ಗದಗ ಎಪಿಎಂಸಿ ರಾಜ್ಯದ ರೈತರ ಧ್ವನಿ
ಗದಗ: ಗದಗ ಎಪಿಎಂಸಿ ಕೇವಲ ಗದಗ ಜಿಲ್ಲೆಗೆ ಮಾತ್ರವಲ್ಲ, ರಾಜ್ಯದ ರೈತರ ಧ್ವನಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ಗದಗನ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಎಪಿಎಂಸಿಯ 70ನೇ ವರ್ಷಾಚರಣೆ, ಸಂಸ್ಥಾಪಕ ಅಧ್ಯಕ್ಷ ಫಕ್ಕೀರಪ್ಪ ಲಕ್ಷ್ಮೇಶ್ವರ ಹಾಗೂ ಕೆ.ಎಚ್. ಪಾಟೀಲ್ರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಈ ಎಪಿಎಂಸಿ ರಾಜ್ಯದಲ್ಲಿಯೇ ಮಾದರಿಯಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಿ. ಕೆ.ಎಚ್. ಪಾಟೀಲರ ಕಾಲದಿಂದಲೂ ರೈತರ ಧ್ವನಿಯಾಗಿ ಕೆಲಸ ಮಾಡಿದೆ. ಹಲವಾರು ವರ್ಷಗಳ ಹಿಂದೆಯೇ ಕೆ.ಎಚ್. ಪಾಟೀಲರು ರೈತ ಬೆಳೆದ ಬೆಳೆಯ ಬೆಲೆಯನ್ನು ಅವನೇ ನಿರ್ಧಾರ ಮಾಡಬೇಕು ಎನ್ನುವ ಕೂಗು ಎತ್ತಿದ್ದರು. ಅದನ್ನು ಸದ್ಯದಲ್ಲಿಯೇ ನಮ್ಮ ಸರ್ಕಾರ ಜಾರಿಗೆ ತರಲಿದೆ. ನಮ್ಮ ಸರ್ಕಾರ ರೈತ ಪರವಾಗಿದ್ದು, ಪ್ರವಾಹದ ವೇಳೆಯಲ್ಲಿ ಬೆಳೆ ಹಾನಿ ಅನುಭವಿಸಿದ ರೈತರ ಮಕ್ಕಳ ಶಾಲಾ ಫೀಯನ್ನು ಸರ್ಕಾರವೇ ಭರಿಸಲಿದೆ.
ಸ್ವಯಂ ಉದ್ಯೋಗ: ಗ್ರಾಮೀಣ ಪ್ರದೇಶದಲ್ಲಿನ ಯುವಕರು ಕೃಷಿಯನ್ನು ಬಿಟ್ಟು ನಗರಗಳತ್ತ ಬರುತ್ತಿದ್ದು, ಅವರಿಗೆ ಅದೇ ಗ್ರಾಮದಲ್ಲಿಯೇ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಾಜೀವಗಾಂಧಿ ಚೈತನ್ಯ ಯೋಜನೆಯಡಿ ಪ್ರತಿ ಗ್ರಾಮದಲ್ಲಿ 50 ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಮಹಿಳೆಯರಿಗೆ ವಿಶೇಷ ಕೌಶಲ್ಯಾಧಾರಿತ ತರಬೇತಿ ನೀಡಲಾಗುವುದು. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವ ನಾವು, ಜನರಿಗಾಗಿಯೇ ದುಡಿಯುತ್ತೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, 2ನೇ ಹಂತದ ಕುಡಿಯುವ ನೀರು ಯೋಜನೆಗೆ ಹೆಚ್ಚುವರಿಯಾಗಿ ರು. 30.5 ಕೋಟಿ ಅನುದಾನ, ಮೆಡಿಕಲ್ ಕಾಲೇಜು ಕಟ್ಟಡಕ್ಕೆ ರು. 120 ಕೋಟಿ, ಬೃಹತ್ ಕೆರೆ ನಿರ್ಮಾಣಕ್ಕೆ ರು. 10 ಕೋಟಿ ನೀಡಿದ್ದಾರೆ. ಆದರೆ ಅವಳಿ ನಗರದ ನೈರ್ಮಲೀಕರಣಕ್ಕೆ ವಿಶೇಷ ಅನುದಾನವಾಗಿ ರು. 10 ಕೋಟಿ ಹಾಗೂ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಯಲ್ಲಿ ಈಗಾಗಲೇ ವಿಶ್ವದ ಎತ್ತರದ ಬಸವೇಶ್ವರ ಮೂರ್ತಿ ನಿರ್ಮಾಣವಾಗಿದ್ದು, ಅದನ್ನು ರಾಜ್ಯದಲ್ಲಿಯೇ ಮಾದರಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ರು. 5 ಕೋಟಿ ನೀಡಬೇಕೆಂದು ತಿಳಿಸಿದರು. ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯದ ಎಪಿಎಂಸಿ ಸೇರಿದಂತೆ ಹಲವೆಡೆ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಸಾಕಷ್ಟು ಶೋಷಣೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದ ರೈತರಿಗೆ ನೆಮ್ಮದಿಯ ಬದುಕು ಕಲ್ಪಿಸುವತ್ತ ಸರ್ಕಾರ ಹೆಚ್ಚಿನ ಗಮನ ನೀಡಲಿದೆ ಎಂದರು. ಕೃಷಿ ಮಾರುಕಟ್ಟೆ ಹಾಗೂ ತೋಟಗಾರಿಕಾ ಸಚಿವ ಶಾಮನೂರ ಶಿವಶಂಕರಪ್ಪ ಮಾತನಾಡಿ, ರೈತರ ಸಮಗ್ರ ಹಿತಕಾಯುವಂತಹ ಕಾಯ್ದೆ ಸದ್ಯದಲ್ಲಿಯೇ ಸರ್ಕಾರ ಜಾರಿಗೆ ತರಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಿ.ಆರ್. ಪಾಟೀಲ, ಗದಗ ಎಪಿಎಂಸಿ ಹುಟ್ಟು ಹಾಗೂ ಬೆಳವಣಿಗೆ ಬಗ್ಗೆ ವಿವರಿಸಿದರು. ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಸಂಸದ ಪಿ.ಸಿ. ಗದ್ದಿಗೌಡ್ರ, ವಿಪ ಸದಸ್ಯ ಶ್ರೀನಿವಾಸ ಮಾನೆ, ಸಲೀಂಅಹ್ಮದ್, ವೀರಣ್ಣ ಮತ್ತಿಕಟ್ಟಿ, ಎ.ಎಂ. ಹಿಂಡಸಗೇರಿ, ಐ.ಜಿ. ಸನದಿ, ವಾಸಣ್ಣ ಕುರುಡಗಿ ಮುಂತಾದವರು ಹಾಜರಿದ್ದರು. ಸಪ್ತಪರ್ವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಜೆ.ಕೆ. ಜಮಾದಾರ ನಿರೂಪಿಸಿದರು. ಎಪಿಎಂಸಿ ಉಪಾಧ್ಯಕ್ಷ ಸಿದ್ದಲಿಂಗೇಶಗೌಡ ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

