ಗದಗ

ನಾಳೆ ನರಗುಂದದಲ್ಲಿ ಚೆನ್ನಮ್ಮಳ ವಿಜಯೋತ್ಸವ

Published On :

ಗದಗ: ಅ. 24 ರಂದು ನರಗುಂದದಲ್ಲಿ ಕಿತ್ತೂರರಾಣಿ ಚೆನ್ನಮ್ಮಳ 190ನೇ ವಿಜಯೋತ್ಸವ ಹಾಗೂ ನರಗುಂದ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಒಳಪಡಿಸುವ ನಿಟ್ಟಿನಲ್ಲಿ ಉಪಸಮಿತಿಯನ್ನು ರಚಿಸಲಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಅದನ್ನು ಅನುಷ್ಠಾನಗೊಳಿಸಬೇಕು ಎಂಬ ತೀರ್ಮಾನವನ್ನು ಅ. 24ರಂದು ನಡೆವ ಸಮಾವೇಶದಲ್ಲಿ ಸರ್ವ ಸಮ್ಮತವಾಗಿ ಆಗ್ರಹಿಸಲಾಗುವುದು. ಸಮಾವೇಶದ ಮೂಲಕ ಸಮಾಜ ಅಭಿವೃದ್ಧಿ ದೃಷ್ಟಿಯಿಂದ ಕೆಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಕನ್ನಡಿಗರಲ್ಲಿ ಸ್ವಾಭಿಮಾನ ಪ್ರಜ್ಞೆ, ಮಹಿಳೆಯರಲ್ಲಿ ಧೈರ್ಯ ತುಂಬುವ ಮೂಲಕ ಸಮಾಜದ ಸಂಘಟನೆ ಮಾಡುವುದು ಮುಖ್ಯ ಗುರಿಯಾಗಿದೆ. ಹಾಗಾಗಿ ಈ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ. ಮಾಜಿ ಸಚಿವ ಮುರುಗೇಶ ನಿರಾಣಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅಗ್ರಗಣ್ಯ ಮಹಿಳಾ ಸಾಧಕಿಯರಲ್ಲಿ ವಿಶ್ವಸಂಸ್ಥೆ ಏಳು ಮಹಿಳಾ ಹೋರಾಟಗಾರರನ್ನು ಗುರುತಿಸಿದೆ. ಅದರಲ್ಲಿ ಚೆನ್ನಮ್ಮಾಜಿ ಹೆಸರು ಕೊನೆಯ ಹೆಸರಾಗಿರುವುದು ಬೇಸರದ ಸಂಗತಿ ಎಂದರು. ಪಂಚಮಸಾಲಿ ಸಮಾಜದ ರಾಷ್ಟ್ರಾಧ್ಯಕ್ಷ ಪ್ರಭಣ್ಣ ಹುಣಸೀಕಟ್ಟಿ ಮಾತನಾಡಿ, ಎಲ್ಲ ಸಮುದಾಯದ ಪ್ರೀತಿ, ವಿಶ್ವಾಸ ಗಳಿಸುವುದರೊಂದಿಗೆ ಸಮಾಜ ಸಂಘಟನೆ ಮಾಡುವುದು ನಮ್ಮ ಗುರಿಯಾಗಿದೆ. ವೀರಶೈವರೆಲ್ಲರೂ ಒಂದೇಯಾಗಿದ್ದು, ಒಳಪಂಗಡಗಳನ್ನು ಮರೆತು ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರು. ಎಂ.ಎಸ್. ಮಲ್ಲಾಪುರ, ಮಹೇಶ ಕರಿಬಿಷ್ಠಿ, ಬಸಣ್ಣ ಕುಂದಗೋಳ, ಬಿ.ಎಸ್. ಮಾನೆ, ಎಸ್.ಎನ್. ಆದಿ, ಸಿ.ಎನ್. ಮಾರನಬಸರಿ, ಚಿನ್ನೂರ, ಜಿಗಳೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

 ಚೆನ್ನಮ್ಮಾಜಿ ವಸ್ತುಗಳ ಮರಳಿ ಬರಲಿ
ಶಿವಾಜಿ ಮಹಾರಾಜ ಹಾಗೂ ಟಿಪ್ಪುಸುಲ್ತಾನ್‌ರ ಆಯುಧಗಳನ್ನು ದೇಶಕ್ಕೆ ಮರಳಿ ತರಿಸಿದಂತೆ ಕಿತ್ತೂರ ರಾಣಿ ಚೆನ್ನಮ್ಮಳ ಆಯುಧಗಳನ್ನು ಇಂಗ್ಲೆಂಡಿನಿಂದ ಮರಳಿ ದೇಶಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ನೀಡಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಆಗ್ರಹಿಸಿದರು. ಅಂದಿನ ಹೋರಾಟ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿ ಚಾಪ್ಲೀನ್ ಚೆನ್ನಮ್ಮಳ ಆಯುಧ ಹಾಗೂ ಪೋಷಾಕುಗಳೊಂದಿಗೆ ಬಂಧಿಸಿದ್ದನು. ಬ್ರಿಟಿಷರ ವಿರುದ್ಧ ಹೋರಾಡಿದ ಚೆನ್ನಮ್ಮಳ ಅಸ್ತ್ರಗಳು ಇಂಗ್ಲೆಂಡ್ ಸರ್ಕಾರದ ವಶದಲ್ಲಿ ಇರುವ ಕುರಿತು ಅಗತ್ಯ ದಾಖಲೆಗಳಿವೆ. ಕೂಡಲೇ ಅವುಗಳನ್ನು ಮರಳಿ ದೇಶಕ್ಕೆ ತರುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬಳಿಗೆ ಶೀಘ್ರದಲ್ಲಿಯೇ ನಿಯೋಗ ತೆರಳಲಿದೆ. ಚೆನ್ನಮ್ಮಳ ಪ್ರಾಧಿಕಾರ ರಚಿಸುವ ಮೂಲಕ ಆಕೆ ಉಪಯೋಗಿಸುತ್ತಿದ್ದ ಆಯುಧಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಕಿತ್ತೂರ ಚೆನ್ನಮ್ಮಳ ವಿಜಯೋತ್ಸವದಿನವನ್ನು ಸ್ವಾಭಿಮಾನಿ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಬೇಕು. ಶಾಲಾ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಚೆನ್ನಮ್ಮಳ ದಿನಾಚರಣೆ ಆಚರಣೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.