ಗದಗ

ಗಜೇಂದ್ರಗಡದಲ್ಲಿ ಅದ್ಯಾವ ಪ್ಲಾಸ್ಟಿಕ್ ನಿಷೇಧ?

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 20
ಜೀವ ಸಂಕುಲಕ್ಕೆ ಜತೆಗೆ ಪರಿಸರಕ್ಕೆ ಮಾರಕವಾದ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟ ಪ್ಲಾಸ್ಟಿಕ್‌ಗಳ ನಿಷೇಧ ಕಾಯ್ದೆ ಜಾರಿಯಾಗಿ ಎರಡು ವರ್ಷ ಕಳೆದರೂ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಹೀಗಾಗಿ, ಗಜೇಂದ್ರಗಡದಲ್ಲಿ ಪ್ಲಾಸ್ಟಿಕ್ ನಿಷೇಧ ಅದ್ಯಾವಾಗ ಎನ್ನುವಂತಾಗಿದೆ.
ಪರಿಸರ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಿಂದ ಕೇಂದ್ರ ಪರಿಸರ ಇಲಾಖೆ ಫೆ. 4ರಿಂದ ಪ್ಲಾಸ್ಟಿಕ್ ನಿರ್ವಹಣೆ ಕಾಯಿದೆ-2011ನ್ನು ಜಾರಿಗೆ ತಂದಿದೆ. ಹೊಸ ಕಾಯ್ದು ಜಾರಿಯಾದರೂ ಅನುಷ್ಠಾನ ತರುವಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ.
ಯಥಾಸ್ಥಿತಿ: ಕಳೆದ ವರ್ಷ ಪುರಸಭೆ ಆಡಳಿತ ಎಲ್ಲ ವರ್ತಕರು ಹಾಗೂ ಸಾರ್ವಜನಿಕರ ಸಭೆ ನಡೆಸಿ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟ ಕ್ಯಾರಿಬ್ಯಾಗ್‌ಗಳ ನಿಷೇಧ ಮಾಡಿತ್ತು. ಪ್ಲಾಸ್ಟಿಕ್ ಬಳಸಿದರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿತ್ತು. ಅಂಗಡಿಯಲ್ಲಿರುವ ಪ್ಲ್ಯಾಸ್ಟಿಕ್ ಖಾಲಿ ಮಾಡಲು ಒಂದು ತಿಂಗಳ ಗಡವು ನೀಡಲಾಗಿತ್ತು. ಗಡವು ಮುಗಿದರೂ ಅಧಿಕಾರಿಗಳು ಅತ್ತ ಸುಳಿಯಲ್ಲಿಲ್ಲ. ಕ್ಯಾರಿಬ್ಯಾಗ್ ಬಳಕೆದಾರರಿಗೂ ಇದೇ ಬೇಕಿತ್ತು. ಹೀಗಾಗಿ, ಪಟ್ಟಣದಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣದ ಜೋಡು ರಸ್ತೆ, ಗದಗ, ರೋಣ ರಸ್ತೆ ಇನ್ನಿತರ ಅಂಗಡಿಯಲ್ಲಿ ಕ್ಯಾರಿಬ್ಯಾಗ್‌ಗಳ ಬಳಕೆ ಯಥೇಚ್ಚವಾಗಿ ನಡೆದಿದೆ. ಇನ್ನೂ ಕೆಲ ಅಂಗಡಿ ಹೊರಗಡೆ ಕ್ಯಾರಿಬ್ಯಾಗ್ ನೇತು ಹಾಕಿ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇದು ಪರಿಸರ ವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ವ್ಯಾಪಾರಕ್ಕೆ ಧಕ್ಕೆ: ಈಗಾಗಲೇ ತಯಾರಿಸಿದ ಕ್ಯಾರಿಬ್ಯಾಗ್‌ಗಳನ್ನು ಖಾಲಿ ಮಾಡುವಂತೆ ಕಳೆದ ವರ್ಷ ಪುರಸಭೆ ಆಡಳಿತ ಸೂಚಿಸಿತ್ತು. ಆದರೆ, ಜೋಡು ರಸ್ತೆ ಸೇರಿದಂತೆ ಮುಖ್ಯ ಮಾರುಕಟ್ಟೆ ಸುತ್ತಿದಾಗ ಹೆಚ್ಚಿನ ಗುಣಮಟ್ಟದ ಪ್ಲಾಸ್ಟಿಕ್ ಯಾರೂ ಬಳಸುತ್ತಿಲ್ಲ. ಅಲ್ಲದೆ ಪ್ಲಾಸ್ಟಿಕ್ ನಿಷೇಧವಾಗಿರುವ ಬಗ್ಗೆ ಕೆಲ ವ್ಯಾಪಾರಿಗಳಿಗೆ ಗೊತ್ತೇ ಇಲ್ಲ. ಇನ್ನೂ ಕೆಲವರಿಗೆ ಗೊತ್ತಿದ್ದರೂ, ಏನಾಗುತ್ತದೋ ನೋಡೋಣ ಎನ್ನುವ ಮನೋಭಾವ. ಈಗಿರುವ ಕ್ಯಾರಿಬ್ಯಾಗ್ ಖಾಲಿಯಾದ ನಂತರ ಪರ್ಯಾಯ ಮಾರ್ಗಗಳ ಬಗ್ಗೆ ಗಮನಿಸೋಣ ಎನ್ನುತ್ತಾರೆ ಕೆಲ ವ್ಯಾಪಾರಿಗಳು. ಮತ್ತೆ ಕೆಲವರಿಗೆ ಕ್ಯಾರಿಬ್ಯಾಗ್ ಕೊಡದಿದ್ದರೆ ತಮ್ಮ ವ್ಯಾಪಾರಕ್ಕೇ ಧಕ್ಕೆಯಾಗುತ್ತದೆ ಎನ್ನುವ ಆತಂಕವೂ ಕಾಡುತ್ತಿದೆ.
ಕಾಯ್ದೆ ಪಾಲನೆ ಶೂನ್ಯ: ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಹೂ ಮಾರುವವರು, ದಿನಸಿ ವ್ಯಾಪಾರಿಗಳು ಎಲ್ಲರೂ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನೇ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ ಕವರ್‌ಗಳಲ್ಲೇ ಮಾಂಸ ಪ್ಯಾಕ್ ಮಾಡಲಾಗುತ್ತಿದೆ. ಮಳಿಗೆಗಳಲ್ಲಿ ಕಡಿಮೆ ದರ್ಜೆಯ ಪ್ಲಾಸ್ಟಿಕ್ ಬ್ಯಾಗ್‌ಗಳನ್ನೂ ಇವತ್ತಿಗೂ ಮಾರಾಟ ಮಾಡಲಾಗುತ್ತಿತ್ತು. ಜನರೂ ಬರಿಗೈಯಲ್ಲೇ ಮಾರುಕಟ್ಟೆಗೆ ಬಂದು ಕ್ಯಾರಿಬ್ಯಾಗ್‌ಗಳಲ್ಲಿ ತರಕಾರಿ, ದಿನಸಿ ಒಯ್ಯುತ್ತಿದ್ದಾರೆ.
ಮಾರುಕಟ್ಟೆಯಲ್ಲಿ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಕಂಡು ಬಂದರೆ ಜಿಲ್ಲಾಕಾರಿಗಳೇ ಹೊಣೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯಾಧ್ಯಕ್ಷ ಸದಾಶಿವಯ್ಯ ಹೊರಡಿಸಿರುವ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಕಾಯ್ದೆ ಪಾಲನೆ ಶೂನ್ಯವಾಗಿದೆ.  
ಜೀವಕ್ಕೆ ಅಪಾಯ: ಸಾರ್ವಜನಿಕ ಸ್ಥಳದಲ್ಲಿ ಅಲ್ಲಲ್ಲಿ ಬಿಸಾಡಿದ ಊಟದ ಪ್ಲಾಸ್ಟಿಕ್ ಪೊಟ್ಟಣಗಳನ್ನು ತಿನ್ನುವ ದನಕರುಗಳು ಸಾವನ್ನಪ್ಪಿರುವ ಎಷ್ಟು ಘಟನೆಗಳು ನಡೆದಿವೆ. ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುವುದರಿಂದ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತದೆ. ಕಳೆದ ವರ್ಷ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದ ಪುರಸಭೆ ಅದನ್ನು ಜಾರಿಗೆ ತರಲು ಇನ್ನಷ್ಟು ಶ್ರಮ ವಹಿಸಬೇಕಾಗಿದೆ.
ಅಂಗಡಿಯಲ್ಲಿರುವ ಪ್ಲ್ಯಾಸ್ಟಿಕ್ ಖಾಲಿ ಮಾಡಲು ಪುರಸಭೆ ಒಂದು ತಿಂಗಳ ಗಡವು ನೀಡಲಾಗಿತ್ತು. ಗಡವು ಮುಗಿದರೂ ಅಧಿಕಾರಿಗಳು ಅತ್ತ ಸುಳಿಯಲಿಲ್ಲ. ಕ್ಯಾರಿಬ್ಯಾಗ್ ಬಳಕೆದಾರರಿಗೂ ಇದೇ ಬೇಕಿತ್ತು. ಇದರಿಂದ ಪಟ್ಟಣದಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣದ ಜೋಡು ರಸ್ತೆ, ಗದಗ, ರೋಣ ರಸ್ತೆ ಇನ್ನಿತರ ಅಂಗಡಿಯಲ್ಲಿ ಕ್ಯಾರಿಬ್ಯಾಗ್‌ಗಳ ಬಳಕೆ ಯಥೇಚ್ಚವಾಗಿ ನಡೆದಿದೆ. ಇನ್ನೂ ಕೆಲ ಅಂಗಡಿ ಹೊರಗಡೆ ಕ್ಯಾರಿಬ್ಯಾಗ್ ನೇತು ಹಾಕಿ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ.
ಜಾಗೃತಿ
ಈಗಾಗಲೇ ಪುರಸಭೆ ವತಿಯಿಂದ ಹಲವಾರು ಬಾರಿ ಕಡಿಮೆ ದರ್ಜೆ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಅದಾಗ್ಯೂ ಪಟ್ಟಣದ ಎಲ್ಲ ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ಇನ್ನೂ ಕದ್ದು ಮುಚ್ಚಿ ಪ್ಲಾಸ್ಟಿಕ್ ಚೀಲ ಬಳಸುತ್ತಿರುವುದು ಕಂಡು ಬಂದಿದೆ. ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು.
- ಮಹೇಶ ನಿಡಶೇಶಿ, ಪುರಸಭೆ ಆರೋಗ್ಯ ಹಿರಿಯ ಅಧಿಕಾರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.