ನಗರ ಸೌಂದರ್ಯೀಕರಣಕ್ಕೆ ಕಾಲಮಿತಿ ಕ್ರಿಯಾಯೋಜನೆ
ಕನ್ನಡಪ್ರಭ ವಾರ್ತೆ, ಗದಗ, ಅ. 19
ಗದಗ ನಗರದ ಸ್ವಚ್ಛತೆ ಮತ್ತು ಸೌಂದರ್ಯಿಕರಣಕ್ಕೆ ಕಾಲಮಿತಿ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಜಿಲ್ಲಾಡಳಿತದ ಸಭಾಭವನದಲ್ಲಿ ನಗರದ ಸ್ವಚ್ಛತಾ ಹಾಗೂ ಸೌಂದರ್ಯೀಕರಣ ಕುರಿತು ಶುಕ್ರವಾರ ರಾತ್ರಿ ನಡೆಸಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
3-4 ತಿಂಗಳಿಂದ ಜಿಲ್ಲಾ ಹಾಗೂ ಸಾಂಸ್ಕೃತಿಕ ಕೇಂದ್ರ ಗದಗ ನಗರದ ಸ್ವಚ್ಛ ಹಾಗೂ ಸೌಂದರೀಕರಣಕ್ಕಾಗಿ ಸುಮಾರು 50 ಅಂಶಗಳ ಕುರಿತು ಸಮಾಲೋಚನೆ ನಡೆದಿದ್ದು, ಸಂಬಂಧಿತ ಇಲಾಖೆಗಳು, ಸಂಘ ಸಂಸ್ಥೆಗಳು, ಗಣ್ಯರು ಹಾಗೂ ಸಾರ್ವಜನಿಕರು ಒಮ್ಮತದಿಂದ ಈ ಕಾರ್ಯ ಜರುಗಿಸಲು ಸಿದ್ದರಿರುವುದಾಗಿ ತಿಳಿಸಿದ್ದಾರೆ. 2014ರ ನವೆಂಬರ್ 1 ರೊಳಗಾಗಿ ದಿನದ ಲೆಕ್ಕದಲ್ಲಿ ಕ್ರಿಯಾಯೋಜನೆ ಹಾಕಿಕೊಂಡು ಈ ಕಾರ್ಯವನ್ನು ಆದ್ಯತೆಯಿಂದ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಸ್ವಚ್ಛ, ದುರಸ್ತಿ ಹಾಗೂ ಸೌಂದರೀಕರಣ ಹೀಗೆ ಮೂರು ಹಂತದ ಕಾರ್ಯಕ್ಕೆ ಹಣಕಾಸಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಈ ಹಿಂದಿನಂತೆ ಸರ್ಕಾರಿ ವ್ಯವಸ್ಥೆಯ ಮೂಲಕ ಈ ಕಾರ್ಯಗಳನ್ನು ಮಾಡಿಸಿದರೂ ಅವು ತಾತ್ಕಾಲಿಕ ಎಂಬುದನ್ನು ಮನಗಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಗದಗ ನಗರಸಭೆ, ನಗರಾಭಿವೃದ್ಧಿಕೋಶ ಇವುಗಳ ಜತೆಗೆ ಶಿಕ್ಷಣ, ಕೈಗಾರಿಕೆ ಪ್ರಮುಖ ಹೋಟೆಲ್, ಎಪಿಎಂಸಿ ಹಾಗೂ ವ್ಯಾಪಾರೊದ್ಯಮ ಸಂಸ್ಥೆಗಳ ನಿರಂತರ ಕ್ರಿಯಾಶೀಲ ಸಹಕಾರ ಪಡೆಯಲು ನಿರ್ಧರಿಸಿ ಅವರಿಂದ ಉಪಯುಕ್ತ ಸಲಹೆ ಹಾಗೂ ಆಗಬಹುದಾದ ಕಾರ್ಯಗಳ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರಲು ಈ ಸಭೆಯನ್ನು ಆಯೋಜಿಸಲಾಗಿದೆ. ನಗರದಲ್ಲಿ ಸುಮಾರು 250 ಸ್ಥಳಗಳು ಅಸ್ವಚ್ಛತೆ ಇರುವುದನ್ನು ಗುರುತಿಸಿದೆ.
ಮುಂದಿನ 10 ದಿನಗಳಲ್ಲಿ ಇವುಗಳನ್ನು ನಗರಸಭೆ ಸ್ವಚ್ಛಗೊಳಿಸಬೇಕು. ಈಗಾಗಲೇ ಇರುವ ಸಾರ್ವಜನಿಕ ಶೌಚಾಲಯಗಳ ನವೀಕರಣ ಹಾಗೂ ದುರಸ್ತಿಯ ಜತೆಗೆ ಖಾಸಗಿ ಸಹಭಾಗಿತ್ವದಲ್ಲಿ ಅಧುನಿಕ ಸೌಲಭ್ಯಗಳುಳ್ಳ 20 ಹೊಸ ಶೌಚಾಲಯಗಳ ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ಮುಂಬರುವ ದಿನಗಳಲ್ಲಿ ನಗರೋತ್ಥಾನ ಯೋಜನೆಯಡಿ ನಗರದ ರಸ್ತೆಗಳ ಅಭಿವೃದ್ಧಿಗೆ ರು. 30 ಕೋಟಿ ಅನುದಾನ ನೀಡಲಾಗುವುದು. ರಿಂಗ್ರಸ್ತೆ ನಿರ್ಮಾಣಕ್ಕೂ ಚಾಲನೆ ನೀಡಲಾಗುವುದು. ರಾಜ್ಯದ ಸಚಿವ ಸಂಪುಟವು ನಗರದಲ್ಲಿ ರು. 120 ಕೋಟಿ ವೆಚ್ಚದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡಿದೆ. ಆದಷ್ಟು ಬೇಗ ನಗರದಲ್ಲಿ ನಿರಂತರ ನೀರು (24್ಢ7) ಸರಬರಾಜು ಯೋಜನೆ ಜಾರಿಯಾಗಲಿದೆ. ಇವೆಲ್ಲವುಗಳ ಸದುಪಯೋಗವಾಗಬೇಕಾದಲ್ಲಿ ನಮ್ಮ ನಗರ ಸ್ವಚ್ಛವಾಗಿಡಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದಕ್ಕಾಗಿ ತಕ್ಷಣದಿಂದ ನಗರಸಭೆ ಕಸ, ಗಟಾರುಗಳ ಸ್ವಚ್ಛತೆ ಜತೆಗೆ ಅವುಗಳ ದುರಸ್ತಿಗೆ ಪಾಕ್ಷಿಕ ಕಾರ್ಯಕ್ರಮ ಜಾರಿಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ನಗರಗಳ ಜತೆಗೆ ಅಗತ್ಯ ಮೂಲ ಸೌಕರ್ಯಗಳ ಬೆಳವಣಿಗೆ, ಯೋಜಿತ ಬಡಾವಣೆಗಳು ಹಾಗೂ ಸ್ವಚ್ಛ ಪರಿಸರವನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದೆ. ಇಂದು ಬರೀ ಸರ್ಕಾರ, ಸ್ಥಳೀಯ ಸಂಸ್ಥೆಗಳಲ್ಲದೆ ಸಾರ್ವಜನಿಕರೂ ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮುಖ್ಯವಾಗಿದೆ.
ಈ ಹಿನ್ನೆಲೆಯಲ್ಲಿ 9 ನಗರ ಸ್ವಚ್ಛತೆಯ ಪ್ರಮುಖ ಚಟುವಟಿಕೆ ಗುರುತಿಸಲಾಗಿದೆ. ನಗರದ ಸ್ವಚ್ಛ ಹಾಗೂ ಸೌಂದರೀಕರಣಕ್ಕಾಗಿ ಸಂಬಂಧಿತರ ಹಾಗೂ ಸಾರ್ವಜನಿಕರ ಸಹಕಾರ ಅಪೇಕ್ಷಿಸಲಾಗಿದೆ ಎಂದರು. ಸಭೆಯಲ್ಲಿ ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಸಿಇಒ ವೀರಣ್ಣ ತುರಮರಿ, ಗದಗ-ಬೆಟಗೇರಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶಿರೂರ, ಮಾಜಿ ಶಾಸಕ ಡಿ.ಆರ್. ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

