ಗದಗ

ಸೂರ್ಯಕಾಂತಿಗೆ ಬೇಕಿದೆ ಸೂರ್ಯದೇವನ ಕೃಪೆ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 29
ತಾಲೂಕಿನ ರೈತ ಸಮುದಾಯ ಆಸೆ ಇಟ್ಟುಕೊಂಡಿದ್ದ ಸೂರ್ಯಕಾಂತಿ ಬೆಳೆಗೆ ಅಲ್ಲಲ್ಲಿ ತುರಚಿ ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತಿದೆ. ಸೂರ್ಯಕಾಂತಿ ಬೆಳೆಯನ್ನೇ ನಂಬಿಕೊಂಡು ಬದುಕುತ್ತಿರುವ ಈ ಭಾಗದ ರೈತರೀಗ ಆತಂಕಗೊಂಡಿದ್ದಾರೆ.
ರೋಗ ಹರಡುವ ಆತಂಕ: ಮುಂಗಾರು ಮಳೆ ಸಮರ್ಪಕವಾಗಿ ಸುರಿಯದೆ ಕಂಗಾಲಾಗಿದ್ದ ರೈತರು ಅಷ್ಟಿಷ್ಟು ಸುರಿದ ಮಳೆಗೆ ಹಿಂಗಾರಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಆದರೆ, ಒಂದು ವಾರದಿಂದ ಕಾಣಿಸಿಕೊಳ್ಳುತ್ತಿರುವ ಮೋಡಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯಿಂದಾಗಿ ಸೂರ್ಯಕಾಂತಿ ಬೆಳೆಗೆ ರೋಗ ಹರಡುವ ಸಾಧ್ಯತೆ ಕಾಣಿಸಿಕೊಂಡಿದೆ. ಹೀಗಾಗಿ, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತಾಲೂಕಿನಲ್ಲಿ ಬಹುತೇಕ ರೈತರು ಬಿತ್ತನೆಯನ್ನೇ ಮಾಡಿಲ್ಲ. ಆದರೆ, ಕೆಲ ರೈತರು ಅಕಾಲಿಕವಾಗಿ ಸುರಿದ ಮಳೆಯ ಮೇಲೆ ಭರವಸೆ ಇಟ್ಟು ಶೇಂಗಾ, ಹೆಸರು, ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆಯ ನಂತರದ ದಿನಗಳಲ್ಲಿ ಮಳೆ ಸಂಪೂರ್ಣ ಮುನಿಸಿಕೊಂಡಿದ್ದರಿಂದ ತೇವಾಂಶದ ಕೊರತೆಯಿಂದ ಬೆಳೆಯೂ ಚೆನ್ನಾಗಿ ಬರದೇ ಇಳುವರಿಯೂ ಅಷ್ಟಕಷ್ಟೇ. ಯೋಗ್ಯ ಬೆಲೆಯೂ ರೈತರ ಫಸಲಿಗೆ ದೊರೆಯಲಿಲ್ಲ.
ಸತ್ವರಹಿತ: ಸದ್ಯ ತಾಲೂಕಿನಲ್ಲಿ ರೈತರು ಹಿಂಗಾರಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದು, ಒಂದೆರಡು ಅಡಿ ಬೆಳದ ಸೂರ್ಯಕಾಂತಿ ಹೂಬಿಟ್ಟು, ತೆನೆ ಮೂಡಿ ಬಿತ್ತನೆಗೆ ಮಾಡಿದ್ದ ಖರ್ಚು ಮರಳುವ ಸೂಚನೆ ಮೂಡಿತ್ತು. ಸಮರ್ಪಕ ಮಳೆಯೂ ಸುರಿದಿದೆ. ಈಗ ಬಿಸಿಲು ಕಾಣದ ಸೂರ್ಯಕಾಂತಿಗೆ ಕೀಟದ ಬಾಧೆ ಶುರುವಾಗಿದ್ದು, ತುರಚಿ ಹುಳು ಎಂದೇ ಕರೆಸಿಯಿಕೊಳ್ಳುವ ಈ ಕೀಟ ಗಿಡದ ಎಲೆಯಲ್ಲಿನ ರಸವನ್ನು ಹೀರಿ ಸತ್ವರಹಿತವನ್ನಾಗಿ ಮಾಡುತ್ತದೆ.
ಆರಂಭದಲ್ಲಿ ಚಿಕ್ಕದಾದ ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುವ ಈ ಕೀಟ ನಂತರದಲ್ಲಿ ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿ ಒಂದು ಇಂಚಿನಷ್ಟು ದೊಡ್ಡದಾಗಿ ಬೆಳೆದು ಎಲೆಯನ್ನು ಪೂರ್ಣ ನಾಶ ಮಾಡುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ. ಒಂದು ಗಿಡದಲ್ಲಿ ನಾಲ್ಕಾರು ಹುಳುಗಳು ಕಾಣಿಸಿಕೊಂಡಿದ್ದು, ದಿನೇ ದಿನೇ ಅವುಗಳ ಸಂಖ್ಯೆ ಹೆಚ್ಚುತ್ತಿದೆ. ಕೀಟ ಹತೋಟಿಗೆ ಯಾವ ಕ್ರಮ ಕೈಗೊಳ್ಳಬೇಕು ಎಂದು ತಿಳಿಯದೇ ರೈತರು ಕಂಗಾಲಾಗಿದ್ದಾರೆ.
ಸದ್ಯಕ್ಕೆ ಕೀಟ ನಾಶಕ ಸಿಂಪಡಿಸುವ ಶಕ್ತಿಯಂತೂ ರೈತರಿಗಿಲ್ಲ. ಬಿರುಸಿನ ಮಳೆ ಸುರಿದು ಬಿಸಿಲು ಬಿದ್ದರೆ ಕೀಟಗಳ ಹಾವಳಿ ಕಡಿಮೆಯಾಗಿ ಅಲ್ಪ ಸ್ವಲ್ಪವಾದರೂ ಬೆಲೆ ಕೈಗೆ ಸಿಗಬಹುದು. ಆದರೆ ಕಳೆದ 1 ವಾರದಿಂದ ಬಿಸಿಲಿನ ಅನುಭವ ಆಗುತ್ತಿಲ್ಲ. ಹೀಗಾಗಿ, ನಮಗೆ ಬೆಳೆ ಕೈಗೆ ದೊರೆಯುವ ಭರವಸೆಯೂ ಇಲ್ಲವಾಗಿದೆ ಎಂದು ಸೂರ್ಯಕಾಂತಿ ಬೆಳೆದ ರೈತರು ಕಣ್ಣೀರಿಡುತ್ತಿದ್ದಾರೆ. ಬೆಳೆಯು ನಿರೀಕ್ಷಿತ ಮಟ್ಟದಲ್ಲಿ ಬೆಳೆಯದೆ ಕೇವಲ ಒಂದೆರಡು ಅಡಿ ಬೆಳೆದು ಸಣ್ಣ ತೆನೆ ಬಿಡುತ್ತಿದೆ.
-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.