ಜಿಲ್ಲೆಯಲ್ಲಿ ಮಳೆಯಿಂದ ರು. 25 ಕೋಟಿ ಹಾನಿ: ಎಚ್ಕೆ
ಗದಗ: 15 ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ರು. 25 ಕೋಟಿಗೂ ಅಧಿಕ ಪ್ರಮಾಣದ ಹಾನಿ ಸಂಭವಿಸಿದೆ. ಅದರಲ್ಲಿ ರು. 5 ಕೋಟಿಯಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಬೆಳೆ ಹಾನಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ರಾತ್ರಿ ಜಿಲ್ಲಾಡಳಿತ ಭವನದಲ್ಲಿ ಪ್ರವಾಹ ಹಾಗೂ ಮಳೆಹಾನಿ ಕುರಿತು ಏರ್ಪಡಿಸಲಾಗಿದ್ದ ಅಧಿಕಾರಿಗಳ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಆಗಿರುವ ಹಾನಿಯ ಕುರಿತು ಶಾಸಕರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಗಮನಕ್ಕೆ ತರುತ್ತೇನೆ. ಜಿಲ್ಲೆಯಲ್ಲಿನ 9 ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ರು. 10 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಗ್ರಾಮಾಂತರ ಭಾಗದಲ್ಲಿ ರಸ್ತೆ, ಸೇತುವೆ ಸೇರಿದಂತೆ ರು. 10 ಕೋಟಿಯಷ್ಟು ಹಾನಿಯಾಗಿದೆ. ಮಳೆಯಿಂದ ಬಾಲಕ ಹಾಗೂ ಮಹಿಳೆ ಸೇರಿದಂತೆ 2 ಪ್ರಾಣಹಾನಿ ಹಾಗೂ 2 ಜಾನುವಾರುಗಳು ನೀರಿನ ಸಳೆತಕ್ಕೆ ಸಾವನ್ನಪ್ಪಿವೆ.
ಇದು ತಕ್ಷಣದ ಮಾಹಿತಿ: 20 ಮನೆಗಳು ಸಂಪೂರ್ಣ ಕುಸಿದಿದ್ದು, 1243 ಭಾಗಶಃ ಕುಸಿತ ಕಂಡಿವೆ. ಇದು ತಕ್ಷಣದ ಮಾಹಿತಿಯನ್ನು ಒಳಗೊಂಡಿದ್ದು, ನರಗುಂದ ಹಾಗೂ ರೋಣ ತಾಲೂಕಿನಿಂದ ಇನ್ನು ಹೆಚ್ಚಿನ ಮಾಹಿತಿ ಬರಬೇಕಿದೆ. ಒಟ್ಟು 2 ಸಾವಿರ ಎಕರೆ ಭೂಮಿಯಲ್ಲಿ ಬೆಳೆದ ಬೆಳೆಹಾನಿಯಾಗಿದ್ದು, ಹಲವಾರು ಹೊಲಗಳ ಬದು, ಒಳಗಟ್ಟಿಗಳು ಒಡೆದು ಹಾನಿಯಾಗಿದೆ. ರೋಣ ಮತ್ತು ನರಗುಂದ ತಾಲೂಕಿನ ಕಾವೇರಿ ಸೀಡ್ಸ್ ಕಂಪನಿಯಿಂದ ವಿತರಣೆಯಾದ ಸೂರ್ಯಕಾಂತಿ ಬೀಜ ಕಳಪೆಯಾಗಿದ್ದು ತಕ್ಷಣ ಕ್ರಮಕ್ಕೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ 27400 ಬೆಳೆವಿಮೆಗೆ ಕಂತು ತುಂಬಿದ್ದಾರೆ ಎಂದರು. ಪ್ರಕೃತಿ ವಿಕೋಪ ನಿಧಿಯಲ್ಲಿ ಗದಗ ತಾಲೂಕಿನಲ್ಲಿ ರು. 72 ಲಕ್ಷ, ಶಿರಹಟ್ಟಿ 11, ನರಗುಂದ 61, ರೋಣ 35, ಮುಂಡರಗಿ 45 ಹಣವಿದ್ದು, ತಕ್ಷಣಕ್ಕೆ ಲಭ್ಯವಿರುವ ಹಣವನ್ನು ಬಳಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ನಿದೇರ್ಶನ ನೀಡಲಾಗಿದೆ ಎಂದರು.
ಎಚ್ಚರಿಕೆಯಿಂದ ಕೆಲಸ ಮಾಡಿರಿ: ಇದಕ್ಕೂ ಪೂರ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬೆಳೆಹಾನಿ ಸಮೀಕ್ಷೆ ಮತ್ತು ಬೆಳೆವಿಮೆಗಳ ನಿರ್ಧಾರದ ಸಂದರ್ಭದಲ್ಲಿ ಅಧಿಕಾರಿಗಳು ಮಾಡುವ ತಪ್ಪಿನಿಂದಾಗಿ ರೈತರಿಗೆ ಸಿಗಬೇಕಾದ ಅರ್ಹ ಪರಿಹಾರಗಳು ಸಿಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ವಿಷಯವಾಗಿ ಗದಗ ತಹಸೀಲ್ದಾರ್ ಜಯಶ್ರೀ ಶಿಂತ್ರೆ, ಅಂಕಿಸಂಖ್ಯಾ ವಿಭಾಗದ ಅಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಲ್ಲಿ ಸಮನ್ವಯದ ಕೊರತೆ ಕಂಡು ಬರುತ್ತಿದೆ. ನಿಮ್ಮಿಂದಾಗಿ ರೈತರಿಗೆ ತೊಂದರೆಯಾಗುವುದು ಬೇಡ, ಇನ್ನಾದರೂ ಎಚ್ಚರಿಕೆಯಿಂದ ಕೆಲಸ ಮಾಡಿರಿ ಎಂದರು. ಸಭೆಯಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ, ನರಗುಂದ ಶಾಸಕ ಬಿ.ಆರ್. ಯಾವಗಲ್ಲ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಡಿಸಿ ಎನ್.ಎಸ್. ಪ್ರಸನ್ನಕುಮಾರ, ಜಿಪಂ ಸಿಇಒ ವೀರಣ್ಣ ತುರಮರಿ, ಎಸ್ಪಿ ಡಾ. ಎಸ್.ಡಿ. ಶರಣಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

