ಗದಗ

ಹಿರಾ ಇಂಟರ್‌ನ್ಯಾಶನಲ್ ವಿವಿ ರದ್ದುಗೊಳಿಸಿ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 6
ಆಂಧ್ರ ಪ್ರದೇಶದ ಸುಪ್ರಸಿದ್ಧ ತಿರುಪತಿಯ ಸಮೀಪ ಹಿರಾ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ವಿಶ್ವವಿದ್ಯಾಲಯಕ್ಕೆ ನೀಡಿರುವ ಅನುಮತಿ ರದ್ದು ಮಾಡಲು ಆಗ್ರಹಿಸಿ ಭಾನುವಾರ ನಗರದ ಗಾಂಧಿ ವೃತ್ತದಲ್ಲಿ ಹಿಂದೂ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪದಾಧಿಕಾರಿಗಳು ಮಾತನಾಡಿ, ಹಿಂದೂಗಳ ಶ್ರದ್ಧಾ ಸ್ಥಾನವಾಗಿರುವ ತಿರುಪತಿ ದೇವಸ್ಥಾನದ ಸಮೀಪದ ಚಂದ್ರಗರಿಯಲ್ಲಿ ಹಿಂದೂಗಳ ತಿಮ್ಮಪ್ಪ ಮಂದಿರದ ಭೂಮಿಯಲ್ಲಿ ಹಿರಾ ಇಂಟರ್‌ನ್ಯಾಷನಲ್ ವಿಶ್ವವಿದ್ಯಾಲಯ ಕಟ್ಟಡ ಕಾಮಗಾರಿಯು ಕಾನೂನು ಬಾಹಿರವಾಗಿ ನಡೆಯುತ್ತಿದೆ. ತಿರುಪತಿ ದೇವಸ್ಥಾನದ ಮಹಾತ್ಮೆ, ಇಲ್ಲಿ ಸುರಕ್ಷತೆ ದೃಷ್ಟಿಕೋನದಿಂದ ಸತತ ತಲೆದೋರುವ ಅಪಾಯ ಮತ್ತು ತೀರ್ಥ ಕ್ಷೇತ್ರದ ಪಾವಿತ್ರ್ಯ ರಕ್ಷಣೆ ಇವೆಲ್ಲ ದೃಷ್ಟಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಇಸ್ಲಾಮಿಕ್ ವಿಶ್ವವಿದ್ಯಾಲಯವನ್ನು ತಕ್ಷಣ ಸ್ಥಗಿತಗೊಳಿಸಬೇಕು.
ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಹೀಗೆ ಆಘಾತ ಮಾಡುವ ಜಾತ್ಯತೀತ ಸರ್ಕಾರವು ಮುಸಲ್ಮಾನರ ತೀರ್ಥ ಕ್ಷೇತ್ರ ಮೆಕ್ಕಾ-ಮದೀನಾ ಮತ್ತು ಕ್ರೈಸ್ತರ ವ್ಯಾಟಿಕಾನ್‌ನಲ್ಲಿ ಹಿಂದೂಗಳ ವಿಶ್ವವಿದ್ಯಾಲಯ ಕಟ್ಟುವ ವಿಚಾರವನ್ನು ಏಕೆ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಶ್ವವಿದ್ಯಾಲಯದಿಂದ ಭವಿಷ್ಯದಲ್ಲಿ ನಿರ್ಮಾಣವಾಗಬಹುದಾದ ಉದ್ವಿಗ್ನತೆ ಮತ್ತು ಸಂಘರ್ಷ ತಡೆಗಟ್ಟಲು ಈಗಲೇ ಪರಿಹಾರೋಪಾಯಗಳನ್ನು ಕಂಡು ಹಿಡಿಯುವುದು ಅತ್ಯವಶ್ಯಕವಾಗಿದ್ದು, ಅದಕ್ಕಾಗಿ ಈ ವಿಶ್ವವಿದ್ಯಾಲಯಕ್ಕೆ ಅನುಮತಿ ನಿರಾಕರಿಸಿ ಕಾಮಗಾರಿ ಸ್ಥಗಿತಗೊಳಿಸುವುದು ಅವಶ್ಯವಾಗಿದೆ. ಇಲ್ಲದಿದ್ದರೆ ಇದರ ವಿರುದ್ಧ ಸಮಸ್ತ ಹಿಂದೂಗಳು ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ನಿರುದ್ಯೋಗಿ ಮುಸ್ಲಿಂ ಯುವಕರಿಗೆ ಟೂರಿಸ್ಟ್ ವಾಹನ ಖರೀದಿಸಲು ಅನುಕೂಲವಾಗುವಂತೆ 2 ಲಕ್ಷ ಅನುದಾನ ನೀಡುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಜಾತ್ಯತೀತ ತತ್ವದ ಆದಾರದ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರ ನ್ಯಾಯಾಲಯದ ಆದೇಶವನ್ನು ಮೂಲೆ ಗುಂಪು ಮಾಡಿ ಧರ್ಮದ ಆಧಾರದ ಮೇಲೆ ಸಹಾಯ ನೀಡಲು ಹೊರಟಿರುವುದು ಸಂವಿಧಾನ ಬಾಹಿರ ಕೃತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಎಸ್.ಎಸ್. ಮೂಗಂಡಮಠ, ಎಮ್.ಎಸ್. ಪಾಟೀಲ, ಜಿ.ಆರ್. ಹಿರೇಮಠ, ಜೆ.ಡಿ. ಹೆಬಸೂರ, ಎಸ್.ಆರ್. ಪಾಟೀಲ, ಶ್ವೇತಾ ಗೊಂದಿ, ಲಕ್ಷ್ಮಿ ಪಡೆಸೂರ, ಎಸ್.ಆರ್. ಗಂಜಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.