ಶರಣರ ಅವಹೇಳನ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಅ. 17
13ನೇ ಶತಮಾನದ ರಾಂಘವಾಂಕ ಕವಿ ವಿರಚಿತ ಸಿದ್ಧರಾಮೇಶ್ವರ ಅಸಲಿ ಚರಿತೆಯನ್ನು ವಿರೂಪಗೊಳಿಸಿ ನಕಲಿ ಚರಿತೆಯನ್ನು ಪ್ರಕಾಶನ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಗುರುವಾರ ಗದುಗಿನ ಬಸವ ಸೇನೆಯ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಜರುಗಿಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಜಗಜ್ಯೋತಿ ಬಸವಣ್ಣನವರ ಅನುಯಾಯಿಗಳು ದೇಶ-ವಿದೇಶದಲ್ಲಿದ್ದಾರೆ. ಅವರ ಪುತ್ಥಳಿಯನ್ನು ಭಾರತದ ಪಾರ್ಲಿಮೆಂಟ್, ಇಂಗ್ಲೆಂಡ್ ಪಾರ್ಲಿಮೆಂಟಿನ ಮುಂದೆ ಪ್ರತಿಷ್ಠಾಪಿಸಲಾಗಿದೆ. ಕೋಟ್ಯಂತರ ಜನರು ಬಸವಣ್ಣನವರ ಭಕ್ತರಿದ್ದಾರೆ. 12ನೇ ಶತಮಾನದಲ್ಲಿ ಜಾತ್ಯತೀತ ವ್ಯವಸ್ಥೆಗೆ ಸವಾಲು ಹಾಕಿದ ಬಸವಣ್ಣನವರು 770 ವಿವಿಧ ಕಾಯಕ ಮತ್ತು ಸಮಾಜಿಕ ಸ್ತರಗಳಿಂದ ಬಂದ ಪ್ರತಿನಿಧಿಗಳನ್ನೊಳಗೊಂಡ ಜಗತ್ತಿನ ಮೊದಲ ಪಾರ್ಲಿಮೆಂಟ್ನ್ನು ಅನುಭವ ಮಂಟಪ ಎಂಬ ಹೆಸರಿನಲ್ಲಿ ಪ್ರತಿಷ್ಠಾಪಿಸಿದ್ದರು. ಅದು ದುಡಿಯುವ ವರ್ಗದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೊದಲ ಸಂಸತ್ ಆಗಿತ್ತು. ಅದು ಯುವಕರ, ಮಹಿಳೆಯರ ಮತ್ತು ದುಡಿಯುವ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ತಾಣವಾಗಿತ್ತು. ಯಾರಿಗೂ ತಿಳಿಯದ ಸಂಸ್ಕೃತವನ್ನು ಧಿಕ್ಕರಿಸಿ ಜನರು ಆಡುವ ಕನ್ನಡವನ್ನು ಧರ್ಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಅದರಲ್ಲಿಯೇ ಲಕ್ಷಾಂತರ ವಚನಗಳನ್ನು ರೂಪಿಸಿದರು. ಅಂತಹ ಮಹಾತ್ಮನ ಸಮಕಾಲಿನರಾಗಿದ್ದ ಸೊಲ್ಲಾಪುರದ ಸಿದ್ಧರಾಮೇಶ್ವರನನ್ನು ಕುರಿತು 13ನೇ ಶತಮಾನದಲ್ಲಿ ಕವಿ ರಾಘವಾಂಕನು 549 ಪದ್ಯಗಳನ್ನೊಳಗೊಂಡ ಸಿದ್ಧರಾಮೇಶ್ವರ ಚರಿತೆಯನ್ನು ಶ್ರೀ ಗುರು ಬಸವ ಲಿಂಗಾಯನಮಃ ಎಂದು ಭಕ್ತಿಯಿಂದ ಸ್ಮರಿಸುತ್ತ ಆ ಚರಿತೆ ಬರೆದಿದ್ದಾನೆ. ಆದರೆ, ಸಮಾನತೆಯನ್ನು ವಿರೋಧಿಸುವವರು ಇಂದಿಗೂ ಜೀವಂತವಾಗಿರುವ ಜಾತಿವಾದಿಗಳು ಈ ಸಿದ್ಧರಾಮೇಶ್ವರ ಚರಿತೆಗೆ 138 ಕೃತಕ ಪದ್ಯಗಳನ್ನು ಸೇರಿಸುವ ಮೂಲಕ ಕೃತಿಯನ್ನು ಸೊಲ್ಲಾಪುರದ ಸಿದ್ಧರಾಮೇಶ್ವರ ಗುಡಿಯ ಪೂಜಾರಿ ಕೇದಾರ ಆದಿಲಿಂಗಪ್ಪ ಹಬ್ಬು ಎಂಬವನು ವಿಕೃತಗೊಳಿಸಿದ್ದಾನೆ. ಇದನ್ನು ಕೆಲವು ಬಸವಾದಿ ಶರಣರನ್ನು ವಿರೋಧಿಸುವ ಕೆಲವು ಸ್ವಾಮಿಗಳ ಚಿತಾವಣೆ ಮೇರೆಗೆ ಉದ್ದೇಶ ಪೂರ್ವಕವಾಗಿ 2008ರಲ್ಲಿ ಪ್ರಕಟಿಸಲಾಗಿದೆ. ಈ ವಿಕೃತಿಯಲ್ಲಿ ಅಲ್ಲಮಪ್ರಭುದೇವರು, ಅಕ್ಕಮಹಾದೇವಿ, ಅಕ್ಕನಾಗಮ್ಮ, ಚೆನ್ನಬಸವಣ್ಣ ಮುಂತಾದ ಐತಿಹಾಸಿಕ ಶರಣರನ್ನು ದುರುದ್ದೇಶದಿಂದ ಅವಮಾನಿಸಿದ್ದಾರೆ. ಈ ಕಿಡಿಗೇಡಿ ಕೃತ್ಯದಿಂದ ಕೋಟ್ಯಂತರ ಬಸವಾಭಿಮಾನಿಗಳಿಗೆ ನೋವುಂಟು ಮಾಡಿದೆ. ಇದರಿಂದ ಸಾಮಾಜಿಕ ಶಾಂತಿ ಭಂಗವಾಗಿದೆ. ಕಾರಣ ಈ ಕೃತಿಯನ್ನು ಪ್ರಕಾಶಿಸಿದವರನ್ನು ಹಾಗೂ ಇದರ ಪ್ರಸ್ತಾವನೆಯನ್ನು ಬರೆದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ, ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಜರುಗಿಸಿ, ನಂತರ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ವಿನಾಯಕ ಮಾನ್ವಿ, ಗಂಗಣ್ಣ ಕೋಟಿ, ರವಿಂದ್ರ ಲಕ್ಕುಂಡಿ, ಶಶಿಕುಮಾರ ಕಳಸಾಪುರಶೆಟ್ಟರ, ಕಿಶನ್ ಮಾನ್ವಿ, ಶಿವರಾಜ ಕೋಟಿ, ಮಂಜುನಾಥ ದಾಮೋದರ, ಮಲ್ಲಿಕಾರ್ಜುನ ವಾಲಿ, ಕೊಟ್ರೇಶ ಮರಳಿ, ವಿಕ್ರಮ, ಶಿವರಾಜ ಕೋಟಿ, ವಿನಾಯಕ ಗೊರನವರ, ಈಶ್ವರ ಕೋಟಿ, ಮಹೇಶ ದಾನಪ್ಪಗೌಡ್ರ, ಚೈತನ್ಯ ಅಲಗೂರ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

