ಗದಗ

ಗ್ಯಾಸ್ ಏಜೆನ್ಸಿಗಳ ವಿರುದ್ಧ ಕ್ರಮಕ್ಕೆ ಮನವಿ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 20
ಗದಗ-ಬೆಟಗೇರಿ ನಗರದ ಸಾವಿರಾರು ಅಡುಗೆ ಅನಿಲ ಗ್ರಾಹಕರಿಗೆ ಏಜೆನ್ಸಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ ನೀಡಬೇಕೆಂದು ಕಿರುಕುಳ ನೀಡುತ್ತಿದ್ದು, ತಕ್ಷಣ ಅಂತಹ ಏಜೆನ್ಸಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಶನಿವಾರ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಮನವಿ ಸಲ್ಲಿಸಿದರು.
ಕಳೆದ ತಿಂಗಳು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿ, ಸಾರ್ವಜನಿಕರು ಸರ್ಕಾರದ ಸಬ್ಸಿಡಿ ಮತ್ತು ಇನ್ನಿತರ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ನೀಡುವ ಅವಶ್ಯಕತೆ ಇಲ್ಲ. ಈ ಹಿಂದೆ ನೀಡುತ್ತಿದ್ದ ಆಹಾರ ಪಡಿತರ ಚೀಟಿ, ಮತದಾರರ ಚೀಟಿ ನೀಡಿ ಸೌಲಭ್ಯಗಳು ಪಡೆಯಬಹುದಾಗಿದೆ ಎಂದು ಮಧ್ಯಂತರ ತೀರ್ಪಿನಲ್ಲಿ ಆದೇಶಿಸಿದೆ. ಈ ಕುರಿತಂತೆ ಸಮಿತಿ ಜಿಲ್ಲಾಧಿಕಾರಿ ಗಮನಕ್ಕೂ ತಂದಿದೆ. ಆದರೂ, ನಗರದ ಅಡುಗೆ ಅನಿಲ ಏಜೆನ್ಸಿಗಳು ವಿನಾಕಾರಣ ಯಾವುದೇ ಆದೇಶ ಸುತ್ತೋಲೆ ಇಲ್ಲದೇ ಗ್ರಾಹಕರಿಂದ ಕಡ್ಡಾಯವಾಗಿ ಆಧಾರ್ ಕಾರ್ಡ್ ಕೇಳುತ್ತಿರುವುದು ಖಂಡನಾರ್ಹವಾಗಿದೆ.
ಸುಪ್ರೀಂಕೋರ್ಟ್ ಆದೇಶವನ್ನು ಗಾಳಿಗೆ ತೂರಿ ಏಜೆನ್ಸಿಗಳು ಗ್ರಾಹಕರಿಗೆ ಉತ್ತಮ, ಪ್ರಾಮಾಣಿಕ ಸೇವೆ ನೀಡುವುದನ್ನು ಬಿಟ್ಟು ಸಾರ್ವಜನಿಕರನ್ನು ಅಲೆದಾಡಿಸುತ್ತಿವೆ. ತಕ್ಷಣ ನಗರದ ಏಜೆನ್ಸಿಗಳ ಮಾಲಕರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳ್ಳಿಸದಂತೆ ಆದೇಶ ನೀಡಬೇಕು ಮತ್ತು ಗ್ರಾಹಕರು ಕರೆ ಮಾಡಿದರೆ ಕರೆಗಳನ್ನು ಸ್ವೀಕರಿಸಲು ವಿಶೇಷ ಕ್ವಾಂಟರ್‌ಗಳನ್ನು ತೆರೆಯಲು ಆದೇಶಿಸಬೇಕು ಎಂದು ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಸ್ಲಂ ಸಮಿತಿ ಅಧ್ಯಕ್ಷ ಅಶೋಕ ಮ್ಯಾಗೇರಿ, ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ, ಮಹಿಳಾ ಸಮಿತಿ ಅಧ್ಯಕ್ಷ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಸ್ಲಂ ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ, ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ, ಕಾರ್ಯದರ್ಶಿ ಸಂತೋಷ ಬಣಕಾರ, ಪರುಶರಾಮ ಕಾಳೆ, ಆರತಿ ಕಾಳೆ, ರಾಜು ಕಣಗಿನಹಾಳ, ಕಮಲವ್ವ ಬಿದರೂರು, ಬಸವರಾಜ ಬಿಳೆಯಲಿ, ರಫೀಕ ಬೇಲೇರಿ, ಮಲ್ಲಿಕಾರ್ಜುನ ಬಣಕಾರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.