ಗದಗ

ವಿದೇಶಿ ವಸ್ತು, ಸಂಸ್ಕೃತಿ ತಿರಸ್ಕರಿಸಿ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 7
ವಿದೇಶಿ ವಸ್ತುಗಳನ್ನು ಹಾಗೂ ಸಂಸ್ಕೃತಿಯನ್ನು ತಿರಸ್ಕರಿಸಿ, ಸ್ವದೇಶಿ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಉತ್ತರ ಕರ್ನಾಟಕದ ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು. ಅವರು ಭಾನುವಾರ ಶ್ರೀಕ್ಷೇತ್ರ ಹೊಳಲಮ್ಮ ದೇವಿ ದೇವಸ್ಥಾನದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇಂದು ನಾವು ಸೇವಿಸುತ್ತಿರುವ ಆಹಾರ, ನೀರು, ಗಾಳಿ ಎಲ್ಲವೂ ಕಲುಷಿತಗೊಂಡಿದೆ. ಗೊಂದಲಮಯ ಜೀವನ ಪದ್ಧತಿಯಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಜತೆಗೆ ವೈಚಾರಿಕ ಅವನತಿಯೂ ಉಂಟಾಗುತ್ತಿದೆ. ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇವೆಲ್ಲವುಗಳಿಂದಾಗಿ ನಮ್ಮ ಶಾರೀರಿಕ ಮಾನಸಿಕ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಯೋಗಾಭ್ಯಾಸದಲ್ಲಿ ತೊಡಗುವುದರಿಂದ ಶರೀರ ಸದೃಢಗೊಳಿಸಿಕೊಳ್ಳಬಹುದು. ಯೋಗದಿಂದ ವಾತ, ಪಿತ್ತ, ಕಫ, ತ್ರಿದೋಷಗಳು ಸಮಸ್ಥಿತಿಯಲ್ಲಿ ಉಳಿಯುತ್ತವೆ. ಶರೀರದ ಯಂತ್ರ ವ್ಯವಸ್ಥಿತಗೊಳ್ಳುತ್ತದೆ. ಬೊಜ್ಜು, ಗ್ಯಾಸ್ ತೊಂದರೆ, ಮದುಮೇಹ, ರಕ್ತದ ಒತ್ತಡ, ಅಸ್ತಮಾ, ಹೃದಯ ರೋಗ, ಮಲಬದ್ಧತೆ, ಪ್ರಾರಂಭಿಕ ಹಂತದ ಕ್ಯಾನ್ಸರ್‌ದಂತಹ ಭಯಂಕರ ರೋಗಗಳು ನಿವಾರಿಸಲ್ಪಡುತ್ತವೆ.
ವಿಶ್ವವಿಖ್ಯಾತ ಯೋಗಗುರು ರಾಮದೇವ ಅವರು ಪತಂಜಲಿ ಯೋಗಪೀಠ ಸ್ಥಾಪಿಸಿ ಕಳೆದ 20 ವರ್ಷಗಳಿಂದ ದೇಶಾದ್ಯಂತ ಪ್ರವಾಸಮಾಡಿ ಯೋಗ ಶಿಬಿರಗಳನ್ನು ನಡೆಸಿದ್ದಾರೆ. ಆ ಮೂಲಕ 11 ಕೋಟಿಗೂ ಅಧಿಕ ನಾಗರಿಕರು ಆರೋಗ್ಯ ಲಾಭ ಪಡೆದಿರುತ್ತಾರೆ. ಉತ್ತರ ಕರ್ನಾಟಕದಲ್ಲಿ 500ಕ್ಕಿಂತ ಹೆಚ್ಚು ಉಚಿತ ಯೋಗ ತರಬೇತಿ ಕೇಂದ್ರಗಳು, 50ಕ್ಕಿಂತ ಅಧಿಕ ಪತಂಜಲಿ ಚಿಕಿತ್ಸಾಲಯಗಳಲ್ಲಿ ಪತಂಜಲಿ ಯೋಗಪೀಠ ಹರಿದ್ವಾರದಿಂದ ತರಬೇತಿ ಪಡೆದ ಆಯುರ್ವೇದ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯುತ್ತಿದೆ.
ಈ ಪವಿತ್ರ ಕಾರ್ಯದಲ್ಲಿ 3 ಸಾವಿರಕ್ಕಿಂತ ಹೆಚ್ಚು ಯೋಗ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯೋಗ ಸೇವೆಯ ಕಾರ್ಯವನ್ನು ಪ್ರತಿಯೊಂದು ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳಲ್ಲಿ ತಲುಪಿಸಲು 3 ತಿಂಗಳ ಅಭಿಯಾನವನ್ನು ಸಂಸ್ಥೆ ಪ್ರಾರಂಭಿಸಿದೆ. ಸಾರ್ವಜನಿಕರು ಸಹಕರಿಸಬೇಕು ಎಂದರು. ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ರುದ್ರಣ್ಣ ಗುಳಗುಳಿ, ಗಿರೀಶ ಭಾರತಿ, ಸಂಜಯ ಸ್ವಾಮಿ, ಬಾಸ್ಕರ್, ದ್ರಾಕ್ಷಾಯಿಣಿ ಶಿವಕುಮಾರ, ಬಸವರಾಜ ಸಂಗಪ್ಪಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.