ಗದಗ

ಚರಂಡಿ ಸ್ವಚ್ಛಗೊಳಿಸಿದ ಪುರಸಭೆ ಸದಸ್ಯರು

Published On :

ಮುಂಡರಗಿ: ವಿಜಯದಶಮಿಯನ್ನು ಹೊಸಬಟ್ಟೆ ತೊಟ್ಟುಕೊಂಡು ಬನ್ನಿ ಮುಡಿದು ಸಂಭ್ರಮದಿಂದ ಆಚರಿಸಬೇಕಾದ ದಿನ. ಆದರೆ, ಇಲ್ಲಿಯ ಪುರಸಭೆ ಸದಸ್ಯರು ಪಟ್ಟಣ ಸ್ವಚ್ಛವಾಗಿರಬೇಕು ಎಂದು ಮನಗಂಡು ಹಬ್ಬದ ವಾತಾವರಣವನ್ನು ಬದಿಗಿರಿಸಿ ಸಲಿಕೆಗಳನ್ನು ತೆಗೆದುಕೊಂಡು 6ನೇ ವಾರ್ಡಿನ ಚರಂಡಿ ಸ್ವಚ್ಛಗೊಳಿಸಿದರು.
ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ, ವೀರೇಶ ಸಜ್ಜನರ, ಲಿಂಗರಾಜಗೌಡ ಪಾಟೀಲ, ಮುದಿಯಪ್ಪ ಕುಂಬಾರ, ರಾಘವೇಂದ್ರ ಕುರಿ ಮತ್ತು ಮಹಿಳಾ ಸದಸ್ಯರ ಪತಿ ಪಾಲಾಕ್ಷಿ ಗನದಿನ್ನಿ, ರಾಮು ಭಜಂತ್ರಿ, ಅಬ್ದುಲ್ ಖುರೇಶಿ ಮುಂತಾದವರು ಸೇರಿ 6ನೇ ವಾರ್ಡ್‌ನ 150 ಮೀ ಚರಂಡಿಯನ್ನು ಸ್ವಚ್ಛಗೊಳಿಸಿದರು. ನಾವು ಸದಸ್ಯರು, ಕಾರ್ಮಿಕರಿಂದ ಕೆಲಸ ಮಾಡಿಸಬೇಕು ಎಂಬ ಹಮ್ಮು-ದಿಮ್ಮು ತೋರಿಸದೇ ಸ್ವತಃ ಸಲಿಕೆಗಳನ್ನು ಹಿಡಿದು ಚರಂಡಿಯಲ್ಲಿ ಇಳಿದು, ಹೂಳನ್ನು ತೆಗೆದು ಸ್ವಚ್ಛ ಮಾಡಿದರು. ಸದಸ್ಯರಾಗಿ ಆಯ್ಕೆಯಾಗಿ 9 ತಿಂಗಳಾದರೂ ಪುರಸಭೆ ಪ್ರವೇಶಿಸುವ ಯೋಗ ಕೂಡಿಬಂದಿಲ್ಲ. ಪಟ್ಟಣದ ಅನೇಕ ವಾರ್ಡ್‌ಗಳಲ್ಲಿ ಚರಂಡಿಗಳು ಹೂಳು ತುಂಬಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಕೊಡುತ್ತಿವೆ. ಈ ಕುರಿತು ಸಾರ್ವಜನಿಕರು ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ಈ ದೂರುಗಳ ಕುರಿತು ಪುರಸಭೆ ಮುಖ್ಯಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೆ ಇರುವುದು ಇಲ್ಲಿನ ಸಾರ್ವಜನಿಕರಿಗೆ ತೀವ್ರ ತೊಂದರೆಯನ್ನುಂಟು ಮಾಡಿದೆ. ಹಾಗಾಗಿ ನಾವೇ ಈ ಪಟ್ಟಣದ ಚರಂಡಿಗಳ ಸ್ವಚ್ಛತೆಗೆ ನಿಂತಿದ್ದೇವೆ ಎಂದು ಪುರಸಭೆ ಸದಸ್ಯರು ದೂರಿದರು. ಪಟ್ಟಣದ ಸ್ವಚ್ಛತೆಯನ್ನು ಹಂತಹಂತವಾಗಿ ಮಾಡುತ್ತಾ ಬಂದಿದ್ದೇವೆ. ಹಬ್ಬದ ನಿಮಿತ್ತ ಸ್ವಲ್ಪ ಅಡಚಣೆಯಾಗಿದೆ. ಪಟ್ಟಣದ ಸ್ವಚ್ಛತೆ ಕಾಪಾಡುವುದು ಪುರಸಭೆಯ ಕರ್ತವ್ಯ ಅದು ನಿರಂತರವಾಗಿ ನಡೆಯುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.