ಧರ್ಮಾಧಿಕಾರಿ ಹೆಗ್ಗಡೆ ಅವಹೇಳನ ಸಲ್ಲದು
ಲಕ್ಷ್ಮೇಶ್ವರ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಸೌಜನ್ಯಾ ಕೊಲೆ ಪ್ರಕರಣದಲ್ಲಿ ಅನವಶ್ಯವಾಗಿ ಪ್ರಸ್ತಾಪಿಸುತ್ತಿರುವುದು ಖಂಡನೀಯವಾಗಿದೆ. ಧರ್ಮಾಧಿಕಾರಿಗಳೆ ಸ್ವತಃ ಯೋಗ್ಯ ಸಂಸ್ಥೆಗಳಿಂದ ತನಿಖೆ ನಡೆಸುವುದು ಸರ್ಕಾರಕ್ಕೆ ಸೇರಿದ ವಿಷಯವಾಗಿದೆ ಎಂದು ಹೇಳಿರುವುದು ಅವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಯುವ ಮುಖಂಡ ವರ್ಧಮಾನ ಮಿಣಜಗಿ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಲವು ವ್ಯಕ್ತಿಗಳು ಹಾಗೂ ಕೆಲ ಮಾಧ್ಯಮಗಳು ಕೂಡ ಆಧಾರ ರಹಿತ ಚರ್ಚೆಗಳು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಖಂಡನೀಯ. ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರು ಶಿಕ್ಷಾರ್ಹರು. ಆದರೆ ವ್ಯಕ್ತಿಯ ಘನತೆ ಗೌರವಗಳನ್ನು ಬದಿಗಿಟ್ಟು ಕೇವಲ ಊಹಾಪೋಹಗಳಿಗೆ ಬಣ್ಣ ಹಚ್ಚುವ ಕಾರ್ಯವನ್ನು ಮಾಡುತ್ತಿರುವುದು ಸರಿಯಲ್ಲ. ಇದೇ ರೀತಿ ಹೆಗ್ಗಡೆಯವರ ತೇಜೋವಧೆ ಮಾಡುವ ಕಾರ್ಯವನ್ನು ಮುಂದುವರಿಸಿದಲ್ಲಿ ರಾಜ್ಯವ್ಯಾಪಿ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ ಎಂದು ನ್ಯಾಯವಾದಿ ಬಸವರಾಜ ಬಾಳೇಶ್ವರಮಠ, ಮಲ್ಲನಗೌಡ ಪಾಟೀಲ, ಸಲೀಂ ಧಾರವಾಡ, ಶಕ್ತಿ ಕತ್ತಿ, ಸಂತೋಷ ಜಾವುರ ಆಗ್ರಹಿಸಿದ್ದಾರೆ.
ವಕೀಲರಿಂದ ಅರ್ಜಿ ಆಹ್ವಾನ
ಗದಗ: ಜಿಲ್ಲೆಯ ರೋಣ ತಾಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಯನ್ನು ಭರ್ತಿ ಮಾಡಲು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ಅನ್ವಯ 7 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಾರಣ ಅರ್ಹ ಅಭ್ಯರ್ಥಿಗಳು ಅ. 31ರೊಳಗೆ ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಕಚೇರಿ ವೇಳೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಗದಗ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನ ಹಾಯ್ದು ಓರ್ವ ಕುರಿಗಾಹಿ, 8 ಕುರಿ ಸಾವು
ಗದಗ: ವೇಗವಾಗಿ ಚಲಿಸುತ್ತಿದ್ದ ವಾಹನವು ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಕುರಿಗಳ ಮೇಲೆ ಹಾಯ್ದ ಪರಿಣಾಮ ಓರ್ವ ಕುರಿಗಾಹಿ ಸೇರಿದಂತೆ 8 ಕುರಿಗಳು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೋಟುಮಚಗಿ-ಅಬ್ಬಿಗೇರಿ ರಸ್ತೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನರ್ತಿ ಗ್ರಾಮದ ಬೀರಪ್ಪ(20) ಎಂದು ಗುರುತಿಸಲಾಗಿದೆ. ಈರುಳ್ಳಿ ಚೀಲಗಳನ್ನು ಹೊತ್ತಿದ್ದ ಲಾರಿಯು ರೋಣದಿಂದ ಬೆಂಗಳೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ವೇಗವಾಗಿ ಬಂದ ಲಾರಿಯು ರಸ್ತೆಯ ಪಕ್ಕದಲ್ಲಿದ್ದ ಕುರಿಗಳ ಮೇಲೆ ಹಾಯ್ದು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಬಿದ್ದಿದ್ದು, ಲಾರಿಯ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಅವನನ್ನು ಚಿಕಿತ್ಸೆಗಾಗಿ ಗದಗನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ, ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

