ನೆಹರು ಯುವಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್
ಕನ್ನಡಪ್ರಭ ವಾರ್ತೆ, ಗದಗ, ಸೆ. 13
ದೇಶದಲ್ಲಿರುವ ಯುವ ಶಕ್ತಿಯನ್ನು ಜಾಗೃತಿಗೊಳಿಸಿ, ಅದನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಬರುವ ಡಿಸೆಂಬರ್ನಲ್ಲಿ ಬೃಹತ್ ಸಮಾವೇಶವನ್ನು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೆಹರು ಯುವಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ಹೇಳಿದರು.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ದೇಶದಾದ್ಯಂತ ನೆಹರು ಯುವ ಕೇಂದ್ರದ ಘಟಕಗಳು ಕಾರ್ಯ ನಿರ್ವಹಿಸುತ್ತಲಿವೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಜರಗುವ ಸಮಾವೇಶದಲ್ಲಿ ಸುಮಾರು ಒಂದು ಲಕ್ಷ ಯುವಕರು ಭಾಗವಹಿಸಲಿದ್ದಾರೆ. ಸಮಾವೇಶವನ್ನು ಪ್ರಧಾನಿ ಡಾ. ಮನಮೋಹನಸಿಂಗ್ ಉದ್ಘಾಟಿಸಲಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಹಲವಾರು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಇಂದಿರಾಗಾಂಧಿ ಕನಸಿನ ನೆಹರು ಯುವಕೇಂದ್ರಕ್ಕೆ ದಿ. ರಾಜೀವಗಾಂಧಿ ಶಕ್ತಿ ತುಂಬಿದರು. ಇದರ ಪರಿಣಾಮವಾಗಿ ಇಂದು ಸುಮಾರು 80 ಲಕ್ಷ ಸದಸ್ಯರು 2.50 ಸಾವಿರ ಘಟಕಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಯಂ ಉದ್ಯೋಗ ಸೃಷ್ಠಿ, ನಿರುದ್ಯೋಗ ನಿವಾರಣೆ, ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡುವ ನೆಹರು ಯುವಕೇಂದ್ರ ವಿಶ್ವದ ದೊಡ್ಡ ಸಂಘಟನೆಯಾಗಿದೆ. ಬೇರೆ-ಬೇರೆ ರಾಜ್ಯಗಳ ವಿದ್ಯಾರ್ಥಿಗಳನ್ನು ದೇಶದ ಸುಮಾರು ಸ್ಥಳಗಳಲ್ಲಿ ಸಂವಾದಗಳನ್ನು ನಡೆಸಿ, ದೇಶದ ಸಮಸ್ಯೆ ಹಾಗೂ ವಿವಿಧ ಆಯಾಮಗಳನ್ನು ಸಂವಾದದ ಮೂಲಕ ತಿಳಿಸಿಕೊಡಲಾಗಿದೆ. ಅಲ್ಲದೇ ಸಾಮಾಜಿಕ ನ್ಯಾಯ, ಸಮಾಜಕ್ಕೆ ಅನಿಷ್ಠವಾಗಿರುವ ಮಾದಕ ವಸ್ತುಗಳ ವಿರುದ್ಧ ಸಮರಸಾರಲು ನಿರ್ಧರಿಸಲಾಗಿದ್ದು, ಮಾದಕ ದ್ರವ್ಯದ ವಿರುದ್ಧ ಆಂದೋಲನಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. ದೇಶದ ಪ್ರತಿಯೊಂದು ಹಳ್ಳಿಯಲ್ಲಿ ನೆಹರು ಯುವ ಘಟಕ ಹೊಂದಿರಬೇಕು. ನೆಹರು ಯುವಕೇಂದ್ರದ ಘಟಕಗಳು ಅಲ್ಲಿನ ಸಮಸ್ಯೆಗಳ ಕುರಿತು ಚಿಂತನ-ಮಂಥನ ಜರುಗಬೇಕು. ಆ ಮೂಲಕ ಸ್ಥಳೀಯರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಮಗ್ರವಾದ ಮಾಹಿತಿ ದೊರೆಯಬೇಕೆಂಬ ಆಶಯ ನೆಹರು ಯುವ ಕೇಂದ್ರದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜಾವೇದ ಸುಂಕದ, ನಗರಸಭಾ ಸದಸ್ಯ ಬರಕತ್ಅಲಿ ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

