ಗದಗ

ಧರ್ಮದ ಮೂಲ ಧ್ಯೇಯ ತಿರುಚುವಿಕೆ

Published On :

ಬ್ಯಾಡಗಿ: ಎಲ್ಲ ಧರ್ಮಗಳ ಮೂಲ ಧ್ಯೇಯವೇ ಲೋಕ ಕಲ್ಯಾಣ. ಆದರೆ, ಕೆಲ ಮೂಲಭೂತವಾದಿಗಳು ತಿರುಚಿ ಹೇಳುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಬಣ್ಣದಮಠದ ಅಭಿನವ ಚನ್ನ ರುದ್ರ ಮಲ್ಲಿಕಾರ್ಜುನ ಶ್ರೀಗಳು ವಿಷಾದಿಸಿದರು.
ಪಟ್ಟಣದ ನವೋದಯ ವಿದ್ಯಾಸಂಸ್ಥೆಯಲ್ಲಿ ಜಗದ್ಗುರು ಪಂಚಾಚಾರ್ಯ ಯುವವೇದಿಕೆ ಹಾಗೂ ರೇಣುಕಾಚಾರ್ಯ ಸಮಿತಿ ಆಶ್ರಯದಲ್ಲಿ ಜರುಗಿದ ಸದ್ಭೋದನ ಮಾಸಿಕ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಹು ಹಿಂದಿನಿಂದಲೂ ಪ್ರತಿಯೊಂದು ಧಾರ್ಮಿಕ ಕೇಂದ್ರಗಳು ಧರ್ಮ, ಕಾಯಕನಿಷ್ಠೆ, ಶಿಕ್ಷಣ ಸೇರಿದಂತೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬಂದಿವೆ. ಆದರೆ, ಇತ್ತೀಚಿನ ಕೆಲ ಘಟನೆಗಳು ಎಲ್ಲ ಧಾರ್ಮಿಕ ಕೇಂದ್ರಗಳನ್ನು ಸಂಶಯಾಸ್ಪದವಾಗಿ ನೋಡುವಂತೆ ಮಾಡಿವೆ ಎಂದರು.
ಧರ್ಮದ ಅಧಃಪತನವಾದರೆ ಸಮಾಜ ಅವನತಿಯತ್ತ ಸಾಗಿದೆ ಎಂದರ್ಥ. ಈ ಹಿನ್ನೆಲೆಯಲ್ಲಿ ನೆಮ್ಮದಿ ಬದುಕನ್ನು ಸಾಗಿಸಲು ಮತ್ತೆ ಧಾರ್ಮಿಕ ಕೇಂದ್ರಗಳತ್ತ ಮುಖ ಮಾಡುವ ಮೂಲಕ ಗುರುವಿನ ಮಾರ್ಗದರ್ಶನ ಪಡೆದುಕೊಳ್ಳಬೇಕಾಗುತ್ತದೆ ಎಂದರು.
ವೈಯಕ್ತಿಕ ಪ್ರತಿಷ್ಠೆ ಬದಿಗೊತ್ತಿ: ಸನ್ಯಾಸತ್ವದ ಗಂಧಗಾಳಿಯಿಲ್ಲದ ಸ್ವಯಂಘೋಷಿತ ಸ್ವಾಮೀಜಿಗಳಿಂದ ಜಂಗಮ ಎಂಬ ಪದಕ್ಕೆ ಚ್ಯುತಿ ಬರುವಂತಹ ಕಾರ್ಯಗಳು ನಡೆಯುತ್ತಿವೆ. ಇದರಿಂದ ಸಮಾಜದಲ್ಲಿ ಅವರ ಮೇಲಿದ್ದ ಗೌರವ ಸೂಚಕಗಳು ಜನರಿಂದ ದೂರ ವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಸದ್ಭೋದನ ಕಾರ್ಯಕ್ರಮವು ಸಮಾಜ ಬಾಂಧವರನ್ನು ಜಾಗೃತಿ ಗೊಳಿಸುವಲ್ಲಿ ಯಶಸ್ವಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ವೈಯಕ್ತಿಕ ಪ್ರತಿಷ್ಠೆ ಬದಿಗೊತ್ತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯ ಸಂಚಾಲಕ ರಾಚಯ್ಯಶಾಸ್ತ್ರಿ ಓದಿಸೋಮಠ ಮಾತನಾಡಿ, ಇತ್ತೀಚಿನ ಶೈಕ್ಷಣಿಕ ಪದ್ಧತಿಯಲ್ಲಿ ಸತ್ಯ ನಿಷ್ಠೆ ಆಚಾರ ವಿಚಾರಗಳು ಮಾಯವಾಗಿವೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಕೃತಿಗೆ ಧಕ್ಕೆಯಾಗದ ರೀತಿಯಲ್ಲಿ ಪಾಲಕರು ಮಕ್ಕಳಿಗೆ ಬೋಧನೆ ಮಾಡಬೇಕಾಗಿದೆ ಎಂದರು. ಗಂಗಾಧರ ಶಾಸ್ತ್ರೀ ಹಿರೇಮಠ, ನಿವೃತ್ತ ಪ್ರಾಚಾರ್ಯ ಎಸ್.ಬಿ. ತವರದ ಮೃತ್ಯುಂಜಯ ಹಿರೇಮಠ, ಗೌರವಾಧ್ಯಕ್ಷ ಎಂ.ಎ. ಹಿರೇಮಠ, ಶಂಬುಲಿಂಗಯ್ಯ ಬೂದಿಹಾಳಮಠ, ರಾಜಶೇಖರ ಹಾಲೇವಾಡಿಮಠ, ಮುನವಳ್ಳಿಮಠ, ಗಿರೀಶ ಇಂಡಿಮಠ ಹಾಗೂ ಇನ್ನಿತರರು ಇದ್ದರು. ಪುಷ್ಟಾ ಹಾಲೇವಾಡಿಮಠ ಸ್ವಾಗತಿಸಿದರು. ಚಂದ್ರ ಶೇಖರ ಕುಂದಗೋಳಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.