ಗದಗ

ಜಿಲ್ಲೆಗಿಂದು ಸಿಎಂ: ನಿರೀಕ್ಷೆ ಮಹಾಪೂರ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 27
ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಗದಗ ಜಿಲ್ಲೆಗೆ ಸೋಮವಾರ ಆಗಮಿಸುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ.
ನಾಡ ದೊರೆ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಯಾವುದಾದರೂ ಹೊಸ ಯೋಜನೆಗಳ ಘೋಷಣೆ ಮಾಡಿ, ಜಿಲ್ಲೆಯ ರೈತರು ಸತತವಾಗಿ ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಯೋಜನೆಗಳನ್ನು ನೀಡುತ್ತಾರೆಯೇ ಎನ್ನುವುದನ್ನು ಇಲ್ಲಿನ ಜನತೆ ಎದುರು ನೋಡುತ್ತಿದ್ದಾರೆ. ಅಧಿಕಾರದಲ್ಲಿರುವ ಸಿಎಂ ಮುಂಡರಗಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಹೇಗೆ ಮೂಡಿದೆಯೋ ಗೊತ್ತಿಲ್ಲ. ಆದರೆ, ಕಳೆದ ಹಲವಾರು ವರ್ಷಗಳಿಂದ ಯಾವ ಮುಖ್ಯಮಂತ್ರಿಯೂ ಅಲ್ಲಿಗೆ ಭೇಟಿ ನೀಡಿಲ್ಲ. ಇದು ಕಾಕತಾಳೀಯವೋ ಅಥವಾ ವಾಸ್ತವವೋ ತಿಳಿಯುತ್ತಿಲ್ಲ. ಆದರೆ 20 ವರ್ಷದಿಂದ ಅಧಿಕಾರದಲ್ಲಿರುವ ಸಿಎಂ ಮಾತ್ರ ಮುಂಡರಗಿ ಪಟ್ಟಣಕ್ಕೆ ಬಂದಿಲ್ಲ ಎನ್ನುವುದು ಸತ್ಯ. ಇದೇ ರೀತಿಯ ನಂಬಿಕೆ ಚಾಮರಾಜ ನಗರಕ್ಕೂ ಇತ್ತು. ಅಲ್ಲಿಗೆ ಭೇಟಿ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅನಿಷ್ಟ ನಂಬಿಕೆಗೆ ಕೊನೆಹಾಡಿದ್ದು, ಅದೇ ರೀತಿ ಮುಂಡರಗಿಗೂ ಮುಕ್ತಿ ನೀಡಬೇಕಿದೆ.
ಶಾಶ್ವತ ಯೋಜನೆಗಳನ್ನು ನೀಡಲಿ: ಜಿಲ್ಲೆಯು ಸಂಪೂರ್ಣ ಒಣ ಬೇಸಾಯ ಪದ್ಧತಿಯನ್ನೇ ಹೊಂದಿದ್ದು, ಜಿಲ್ಲೆಯ ಎರಡು ಪ್ರಮುಖ ನೀರಾವರಿ ಯೋಜನೆಗಳಾದ ಸಿಂಗಟಾಲೂರ ಏತ ನೀರಾವರಿ, ಕಳಸಾ ಬಂಡೂರಿಗೆ ಹಲವಾರು ಸಮಸ್ಯೆಗಳು ಎದುರಾಗಿದ್ದು, ಅವುಗಳ ನಿವಾರಣೆಗೆ ಹಣಕಾಸಿನ ನೆರವಿನೊಂದಿಗೆ ರಾಜ್ಯ ಸರ್ಕಾರ ಇಚ್ಚಾಶಕ್ತಿಯ ಅವಶ್ಯಕತೆಯೂ ಮುಖ್ಯವಾಗಿದೆ. ಈಗಾಗಲೇ ಕಳಸಾ ಬಂಡೂರಿ ಕುರಿತು ರೈತರು ರಾಜ್ಯಮಟ್ಟದ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಅವಕಾಶ ಕಲ್ಪಿಸದ ರೀತಿಯಲ್ಲಿ ಸಿಎಂ ಗದುಗಿನ ಭೇಟಿಯ ಸಂದರ್ಭದಲ್ಲಿ ಘೋಷಣೆ ಮಾಡಬೇಕಿದೆ.
ಶೈತ್ಯಾಗಾರ ಬೇಕು: ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಈರುಳ್ಳಿ ಬೆಳೆವ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿರುವ ಗದಗ ಜಿಲ್ಲೆಯಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಈರುಳ್ಳಿ ಶೈತ್ಯಾಗಾರ ಬೇಕು ಎನ್ನುವುದು ಇಲ್ಲಿನ ರೈತರ ಬಹು ವರ್ಷಗಳ ಬೇಡಿಕೆಯಾಗಿದೆ. ಆದರೆ ಇಂದಿಗೂ ಅದು ಸಾಕಾರಗೊಂಡಿಲ್ಲ. ಇನ್ನು ಗದಗ ತಾಲೂಕಿನ 500 ಕ್ಕೂ ರೈತರು ಪುಷ್ಪೋದ್ಯಮವನ್ನು ನಂಬಿದ್ದು, ಪ್ರತಿ ನಿತ್ಯ ಗದಗನಿಂದ ಪಕ್ಕದ ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ರಫ್ತಾಗುತ್ತಿದ್ದು, ಗದಗ ಜಿಲ್ಲೆಯ ಪುಷ್ಪೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅದಕ್ಕೊಂದು ಶೈತ್ಯಾಗಾರದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಸಿಎಂ ಸ್ಪಂದಿಸಬೇಕಿದೆ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.