ನೌಕರರ ಸಮಸ್ಯೆಗಳ ಬಗ್ಗೆ ಒತ್ತು: ಡಿ.ಎಚ್. ಅಜ್ಜಿ
ನರಗುಂದ: ರಾಜ್ಯ ಸರ್ಕಾರ ನೌಕರರು ಹಗಲಿರಳು ತಮ್ಮ ಜೀವನವನ್ನು ಸರ್ಕಾರದ ಕಾರ್ಯಕ್ಕೆ ಮೀಸಲಿಡುತ್ತೇವೆ. ಅದಕ್ಕೆ ಈ ನೌಕರದಾರರಿಗೆ ಸಿಗಬೇಕಾದ ಕೆಲವು ಸೌಲಭ್ಯಗಳ ಬಗ್ಗೆ ಸರ್ಕಾರ ಸ್ಪಂದಿಸಬೇಕು ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಡಿ.ಎಚ್. ಅಜ್ಜಿ ಹೇಳಿದರು.
ಅವರು ಈಚೆಗೆ ಪಟ್ಟಣದ ನೌಕರರ ಭವನದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದರು. ತಾಲೂಕಿನ ಎಲ್ಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಾಗೆಯೇ ಸಂಘದ ಕಟ್ಟಡವನ್ನು ಸುಸಜ್ಜತಗೊಳಿಸಲು ಸರ್ವ ಸದಸ್ಯರ ಸಹಕಾರ ಪಡೆದುಕೊಂಡು ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು. ಕೆ.ಐ. ನಾಗಠಾಣ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪಿ.ಸಿ. ಕಲಹಾಳ, ಬಿ.ಆರ್. ಪಾಟೀಲ, ಬಿ.ಆರ್. ತಳವಾರ, ಪರಸಪ್ಪ, ಎಚ್.ವಿ. ಕಣವಿ, ವಿ.ಆರ್. ಚುಳಕಿ ಮುಂತಾದವರು ಇದ್ದರು. ಆರ್.ಎಚ್. ಹಾನಾಪುರ ಸ್ವಾಗತಿಸಿದರು. ಕೆ.ಬಿ. ಹುಲಗೂರ ನಿರೂಪಿಸಿದರು. ಎಸ್.ಎಚ್. ದ್ಯಾವನಗೌಡರ ವಂದಿಸಿದರು.
ಕೇಬಲ್ ಆಪರೇಟರ್ಸ್ ಕಾರ್ಯ ಶ್ಲಾಘನೀಯ
ಮುಂಡರಗಿ: ಸಾರ್ವಜನಿಕರ ಮನರಂಜನಾ ಕ್ಷೇತ್ರದ ವಿಷಯದಲ್ಲಿ ಕೇಬಲ್ ಆಪರೇಟರ್ಗಳ ಕಾರ್ಯ ಮೆಚ್ಚುವಂತದ್ದು ಎಂದು ಯುವ ಕಾಂಗ್ರೆಸ್ ಮುಖಂಡ ಮಿಥುನ್ಗೌಡ ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಕೇಬಲ್ ಆಪರೇಟರ್ಸ್ ಅಸೋಶಿಯೇಶನ್ ಮುಂಡರಗಿ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಟಿವಿ, ಕೇಬಲ್ ಆಪರೇಟರ್ಸ್ ದಿನಾಚರಣೆಯಲ್ಲಿ ಮಾತನಾಡಿದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಇಂದು ಎಲ್ಲರೂ ಅವರವರ ಮನೆಗಳಿಗೆ ಸ್ವಂತ ಡಿಶ್ಗಳನ್ನು ತಾವೇ ಹಾಕಿಕೊಳ್ಳುತ್ತಿರುವುದರಿಂದ ಈ ಉದ್ಯೋಗದಲ್ಲಿರುವವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂ ದರು. ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯವಹಿಸಿ, ಟಿವಿಗಳಿಲ್ಲದ ಮನೆಗಳು ಎಲ್ಲಿಯೂ ಇಲ್ಲ ಎಂದರು. ಸಂಘದಿಂದ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಆಪರೇಟರ್ಸ್ ಸಂಘದ ಅಧ್ಯಕ್ಷ ಮಹ್ಮದ್ಗೌಸ್ ತಾಂಬೋಟಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ತಾರೂಬಾಯಿ ಚವ್ಹಾನ್, ಪಿ.ಎಂ. ಪಾಟೀಲ, ಕರಬಸಪ್ಪ ಹಂಚಿನಾಳ, ಎಸ್.ಎಸ್. ಶಿವನಗೌಡ್ರ, ಎಂ.ಕೆ.ಚಂದ್ರಕುಮಾರ, ತಿಪ್ಪಾರಡ್ಡಿ, ಸುನೀಲ್ ತೆಂಬದಮನಿ, ಶಿವನಗೌಡ ಕುಕನೂರ, ಲಿಂಗರಾಜಗೌಡ ಪಾಟೀಲ, ಸೇರಿದಂತೆ ಅನೇಕರು ಇದ್ದ ರು. ಪ್ರಶಾಂತ ಪುರಸದ ಕಾರ್ಯಕ್ರಮ ನಿರೂಪಿಸಿದರು.
ಬಡವರ ಸೇವೆ ಶ್ಲಾಘನೀಯ
ನರಗುಂದ: ಸಮಾಜದಲ್ಲಿ ವಿವಿಧ ಸಂಘ-ಸಂಸ್ಥೆಗಳು ಸಮುದಾಯದಲ್ಲಿರುವ ಕಡು ಬಡವರಿಗೆ ಉಚಿತವಾಗಿ ನೇತ್ರ ಚಿಕಿತ್ಸೆ ಮತ್ತು ಎಲುಬು ಕೀಲು ತಪಾಸಣೆ ಮುಂತಾದ ಕಾರ್ಯ ಶ್ಲಾಘನೀಯವಾದದ್ದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು. ಅವರು ಈಚೆಗೆ ತಾಲೂಕಿನ ಶಿರೋಳ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ಜ್ಞಾನ ಸಂಸ್ಥೆ ಹಾಗೂ ಡಾ. ವಿ.ಎಸ್.ಚವಡಿಯರ ಸಂಯೋಗದಲ್ಲಿ ನಡೆದ ನೇತ್ರ ಉಚಿತ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಬದುಕುವ ಪ್ರತಿಯೊಂದು ಜೀವಗಳಿಗೆ ದೇಹದ ಎಲ್ಲ ಅಂಗಾಂಗಗಳಿಗಿಂತ ಕಣ್ಣು ಬಹಳ ಅವಶ್ಯ. ಸಮಾಜದಲ್ಲಿ ಇಂದಿನ ಆಧುನಿಕ ಯುಗದಲ್ಲಿ ಕಡು ಬಡವರಿಗೆ ಕಣ್ಣುಗಳ ತಪಾಸಣೆ ಮಾಡಿಕೊಳ್ಳುವುದು ಮತ್ತು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳವುದು ಸುಲಭದ ಮಾತಲ್ಲ, ಸಮಾಜದಲ್ಲಿರುವ ಉದಾರ ದಾನಿಗಳು ಇಂಥ ಉಚಿತ ಚಿಕಿತ್ಸೆ ಮಾಡುವ ಮೂಲಕ ಬಡವರ ಬಾಳಿಗೆ ಹೊಸ ಬಾಳು ಕೊಡಲು ಮುಂದಾಗಿರುವುದು ಇತರರಿಗೆ ಮಾದರಿ ಎಂದರು. ಈ ಶಿಬಿರದಲ್ಲಿ 150ಕ್ಕೂ ಹೆಚ್ಚು ಬಡ ಫಲಾನುಭವಿಗಳು ಶಿಬಿರದ ಲಾಭ ಪಡೆದುಕೊಂಡರು. ಗ್ರಾಪಂ ಅಧ್ಯಕ್ಷೆ ಬಸವಣ್ಣವ್ವ ವಸ್ತ್ರದ, ಎನ್.ವಿ. ಗಾಡಿ, ಡಾ. ಉಪ್ಪಾಲಗಾಂಧಿ ಕುಲಕರ್ಣಿ, ನಾಗನಗೌಡ ತಿಮ್ಮನಗೌಡ್ರ, ಚಂದ್ರಶೇಖರಗೌಡ ಪಾಟೀಲ, ಎಂ.ವಿ. ಚಿಕ್ಕನರಗುಂದ, ವಸಂತ ಕುಂದರಗಿ, ಪ್ರಭಯ್ಯ ಅಂಗ್ಲಿಮಠ, ಬಿ.ಜಿ. ಕರ್ಕಿಕಟ್ಟಿ, ರೇವಣಸಿದ್ದಯ್ಯ ಶಿವಪ್ಪಯ್ಯನಮಠ, ಬಾಪುಗೌಡ ತಿಮ್ಮನಗೌಡ್ರ, ಡಾ. ವಿ.ಎಸ್. ಚವಡಿ, ಡಾ. ಎಂ.ಎಂ. ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.
ಉತ್ತಮ ಸಾಧನೆ
ನರಗುಂದ: ತಾಲೂಕಿನ ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಹುಣಸಿಕಟ್ಟಿ ಗ್ರೂಪ್ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹಾಗೂ ಬಾಲಕರು ವೀರಾಗ್ರಣಿ ಹಾಗೂ ಬಾಲಕಿಯರು ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದು, ವಿದ್ಯಾರ್ಥಿಗಳಿಗೆ ಎಸ್ಡಿಎಂಸಿ ಅಧ್ಯಕ್ಷ ಎಸ್.ಟಿ. ಶಲ್ಲಿಕೇರಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಗದಗ: 110 ಕೆವಿ ಗದಗ ಉಪವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆ. 3ರಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ 110 ಕೆವಿ ಗದಗ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗದಗ ಶಹರ, 33 ಕೆವಿ ಹುಲಕೋಟಿ, 33 ಕೆವಿ ಲಕ್ಕುಂಡಿಯಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳ 11 ಕೆವಿ ವಿತರಣಾ ಮಾರ್ಗಗಳಲ್ಲಿ ಹಾಗೂ 110 ಕೆವಿ ಗದಗದಿಂದ ಪೂರೈಸಲ್ಪಡುವ ಕೆಪಿಸಿ, ಇಂಡೋವಿಂಡ್, ಟಿಡಿಪಿಎಲ್ ಪಯೋನಿಯರ್, ನಾಗಾವಿ ಐಪಿಪಿ ಸ್ಥಾವರಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆಂದು ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರು ತಿಳಿಸಿದ್ದಾರೆ.
ಸವಾಲು ಎದುರಿಸುವ ಸಾಮರ್ಥ್ಯ ಬೇಕು: ರವೀಂದ್ರ ಸಂಕೇಶ್ವರ
ಗದಗ: ವ್ಯಾಪಾರ ಮಾಡುವವರು ಗ್ರಾಹಕರ ಮನಸ್ಸುಗಳನ್ನು ಅಧ್ಯಯನ ಮಾಡಬೇಕು. ವ್ಯಕ್ತಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು ವ್ಯವಹಾರ ಮಾಡಬೇಕು. ಕಾರಣ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮುಂದೇ ಸಾಗುವುದೇ ಜೀವನ ಎಂದು ಸಂಕೇಶ್ವರ ಮಿನರಲ್ ಪ್ರೈ. ಲಿಮಿಟೆಡ್ನ ಮಾಲೀಕ ರವೀಂದ್ರ ಸಂಕೇಶ್ವರ ಹೇಳಿದರು.
ಅವರು ಈಚೆಗೆ ಆದರ್ಶ ಶಿಕ್ಷಣ ಸಮಿತಿಯ ಬಿಬಿಎ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಲಿಕೆ-ಗಳಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳೊಂದಿಗೆ ಗ್ರಾಹಕ ಮನಸ್ಸು ಹೇಗೆ ಪರಿವರ್ತನೆ ಮಾಡಬೇಕು ಹಾಗೂ ಗ್ರಾಹಕರೊಂದಿಗೆ ವ್ಯಾಪಾರಸ್ಥರು ಹೇಗೆ ಉತ್ತಮ ಬಾಂದವ್ಯ ಹೊಂದಿಕೊಳ್ಳಬೇಕು ಎಂಬುದನ್ನು ವ್ಯಾಪಾರಸ್ಥರು ಅರಿತುಕೊಳ್ಳುವುದು ಅವಶ್ಯ ಎಂದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ರವಿ ಮುದೋಳ ಮಾತನಾಡಿದರು. ಬಿಬಿಎ ವಿಭಾಗದ ನಿರ್ದೇಶಕ ಪ್ರೊ.ಪಿ.ಆರ್.ವಡವಿ, ಪ್ರಾಚಾರ್ಯ ಪ್ರೊ.ಬಿ.ಎ.ಹಿರೇಮಠ, ಡಾ. ಎಂ.ಎಲ್. ಗುಳೇದಗುಡ್ಡ, ವಿ.ಕೆ. ಸೊರಟೂರ ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ಪ್ರೊ. ಎಸ್.ಎಲ್. ರೇಶ್ಮೆ ಸ್ವಾಗತಿಸಿದರು. ಪ್ರೊ.ಬಿ.ಪಿ.ಜೈನರ ನಿರೂಪಿಸಿದರು. ರಾಧಾ ಹಿರೇಕೊಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

