ಗದಗ

ವಿಶ್ವಕರ್ಮ ಸಮಾಜಕ್ಕೆ ಸರ್ಕಾರಗಳಿಂದ ತಾರತಮ್ಯ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಸೆ. 7
ತಮ್ಮ ಮೂಲ ಕಸುಬನ್ನೇ ನಂಬಿ ದುಡಿಮೆಯಲ್ಲಿ ತೊಡಗಿರುವ ವಿಶ್ವಕರ್ಮ ಸಮಾಜ ತೀರಾ ಹಿಂದುಳಿದಿದೆ. ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ಸರ್ಕಾರ ಬಂದರೂ ಸರ್ಕಾರದ ಯಾವುದೇ ಸೌಲಭ್ಯಗಳು ಈ ಸಮಾಜದ ಜನರಿಗೆ ದೊರೆತಿಲ್ಲ. ರಾಜಕೀಯವಾಗಿ ಸಮಾಜದ ಸಮಸ್ತ ಜನರಿಗೆ ಅಧಿಕಾರ ದೊರೆತಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ಅವರು ಶುಕ್ರವಾರ ಸಂಜೆ ಶ್ರೀ ಕ್ಷೇತ್ರ ವರವಿ ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಸಮಾರೋಪ ಸಮಾರಂಭ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಪ್ರತಿವರ್ಷವೂ ಕೋಟ್ಯಂತರ ಹಣ ಖರ್ಚು ಮಾಡಿ ಹಂಪಿ ಉತ್ಸವ ಮಾಡುತ್ತಿರುವ ಸರ್ಕಾರ ಅಲ್ಲಿರುವ ಪ್ರತಿಯೊಂದು ಮೂರ್ತಿ, ಶಿಲೆಗಳಿಗೆ ರೂಪಕೊಟ್ಟ ಸಮಾಜದವರನ್ನು ಮರೆತಿದೆ. ರಾಜ್ಯದಲ್ಲಿ 67 ವಿಶ್ವಕರ್ಮ ಮಠಾಧೀಶರಿದ್ದು, ಯಾರೊಬ್ಬರನ್ನೂ ಯಾವುದೇ ಸರ್ಕಾರಗಳು ವೇದಿಕೆ ಮೇಲೆ ಕರೆಯಿಸಿ ಗೌರವಿಸಿಲ್ಲ. ಇದು ಅನ್ಯಾಯ, ದೌರ್ಜನ್ಯ ಅಲ್ಲವೇ ಎಂದು ಪ್ರಶ್ನಿಸಿದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೌಲಭ್ಯದಿಂದ ಈ ಸಮಾಜದ ಮಕ್ಕಳು ವಂಚಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಶ್ವಕರ್ಮ ಬ್ರಹ್ಮಾಂಡದ ಸೃಷ್ಟಿಕರ್ತ ಇವರ ಹೆಸರಿನಲ್ಲಿ ಸೆ. 17 ರಂದು ಜಯಂತಿ ಆಚರಿಸಲು ಸರ್ಕಾರಿ ರಜೆ ನೀಡುವಂತೆ ಕಳೆದ 13 ವರ್ಷಗಳಿಂದ ಸರ್ಕಾರದ ಗಮನಕ್ಕೆ ತರುತ್ತಿದ್ದರೂ ಗಮನ ಹರಿಸಿಲ್ಲ. ರಾಜಕೀಯವಾಗಿ ಬಲಿಷ್ಠವಾಗಿರುವ ಸಮಾಜಕ್ಕೆ ಸರ್ಕಾರ ಮಣೆ ಹಾಕುತ್ತಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನೀಡುವ ಅನುದಾನದಲ್ಲಿಯೂ ಹಿಂದಿನ ಸರ್ಕಾರಗಳು ತಾರತಮ್ಯ ಮಾಡಿವೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಜಾತ್ಯತೀತವಾಗಿ, ರಾಜಕೀಯವಾಗಿ, ಪರರಿಗೆ ಸಹಾಯ ಸಹಕಾರ ನೀಡಿ ಬೆಳೆಸಿದ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜತೆಗೆ ಈ ಭಾಗದ ಪುಣ್ಯ ಕ್ಷೇತ್ರ ಶ್ರೀ ವರವಿ ಮೌನೇಶ್ವರ ಮಠದ ಅಭಿವೃದ್ಧಿಗೆ ತಾವು ಕೈಜೋಡಿಸುವುದಾಗಿ ಕಮಿಟಿಯವರೊಂದಿಗೆ ಮಾತುಕತೆ ನಡೆಸಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಟಿ. ಈಶ್ವರ, ಬಸವರಾಜ ಪಂಚಾಳ, ಪಿ.ಬಿ. ಬಡಿಗೇರ ಮಾತನಾಡಿದರು. ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಕಾಂತ ಸೋನಾರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರೂಪಾಕ್ಷ ಶ್ರೀಗಳು ವಹಿಸಿದ್ದರು. ರಾಜ್ಯಪಾಲರ ರಾಜಭವನದ ವ್ಯವಸ್ಥಾಪಕ ಅಣ್ಣಾಸಾಹೇಬ ಬಡಿಗೇರ, ಜಾತ್ರಾ ಸಮಿತಿ ಅಧ್ಯಕ್ಷ ಶಂಕರ ಕಡ್ಲಿಕೊಪ್ಪ, ಮನೋಹರ ಲಕ್ಕುಂಡಿ, ಮೌನೇಶ ಸುಳ್ಳದ, ನರಸಿಂಗರಾವ್ ಹೇಮನೂರ, ಮಹೇಶ ಹುಲಬಜಾರ, ಚನ್ನಪ್ಪ ವಿಶ್ವಕರ್ಮ, ಹನಮಂತಗೌಡ ಪಾಟೀಲ, ದೇವಪ್ಪ ಲಮಾಣಿ, ತಿಪ್ಪೇಸ್ವಾಮಿ ಕುರಗೋಡ, ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಲಕ್ಷದೀಪೋತ್ಸವ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಾಯಿತು. ಮೋಹನ ನರಗುಂದ ಸ್ವಾಗತಿಸಿದರು. ಎಸ್.ಪಿ. ಕಮ್ಮಾರ ನಿರೂಪಿಸಿದರು. ಮಹೇಶ ಹುಲಬಜಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.