ಗದಗ

ಅಮಾಯಕರ ಮೇಲೆ ಪ್ರಕರಣ ದಾಖಲು ಕ್ರಮ ನಿಲ್ಲಲಿ: ಲಮಾಣಿ

Published On :

ಶಿರಹಟ್ಟಿ: ಪರವಾನಗಿ ಪಡೆದು ನಿಗದಿತ ಪ್ರದೇಶದಲ್ಲಿ ಅಧಿಕೃತ ಮಾರಾಟ ಮಾಡುವ ಮಾಲೀಕರೆ ತಾಲೂಕಿನ 29 ಲಂಬಾಣಿ ತಾಂಡಾಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಬೆಂಬಲದಿಂದ ಸಾರಾಯಿ ಪೂರೈಸುತ್ತಿದ್ದು, ಅವರ ಮೇಲೆ ಶಿಸ್ತುಕ್ರಮ ಜರುಗಿಸಿ ಪ್ರಕರಣ ದಾಖಲಿಸುವ ಬದಲು ಅಮಾಯಕ ಲಂಬಾಣಿ ಜನರ ಮೇಲೆ ಪ್ರಕರಣ ದಾಖಲಿಸಿ ಗುಂಡಾ ಪ್ರವೃತ್ತಿಯಲ್ಲಿ ಜನರನ್ನು ಸಿಲುಕಿಸುವ ಹುನ್ನಾರ ನಡೆಸಿರುವ ಅಬಕಾರಿ ಇಲಾಖೆ ಕ್ರಮ ಸರಿಯಲ್ಲ ಎಂದು ತಾಲೂಕು ಬಂಜಾರ ಲಂಬಾಣಿ ಕಲ್ಯಾಣ ಸೇವಾ ಸಂಘದ ಅಧ್ಯಕ್ಷ ದೀಪಕ ಲಮಾಣಿ, ಪ್ರಧಾನ ಕಾರ್ಯದರ್ಶಿ ಕಿರಣ ಲಮಾಣಿ ಹೇಳಿದ್ದಾರೆ.
ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಕ್ರಮ ಸಾರಾಯಿ ಮಾರಾಟ ಮಾಡುವ ಪ್ರಕರಣದಲ್ಲಿ ಅಮಾಯಕರು ಸಿಲುಕಿಕೊಂಡಿದ್ದು, ಅವರನ್ನು ನಿರ್ದೋಷಿ ಎಂದು ಪ್ರಕರಣದಿಂದ ಕೈಬಿಡಬೇಕು. ಜತೆಗೆ ಸಾರಾಯಿ ಮುಕ್ತ ತಾಂಡಾವನ್ನಾಗಿ ಪರಿವರ್ತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಜೀತ ಪದ್ಧತಿ ಇನ್ನು ಜೀವಂತವಾಗಿದೆ. ಇದರಿಂದ ಅನೇಕ ಲಂಬಾಣಿಗರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಬೆಳಕಿಗೆ ಬಂದಿದೆ. ಜೀತ ಪದ್ಧತಿ ನಿರ್ಮೂಲನೆಗೆ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು.
ಸುಮಾರು ವರ್ಷಗಳಿಂದ ಗುಡ್ಡಗಾಡು ಪ್ರದೇಶದಲ್ಲಿಯೇ ವಾಸಮಾಡಿಕೊಂಡಿರುವ ಲಂಬಾಣಿಗರು ಗ್ರಾಮಗಳ ಅಕ್ಕಪಕ್ಕದಲ್ಲಿರುವ ಸರ್ಕಾರಿ ಬಂಜರು ಭೂಮಿ ಸಾಗುವಳಿ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಅರಣ್ಯ ಇಲಾಖೆಯವರು ಕಿರುಕುಳ ನೀಡಿ ಒಕ್ಕಲೆಬ್ಬಿಸುತ್ತಿದ್ದಾರೆ. ಈ ಕ್ರಮವನ್ನು ಕೈಬಿಟ್ಟು ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಕಲ್ಯಾಣ ಸಂಘದ ತಾಲೂಕು ಮಟ್ಟದ ಸಮಾವೇಶ ನಡೆಸುವ ಕುರಿತು ಅ. 10ರಂದು ಬೆಳ್ಳಟ್ಟಿ ಗ್ರಾಮದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು. ಶೇಖಪ್ಪ ಲಮಾಣಿ, ಜಾನು ಲಮಾಣಿ, ಶಿವು ಲಮಾಣಿ, ಠಾಕ್ರಪ್ಪ ಮಾಳಗಿಮನಿ, ದೇವಪ್ಪ ಲಮಾಣಿ, ಪರಮೇಶ ಲಮಾಣಿ, ರಾಮಣ್ಣ ಲಮಾಣಿ, ಕುಮಾರ ಲಮಾಣಿ, ವೆಂಕಪ್ಪ ಲಮಾಣಿ, ಶಿವಪುತ್ರಪ್ಪ ಲಮಾಣಿ, ಸೋಮು ಲಮಾಣಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.