ಗದಗ

ಕಳಪೆ ಬೀಜ ಬಿತ್ತಿ ಕೈ ಸುಟ್ಟುಕೊಂಡ ರೈತರು

Published On :

ನರಗುಂದ: ಹತ್ತಾರು ಸಮಸ್ಯೆಗಳ ಮಧ್ಯೆಯೇ ಇರುವ ಅಲ್ಪ ತೇವಾಂಶದಲ್ಲಿ ಬಿತ್ತನೆ ಮಾಡಿರುವ ತಾಲೂಕಿನ ರೈತರು ಕಳಪೆ ಬೀಜ ಬಿತ್ತಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉತ್ತಮ ಫಸಲು ಬರುವ ನಿರೀಕ್ಷೆಯಿಂದ ಸಾವಿರಾರು ಹಣ ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಉತ್ತಮ ಬೆಳೆ ಬಾರದೆ ಬಾಡಿ ಹೋಗುತ್ತಿದ್ದು, ಇದು ಬೀಜದ ಗುಣಮಟ್ಟದಲ್ಲಿನ ಲೋಪದಿಂದ ಹೀಗಾಗುತ್ತಿದೆ. ಅದಕ್ಕಾಗಿ ಹಾನಿ ಅನುಭವಿಸಿದ ರೈತರಿಗೆ ಕಂಪನಿಯು ತಕ್ಷಣ ಪರಿಹಾರ ನೀಡಬೇಕು ಎಂದು ರೈತರು ಅಂಗಲಾಚುತ್ತಿದ್ದಾರೆ.  ತಾಲೂಕಿನ ಬೆಳ್ಳೇರಿ, ಲಖಮಾಪುರ, ವಾಸನ ಸೇರಿದಂತೆ ತಾಲೂಕಿನಲ್ಲಿ ಹರಿದಿರುವ ಮಲಪ್ರಭಾ ನದಿಯ ಅಕ್ಕಪಕ್ಕದಲ್ಲಿರುವ ಜಮೀನುಗಳಲ್ಲಿ ರೈತರಿಗೆ ಹೆಚ್ಚಿನ ಇಳುವರಿಯ ಆಮಿಷ ತೋರಿಸಿದ ಕಾವೇರಿ ಕಂಪನಿಯ ಗೋವಿನ ಜೋಳದ ಬೀಜ ಬಿತ್ತನೆ ಮಾಡಿದ್ದಾರೆ. ಬಿತ್ತನೆಯಾಗಿರುವ ಬೆಳೆ ಪ್ರಾರಂಭದಲ್ಲಿ ಉತ್ತಮವಾಗಿಯೇ ಬೆಳೆದಿದೆ. ಆದರೆ, ನಂತರ ಬೆಳೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮವಾಗಿ ತೆನೆಗಳು ಬಿಡುತ್ತಿಲ್ಲ. ಬಿಟ್ಟ ತೆನೆಗಳು ಸರಿಯಾದ ರೀತಿಯಲ್ಲಿ ಕಾಳು ಕಟ್ಟದೇ ಹಾಗೆಯೇ ಉದುರುತ್ತಿವೆ. ಇದು ಸಹಜವಾಗಿ ರೈತರನ್ನು ಆತಂಕಕ್ಕೀಡು ಮಾಡಿದೆ.
ಎಕರೆಗೆ ರು. 15 ಸಾವಿರ ಖರ್ಚು: 2 ವರ್ಷಗಳಿಂದ ತೀವ್ರ ಮಳೆ ಕೊರತೆ ಎದುರಿಸಿದ್ದ ತಾಲೂಕಿನ ರೈತರು ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಸರಿಯಾದ ಸಮಯಕ್ಕೆ ಮಳೆಯಾದ ಹಿನ್ನೆಲೆಯಲ್ಲಿ ಗೋವಿನಜೋಳ ಬಿತ್ತನೆಗೆ ಮುಂದಾಗಿದ್ದರು. ಮಳೆ ಕೊರತೆಯಾದರೂ ಕಾಲುವೆ ಅಥವಾ ಹೊಳೆಯ ನೀರನ್ನು ಬಳಸಿ ಉತ್ತಮ ಬೆಳೆ ಬೆಳೆಯಬಹುದೆಂದು ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ವಿವಿಧ ಕೃಷಿ ಕೆಲಸಗಳಿಗಾಗಿ ಪ್ರತಿ ಎಕರೆಗೆ ರು. 10- 15 ಸಾವಿರ ಖರ್ಚು ಮಾಡಿದ ರೈತರಿಗೀಗ ಕಳಪೆ ಬೀಜದಿಂದ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.
ಮಾರಾಟದ ಮೊದಲು ಪರಿಶೀಲಿಸಲಿ: ಗದಗ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ಪ್ರತಿ ವರ್ಷವೂ ಕಳಪೆ ಬೀಜಗಳು ರೈತರ ಜೀವ ಹಿಂಡುತ್ತಿವೆ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಮತ್ತು ವಿತರಣೆ ಮಾಡುವ ಬೀಜಗಳ ಕಂಪನಿಯ ಸಂಪೂರ್ಣ ಮಾಹಿತಿ ಪಡೆಯಬೇಕು. ಅವರು ತಯಾರಿಸಿರುವ ಬೀಜಗಳ ಸಮಗ್ರ ಪರಿಶೀಲನೆ ನಡೆಸದೇ ಅಧಿಕಾರಿಗಳು ಯಾವುದೋ ಹಿತಾಸಕ್ತಿಗೆ ಬಲಿಯಾಗಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಬೀಜ ಕಂಪನಿಗಳಿಗೆ ಬೀಜ ಮಾರಾಟಕ್ಕೆ ಅನುಮತಿ ನೀಡುತ್ತಿದ್ದು, ಇದರಿಂದ ರೈತರಿಗೆ ಹಾನಿಯಾಗುತ್ತಿದೆ. ಬೀಜ ಮಾರಾಟದಿಂದ ಕಂಪನಿಗೆ ಹಣ ಸಂದಾಯವಾಗಿರುತ್ತದೆ. ಆದರೆ ಒಂದೊಮ್ಮೆ ಬೀಜ ಸರಿಯಾಗಿ ಹುಟ್ಟದೇ ಇದ್ದಲ್ಲಿ, ಆ ವರ್ಷ (ಹಿಂಗಾರು ಅಥವಾ ಮುಂಗಾರು) ಸಂಪೂರ್ಣ ಮುಗಿದು, ರೈತ ಮತ್ತೊಂದು ವರ್ಷ ಕಾಯುವಂತಾಗುತ್ತದೆ. ಅದಕ್ಕಾಗಿ ಯಾರೋ ಮಾಡಿದ ತಪ್ಪಿಗೆ ರೈತ ಶಿಕ್ಷೆ ಅನುಭವಿಸುವಂತಾಗುತ್ತಿದ್ದು, ಈ ಕುರಿತು ಸರ್ಕಾರ ಮತ್ತು ಕೃಷಿ ಇಲಾಖೆ ಗಂಭೀರ ಚಿಂತನೆ ಮಾಡಬೇಕಿದೆ.

ಎಕರೆಗೆ ರು. 20-25 ಸಾವಿರ ಪರಿಹಾರ ನೀಡಿ
ಕಾವೇರಿ ಕಂಪನಿಯ ಬೀಜ ಬಿತ್ತನೆ ಮಾಡಿ ರೈತರು ಕೈ ಸುಟ್ಟುಕೊಂಡಿದ್ದಾರೆ. ಇಂತಹ ರೈತರಿಗೆ ಕಾವೇರಿ ಕಂಪನಿಯವರು ಪ್ರತಿ ಎಕರೆಗೆ ರು. 20-25 ಸಾವಿರ ಪರಿಹಾರ ನೀಡಬೇಕು. ಈಗಗಾಲೇ ಈ ಬಗ್ಗೆ ಕಂಪನಿಯ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಕಂಪನಿ ತಕ್ಷಣವೇ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ನಾವೆಲ್ಲರೂ ನ್ಯಾಯಾಂಗದ ಮೊರೆ ಹೋಗುತ್ತೇವೆ. ಸೂಕ್ತ ಪರಿಹಾರಕ್ಕಾಗಿ ಪ್ರಕರಣ ದಾಖಲಿಸುತ್ತೇವೆಂದು ಮಲ್ಲನಗೌಡ ಪಾಟೀಲ, ವೀರನಗೌಡ ವೀರನಗೌಡ್ರ, ಶೇಖರಗೌಡ ಮಲ್ಲನಗೌಡ್ರ, ಮುದಿಯಪ್ಪ ತಳವಾರ, ಬಸಪ್ಪ ಮೇಟಿ, ಹುಸೇನಸಾಬ ತಹಸೀಲ್ದಾರ, ಲಿಂಗನಗೌಡ ಪಾಟೀಲ, ಬಸನಗೌಡ ಹಿರೇಗೌಡ್ರ, ಚಂದ್ರಪ್ಪ ಮೇಟಿ  ವಿವಿಧ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.

ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.