ಗದಗ

ಉತ್ತಮ ಆರೋಗ್ಯಕ್ಕೆ ಸೈಕ್ಲಿಂಗ್ ಅವಶ್ಯಕ: ಡಾ. ಶರಣಪ್ಪ

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 12
ಉತ್ತಮ ಆರೋಗ್ಯ ಹೊಂದಲು ಸೈಕ್ಲಿಂಗ್ ಸಹಕಾರಿಯಾಗಿದ್ದು, ಯುವಕರು ಸೈಕ್ಲಿಂಗ್ ಕ್ರೀಡೆಯ ಮೂಲಕ ತಮ್ಮ ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಅವರು ಬುಧವಾರ ನಗರದ ಜೆ.ಟಿ. ಮಹಾವಿದ್ಯಾಲಯದ ಆವರಣದಲ್ಲಿ ಹುಲಕೋಟಿ ಸರ್ಕಾರಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಕರ್ನಾಟಕ ವಿಶ್ವವಿದ್ಯಾಲಯಮಟ್ಟದ ಏಕವಲಯ ಸೈಕ್ಲಿಂಗ್ ಸ್ಪರ್ಧೆ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯ ತಂಡದ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ಸೈಕ್ಲಿಂಗ್ ಕೂಡ ಒಂದು ಸ್ಪರ್ಧೆಯಾಗಿ ಪ್ರಾರಂಭವಾಗಿದೆ. ರಾಜ್ಯದ ಅನೇಕ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಖ್ಯಾತಿಗಳಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಕ್ರೀಡಾಪಟುಗಳು ಹೆಚ್ಚು ಸಾಧನೆ ಮಾಡಿದ್ದಾರೆ. ಸೈಕ್ಲಿಂಗ್‌ನ್ನು ಕೇವಲ ಸ್ಪರ್ಧೆಗಾಗಿ ಮಾತ್ರ ಸೀಮಿತ ಮಾಡದೇ ಆರೋಗ್ಯದ ದೃಷ್ಠಿಯಿಂದಲೂ ಅವಶ್ಯಕವಾಗಿದೆ. ಹಾಗಾಗಿ ಇಂಧನ ಉಳಿತಾಯ, ಆರೋಗ್ಯ, ಪರಿಸರ ರಕ್ಷಣೆಯ ಉದ್ದೇಶಕ್ಕಾಗಿ ಪ್ರತಿಯೊಬ್ಬರೂ ಸೈಕ್ಲಿಂಗ್‌ಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ. ಕುರಣಿ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳಿಗೆ ಸೈಕ್ಲಿಂಗ್ ಹೇಳಿ ಮಾಡಿಸಿದಂತಹ ಕ್ರೀಡೆಯಾಗಿದೆ. ಈ ಬಗ್ಗೆ ಹೆಚ್ಚು-ಹೆಚ್ಚು ವಿದ್ಯಾರ್ಥಿಗಳು ಆಸಕ್ತಿವಹಿಸಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೈಕ್ಲಿಂಗ್‌ನಲ್ಲಿ ಇಂದು ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳಿವೆ. ಅವುಗಳನ್ನು ಯುವ ಸಮುದಾಯ ಸದುಪಯೋಗ ಪಡೆದುಕೊಳ್ಳಬೇಕು. ಕ್ರೀಡಾ ಇಲಾಖೆ ಕೂಡ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಮೂಲಿಮನಿ ಮಾತನಾಡಿದರು. ಕವಿವಿ ವ್ಯಾಪ್ತಿಯಲ್ಲಿ ಬರುವ ವಿವಿಧ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ವಿ.ಪಾಟೀಲ, ಪ್ರಾ. ಎಸ್.ಎಸ್. ಯಂಕಂಚಿ, ಮೋಹನ್ ದುರಗಣ್ಣವರ, ಉಮೇಶ ಅಂಗಡಿ, ಎಸ್.ಎಂ. ಕೊಡ್ಲಿ ಸೇರಿದಂತೆ ಆಯ್ಕೆ ಸಮಿತಿ ಸದಸ್ಯರು, ಕ್ರೀಡಾಧಿಕಾರಿಗಳು ಉಪಸ್ಥಿತರಿದ್ದರು.
ಎಸ್.ಜಿ. ಉಳಗೇರ ಸ್ವಾಗತಿಸಿದರು. ಜಿ.ಎಫ್. ಕಾಯಕದ ನಿರೂಪಿಸಿದರು. ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.