ಬೋಧನಾ ಶುಲ್ಕ ಮರುಪಾವತಿಗೆ ಆಗ್ರಹ: ಮನವಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 8
ಪಟ್ಟಣದ ಪುರಸಭೆಯ ಕಲಾ ಮಹಾವಿದ್ಯಾಲಯದ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು 2012-13ರಲ್ಲಿ ಸರ್ಕಾರಕ್ಕೆ ತುಂಬಿದ ಬೋಧನಾ ಶುಲ್ಕ ಮರಳಿಸುವಂತೆ ಒತ್ತಾಯಿಸಿ ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ಪ್ರಾಚಾರ್ಯರಿಗೆ ಮಂಗಳವಾರ ಮನವಿ ಅರ್ಪಿಸಿದರು.
2012-13ನೇ ಸಾಲಿನಲ್ಲಿ ಪಟ್ಟಣದ ಪುರಸಭೆಯ ಕಲಾ ಮಹಾವಿದ್ಯಾಲಯದ ಪದವಿ ವರ್ಗದ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ರು. 1714 ಬೋಧನಾ ಶುಲ್ಕವನ್ನು ಸರ್ಕಾರದ ಆದೇಶದಂತೆ ಪಡೆದುಕೊಂಡು ಜಿಲ್ಲೆಯ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಖಾತೆಗೆ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಖಾತೆ ನಂ. 1080 ಗೆ ಸುಮಾರು ರು. 5.50 ಲಕ್ಷ ಜಮೆ ಮಾಡಲಾಗಿತ್ತು. ನಂತರ ಸರ್ಕಾರ ಈ ಬೋಧನಾ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಖಾತೆಗೆ ಮರಳಿ ಜಮೆ ಮಾಡುವುದಾಗಿ ತಿಳಿಸಿತ್ತು. ಅದರಂತೆ ಪದವಿ 1ನೇ ವರ್ಗದ 111 ವಿದ್ಯಾರ್ಥಿಗಳಿಗೆ ರು. 1 ಸಾವಿರದಂತೆ ರು. 1,11,256 ಮಾತ್ರ ಮರಳಿಸಿದೆ. ಇನ್ನುಳಿದ 78,998 ನೀಡಿಲ್ಲ. ಅಲ್ಲದೇ ಪದವಿ 2ನೇ ವರ್ಗದ 126 ವಿದ್ಯಾರ್ಥಿಗಳ 2,15,940 ಮತ್ತು 3ನೇ ವರ್ಷದ 100 ವಿದ್ಯಾರ್ಥಿಗಳ ರು. 1,71,400 ಬೋಧನಾ ಶುಲ್ಕ ಸೇರಿ ಸುಮಾರು ರು. 4,67,364 ಇದುವರೆಗೂ ಮರಳಿ ನೀಡಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪ್ರಾಚಾರ್ಯರಿಗೆ ಮನವಿ ಅರ್ಪಿಸಿದ ನಂತರ ಎಬಿವಿಪಿ ಸಂಘಟನೆಯ ತಾಲೂಕು ಕಾರ್ಯದರ್ಶಿ ಪ್ರವೀಣ ಬೋಮಲೆ ಮಾತನಾಡಿ, ಕಳೆದ 1 ವರ್ಷಕ್ಕೂ ಮೆಲ್ಪಟ್ಟಿದ್ದರೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಯು ಬೋಧನಾ ಶುಲ್ಕದ ಹಣವನ್ನು ಮರಳಿ ನೀಡುತ್ತಿಲ್ಲ. ಕಾಲೇಜಿನ ಆಡಳಿತ ಮಂಡಳಿ ಕೂಡ ಶುಲ್ಕವನ್ನು ಮರಳಿ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ವಿದ್ಯಾರ್ಥಿಗಳ ಬೋಧನಾ ಶುಲ್ಕದ ಹಣವನ್ನು ವಾರದೊಳಗೆ ಮರಳಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು. ಪ್ರಾಚಾರ್ಯ ಐ.ಸಿ. ಧರಣಿ ಮಾತನಾಡಿ, ಈ ಕುರಿತು ನಾವು ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಮುಖೇನ ವಿನಂತಿಸಿಕೊಂಡಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ. ಬೋಧನಾ ಶುಲ್ಕವನ್ನು ಸರ್ಕಾರ ಕೂಡಲೇ ಮರಳಿಸಿದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯವನ್ನು ಕಾಲೇಜಿನಿಂದ ಮಾಡಲಾಗುವುದು ಎಂದರು. ಎಸ್.ಎ. ಗುಡಗುಂಟಿ, ಪಿ.ಪಿ. ಕಮಡೊಳ್ಳಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

