಿರೂಪಾಪುರ, ಹೆಸರೂರ, ಮಲ್ಲಿಕಾರ್ಜುನಪುರ, ಕಪ್ಪತ್ತಗುಡ್ಡ, ಮುಂಡರಗಿ ಪುರಸಭೆ ವ್ಯಾಪ್ತಿಯ ಹುಡ್ಕೋ ಕಾಲೋನಿ ಸೇರಿದಂತೆ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇದಲ್ಲದೇ ತಾಲೂಕಿನಲ್ಲಿ ನೂರಾರು ಸಮಸ್ಯೆಗಳು ತಾಂಡವಾಡುತ್ತಿದ್ದು, ರೋಣ ಶಾಸಕ ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಶನಿವಾರ ಜರುಗುವ ಕೆಡಿಪಿ ಸಭೆಯಲ್ಲಿ ಮೂಲ ಸೌಲಭ್ಯಗಳ ಈಡೇರಿಕೆಗೆ ಬೇಕಾದ ಕ್ರಮ ಕೈಗೊಳ್ಳುವರೋ ಎನ್ನುವುದನ್ನು ಜನತೆ ಕಾದು ನೋಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

