ಗದಗ

ಗ್ರಾಮಗಳ ಅಭಿವೃದ್ಧಿ ಕಾಂಗ್ರೆಸ್ ಗುರಿ: ಪಾಟೀಲ

Published On :

ಗಜೇಂದ್ರಗಡ:  ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳಿಸುವುದರ ಜತೆಗೆ ಸರ್ವ ಜನಾಂಗದ ಆಶೋತ್ತರಗಳಿಗೆ ಸ್ಪಂದಿಸುವುದೇ ಕಾಂಗ್ರೆಸ್‌ನ ಮುಖ್ಯ ಗುರಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಸಮೀಪದ ಗುಳಗುಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2011-12ನೇ ಸಾಲಿನಲ್ಲಿ ಬಿಡುಗಡೆಯಾದ ರು. 10 ಲಕ್ಷ ಅನುದಾನದಲ್ಲಿ ಗ್ರಾಮದ ಎಸ್.ಟಿ. ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಬಡವರ ಕಷ್ಟ ದೂರ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಬಿಪಿಎಲ್ ಕುಟುಂಬಕ್ಕೆ ಪ್ರತಿ ಕೆಜಿಗೆ ರು. 1ರ ದರದಲ್ಲಿ ಅಕ್ಕಿ ನೀಡುವ ಅನ್ನಭಾಗ್ಯ, ಕ್ಷೀರ ಭಾಗ್ಯದಂತಹ ಜನಪರ ಯೊಜನೆಗಳನ್ನು ಜಾರಿಗೊಳಿಸಿದೆ. ದೇಶದ ಯಾವೊಬ್ಬ ಪ್ರಜೆಯು ಹಸಿವಿನಿಂದ ಬಳಲಬಾರದೆಂಬ ಸದುದ್ದೇಶದಿಂದ ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸಿ ಬಡತನ ಕುಟುಂಬಗಳ ಹಸಿವು ನಿವಾರಿಸಿದೆ. ರಾಜ್ಯ ಸರ್ಕಾರ ಸಣ್ಣ ರೈತರ ರು. 25 ಸಾವಿರ ವರೆಗಿನ ಸಾಲ, ನೇಕಾರ ಹಾಗೂ ಹಿಂದುಳಿದ ಸಮುದಾಯಗಳ ಸಾಲ ಮನ್ನಾ ಮಾಡಿದೆ. ರು. 2 ರುಪಾಯಿ ಹಾಲು ರಿಯಾಯತಿ, ಬಡತನ ರೇಖೇಗಿಂತ ಕೆಳಗಿರುವ ಜನ ವಸತಿಯ ಭಾಗ್ಯಜ್ಯೋತಿ ಯೋಜನೆ ಬಾಕಿ ಹಣ ಮನ್ನಾ ಮಾಡಿರುವುದಲ್ಲದೇ ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಇಚ್ಛಾ ಶಕ್ತಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದರು. ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಶಾಸಕ ಜಿ.ಎಸ್.ಪಾಟೀಲರಿಗೆ ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯ ಯಮನೂರಪ್ಪ ತಳವಾರ, ಸಿ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಎಂ.ಸಿ.ನಿಂಬಲಗುಂದಿ, ಬಸವರಾಜ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ಪಿ.ಎಸ್. ಬೆಳವಣಕಿ, ಸಿ.ಎಂ. ಗೊರವರ, ಎಸ್.ಬಿ. ಭಿಕ್ಷಾವತಿಮಠ ಮುಂತಾದವರು ಹಾಜರಿದ್ದರು.
ಇಂದಿನಿಂದ ಕೌನ ಬನೇಗಾ ಹಜಾರಪತಿ ಕಾರ್ಯಕ್ರಮ
ಗದಗ:  ಬೆಟಗೇರಿಯ ಹಕಾರಿಗಲ್ಲಿಯ ಬ್ರಹ್ಮದೇವ ತರುಣ ಸಂಘದ ಆಶ್ರಯದಲ್ಲಿ 35ನೇ ವರ್ಷದ ಗಜಾನನೋತ್ಸವದ ಅಂಗವಾಗಿ ಕೌನ ಬನೇಗಾ ಹಜಾರಪತಿ ಕಾರ್ಯಕ್ರಮವನ್ನು ಸೆ. 14 ರಿಂದ 17 ರವರೆಗೆ ಆಯೋಜಿಸಲಾಗಿದೆ ಎಂದು ಸಂಘದ ಹಿರಿಯ ಮುಖಂಡ ಈಶ್ವರ ಗಾರ್ಗಿ ಹೇಳಿದರು.  ನಗರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ನಗರದ 20 ಕಾಲೇಜ್‌ಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ 90 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಮತ್ತೆ ಪರೀಕ್ಷೆಯ ಮೂಲಕ 13 ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ ಇದರಲ್ಲಿ 10 ವಿದ್ಯಾರ್ಥಿಗಳು ಕೌನ ಬನೇಗಾ ಹಜಾರಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೆ. 14 ರಿಂದ 16 ರವರೆಗೆ ಪ್ರತಿದಿನ ಸಂಜೆ 6.30 ರಿಂದ 10 ರವರೆಗೆ ಕೌನ ಬನೇಗಾ ಹಜಾರಪತಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ಕಾರ್ಯಕ್ರಮದಲ್ಲಿ 15 ಪ್ರಶ್ನೆಗಳನ್ನು ಕೇಳಲಾಗುವುದು. ಇದರಲ್ಲಿ ಆಯ್ಕೆಯಾದ ಪ್ರಥಮ ವಿದ್ಯಾರ್ಥಿಗೆ ರು. 5 ಸಾವಿರ ಬಹುಮಾನ ನೀಡಲಾಗುವುದು. ಸೆ. 14 ರಂದು ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ವಾಲಿಬಾಲ್‌ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ
ಗದಗ:  ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಭಾಪುರ ಸತತವಾಗಿ ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಪಂದ್ಯದಲ್ಲಿ ಸತತವಾಗಿ 14 ವರ್ಷ ತಾಲೂಕು ಮಟ್ಟದಲ್ಲಿ ಜಯಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಅದೇ ರೀತಿ ಬಾಲಕರ ವಿಭಾಗದಲ್ಲಿ ಸತತವಾಗಿ 10 ವರ್ಷ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ ವಿಭಾಗದ ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.  ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದ ಎಲ್ಲ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕ ವೈ.ಕೆ. ಚೌಡಾಪುರ ಹಾಗೂ ಸಹ ತರಬೇತಿದಾರರಿಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲನಗೌಡ ಭಂಡಿ ಹಾಗೂ ಸದಸ್ಯರು ಮತ್ತು ಗ್ರಾಮದ ದುರ್ಗಾದೇವಿ ದೇವಸ್ಥಾನದ ಸದ್ಬಕ್ತಮಂಡಳಿ ಹಾಗೂ ಗ್ರಾಮದ ಎಲ್ಲ ಯುವಕ ಮಂಡಳದ ಸದಸ್ಯರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡಲಿ
ಗದಗ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮರ್ಪಕ ಶಿಕ್ಷಣ ಪಡೆಯುವತ್ತ ಗಮನ ನೀಡಬೇಕು ಎಂದು ಮಹರ್ಷಿ ವಾಲ್ಮೀಕಿ ರಿಜನಲ್ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯ ಹಮಾಲರ ಒಕ್ಕೂಟದ ಅಧ್ಯಕ್ಷ ಅಯ್ಯಪ್ಪ ನಾಯ್ಕರ ಹೇಳಿದರು.
ಅವರು ಈಚೆಗೆ ಸಂಸ್ಥೆಯ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು. ಕಲಿತವರು ಒಳ್ಳೆಯ ಪ್ರಜೆಗಳಾಗಿ ತಂದೆ, ತಾಯಿ ಶಿಕ್ಷಕರಿಗೆ ಗೌರವ ತರಬೇಕು. ಅದುವೇ ನಿಜವಾದ ವಿದ್ಯಾರ್ಥಿಗಳ ಲಕ್ಷಣ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಜೆ.ಎಚ್. ತಳವಾರ ಮಾತನಾಡಿದರು. ಜಿ.ಎಚ್. ಪೂಜಾರ, ನಿಸ್ಸಾರ ಅಹ್ಮದ್ ಖಾಜಿ ಮತ್ತು ಎಂ.ಎಚ್. ಪೂಜಾರ ಮಾತನಾಡಿ, ಶಿಕ್ಷಣವು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಮಾರ್ಗವಾಗಿದ್ದು, ಶಿಕ್ಷಕರ ಮೇಲೆ ಇಂದು ಆದರ್ಶ ಜನಾಂಗವನ್ನು ಕಟ್ಟುವ ಜವಾಬ್ದಾರಿ ಹೆಚ್ಚಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಡಿ.ಎಸ್. ತಳವಾರ, ಎಸ್.ಕೆ. ನದಾಫ, ಅನಿಲ ಚಲವಾದಿ, ಎಂ.ಎನ್. ಕುರಹಟ್ಟಿ ಮುಂತಾದವರು ಉಪಸ್ಥಿತರಿದ್ದರು. ಮಹರ್ಷಿ ವಾಲ್ಮೀಕಿ ವಿದ್ಯಾರ್ಥಿ ವಸತಿ ನಿಲಯದ ಮಕ್ಕಳು ಪ್ರಾರ್ಥಿಸಿದರು. ಎಸ್.ಜಿ. ರೊಟ್ಟಿ ಸ್ವಾಗತಿಸಿದರು. ಇ.ಆರ್. ಆರಟ್ಟಿ ಹಾಗೂ ಜಿ.ಎಚ್. ಪೂಜಾರ ನಿರೂಪಿಸಿದರು. ಎಚ್.ಎನ್. ಚಿಗರಿ ವಂದಿಸಿದರು.
4 ಅಭ್ಯರ್ಥಿಗಳಿಗೆ ಉದ್ಯೋಗ
ಗದಗ: ಪ್ರಸಕ್ತ ತಿಂಗಳಲ್ಲಿ (ಆಗಸ್ಟ್‌ನಲ್ಲಿ) ಒಟ್ಟು 150 ಅಭ್ಯರ್ಥಿಗಳು (44 ಮಹಿಳೆಯರು ಸೇರಿ) ತಮ್ಮ ಹೆಸರನ್ನು ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ. ಕಳೆದ ತಿಂಗಳಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯಲ್ಲಿ ಕಡಿತ ಕಂಡುಬಂದಿದೆ. ಪ್ರಸಕ್ತ ತಿಂಗಳಲ್ಲಿ 4 ಅಭ್ಯರ್ಥಿಗಳು (3 ಮಹಿಳೆಯರು ಸೇರಿ) ಉದ್ಯೋಗ ಪಡೆದಿರುತ್ತಾರೆ. 7660 ಅಭ್ಯರ್ಥಿಗಳು (1835 ಮಹಿಳೆಯರು ಸೇರಿ) ಚಾಲ್ತಿ ದಾಖಲೆಯಲ್ಲಿರುವರು ಎಂದು ಪ್ರಕಟಣೆ ತಿಳಿಸಿದೆ.
19ರಂದು ಜಿಪಂ ಸಭೆ
ಗದಗ: ಜಿಪಂ ಸಾಮಾನ್ಯ ಸಭೆ ಸೆ. 19ರಂದು ಬೆಳಗ್ಗೆ 11ಕ್ಕೆ ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಜಿಪಂ ಸಿಇಒ ವೀರಣ್ಣ ತುರಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಅದಾಲತ್ ಕಾರ್ಯಕ್ರಮ
ಗದಗ:  ಸಹ ನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಸೆ. 20ರಂದು ಗದಗ ಜಿಲ್ಲೆಯಲ್ಲಿ ಶಿಕ್ಷಣ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಜಿಲ್ಲಾ ಹಂತದಲ್ಲಿ ಕಡತ ವಿಲೇವಾರಿ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದು, ಇಲಾಖೆಯ ಆಡಳಿತ ವ್ಯವಸ್ಥೆ ಚುರುಕುಗೊಳಿಸುವುದು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವುದು, ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸುವುದು ಶಿಕ್ಷಣ ಅದಾಲತ್‌ನ ಮುಖ್ಯ ಉದ್ದೇಶವಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಂಘ ಸಂಸ್ಥೆಗಳವರು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ತಮ್ಮ ಅಹವಾಲುಗಳನ್ನು ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ಗದಗ ಇವರಿಗೆ ಸೆ. 19ರೊಳಗೆ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
ಜಿಲ್ಲಾ ಮಟ್ಟಕ್ಕೆ ಆಯ್ಕೆ
ನರಗುಂದ:  ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಖೋಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕಯಾದ ಕ್ರೀಡಾಪಟುಗಳಿಗೆ ಹಾಗೂ ಮಾರ್ಗದರ್ಶ ನೀಡಿದ ದೈಹಿಕ ಶಿಕ್ಷಕ ಎಸ್.ಎಸ್. ಮಾದರವರಿಗೆ ಪ್ರಾಚಾರ್ಯ ಎಂ.ಕೆ. ಅಲ್ಲಿಭಾಯಿ, ಮ್ಯಾನೇಜರ್ ಎಸ್.ಐ. ಬ್ಯಾಕೋಡವರು ಅಭಿನಂದಿಸಿದ್ದಾರೆ.  
ಖೋಖೋದಲ್ಲಿ ಪ್ರಥಮ
ನರಗುಂದ: ತಾಲೂಕಿನ ಬನಹಟ್ಟಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲೂಕು ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಗದಗ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ, ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ತರಬೇತಿ ನೀಡಿದ ದೈಹಿಕ ಶಿಕ್ಷಕ ಎನ್.ಆರ್. ನಿಡಗುಂದಿ, ಎಚ್.ಎಸ್. ತಳವಾರ, ಎಸ್.ಬಿ. ಅಗ್ವೇಕರ, ಶಾಲಾ ಮುಖ್ಯೋಪಾಧ್ಯಯ ಎಸ್.ಎಸ್. ಹಿರೇಮಠ, ಎಸ್‌ಎಸ್‌ಡಿಎಂಸಿ ಪದಾಧಿಕಾರಿಗಳು ಅಭನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.