ಕೆಲಸ ಮಾಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ: ಯಾವಗಲ್
ನರಗುಂದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗ್ರಾಮೀಣ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಂದರೂ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಕೆಲಸ ಮಾಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಬಿ.ಆರ್. ಯಾವಗಲ್ಲ ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನರಗುಂದ ವಿಧಾನಸಭೆ ವ್ಯಾಪ್ತಿಯ ನರಗುಂದ, ರೋಣ, ಗದಗ ತಾಲೂಕುಗಳ ಗ್ರಾಪಂ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಡವಿಸೋಮಾಪುರ ಗ್ರಾಮದ ಎಲ್ಲ ನೀರು ಹರಿಜನ ಕೆರೆಯಲ್ಲಿ ಹೋಗಿ ನಿಲ್ಲವುದರ ಬಗ್ಗೆ ಸಾಕಷ್ಟು ಬಾರಿ ತಿಳಿಸಲಾಗಿದೆ. ಆದರೂ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು ಕುಂಟ ನೆಪ ಹೇಳುವುದನ್ನು ರೂಢಿಸಿಕೊಂಡಿದ್ದು, ಅದನ್ನು ತಕ್ಷಣವೇ ಕೈ ಬಿಡಬೇಕು, ಗ್ರಾಮಗಳಲ್ಲಿ ಚರಂಡಿ, ಕುಡಿವ ನೀರು, ರಸ್ತೆ, ಕೆರೆ ನಿರ್ಮಾಣ, ಹೊಲಗಳಿಗೆ ಹೋಗುವ ರಸ್ತೆ, ಸ್ವಚ್ಛತೆ, ಬದು ನಿರ್ಮಾಣ, ವಸತಿ ಮನೆಗಳು, ಶೌಚಾಲಯ ಇವುಗಳು ಬಗ್ಗೆ ಹೆಚ್ಚು ಗಮನ ನೀಡಬೇಕು. ಈ ವರ್ಷದ ಗುರಿಯಲ್ಲಿ ಶೇ. 50ರಷ್ಟು ಮುಗಿಸಲು ನವೆಂಬರ್ 22 ರೊಳಗೆ ಎಲ್ಲ ಗ್ರಾಪಂ ಅಧಿಕಾರಿಗಳು ಮುಂದಾಗಬೇಕು ಎಂದರು. ಜಿಪಂ ಸಿಇಒ ವೀರಣ್ಣ ತುರಮರಿ ಮಾತನಾಡಿ, ಅಧಿಕಾರಿಗಳಿಗೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿ, ಕೆಲ ಸಲಹೆ ಸೂಚನೆಗಳನ್ನು ನೀಡಿಸಿದರು. ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಉಪಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ, ಜಿಪಂ ಯೋಜನಾ ನಿರ್ದೇಶಕ ಟಿ.ದಿನೇಶ, ತಾಪಂ ಅಧಿಕಾರಿ ಎನ್.ಆರ್. ಗುಂಡಾ, ಗದಗ ತಾಪಂ ಅಧಿಕಾರಿ ಬಿ.ರೇವಣ್ಣ, ರೋಣ ತಾಪಂ ಅಧಿಕಾರಿ ಎಂ.ಎಸ್. ಪಿಡಶೆಟ್ಟಿ, ರಾಜು ಕಲಾಲ, ಗುರುಪಾದಪ್ಪ ಕುರಹಟ್ಟಿ, ಜಗದೇಶ ರಾಯನಗೌಡ್ರ, ಶಿವನಗೌಡ ಹೆಬ್ಬಳ್ಳಿ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

