ಗದಗ

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 20
ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವ ಕಾರ್ಯಕ್ಕೆ ಶಿಕ್ಷಕವೃಂದ ಪ್ರಾಮುಖ್ಯತೆ ನೀಡಲಿ ಎಂದು ರಾಜ್ಯ ವಿಜ್ಞಾನ ಪರಿಷತ್‌ನ ಅಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ಹೇಳಿದರು.
ಅವರು ಶುಕ್ರವಾರ ನಗರದ ವಿದ್ಯಾದಾನ ಸಮಿತಿಯ ಎಂ.ಬಿ. ಹುಯಿಲಗೋಳ ಮಹಾವಿದ್ಯಾಲಯದಲ್ಲಿ ರಾಜ್ಯ ವಿಜ್ಞಾನ ಪರಿಷತ್‌ನ ರಾಜ್ಯ ಹಾಗೂ ಜಿಲ್ಲಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಹಾಗೂ ಜಿಲ್ಲೆಯ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಮತ್ತು ರಾಷ್ಟ್ರದ ಸಮಸ್ಯೆಗಳಿಗೆ ಸ್ಪಂದಿಸುವ ಯೋಜನೆಗಳ ಕುರಿತು ಆದ್ಯತೆ ನೀಡಬೇಕಾದ ಕಾರ್ಯಕ್ಕೆ ವಿಜ್ಞಾನ ಪರಿಷತ್ ಅಣಿಯಾಗಿದ್ದು, ವಿಶ್ವ ಇಂದು ಶಕ್ತಿಯ ಸಮಸ್ಯೆ ಎದುರಿಸುತ್ತಿದೆ. ನಾವೆಲ್ಲಾ ನಶಿಸಿ ಹೋಗುವ ಶಕ್ತಿಯ ಮೇಲೆ ಅವಲಂಬಿತರಾಗಿದ್ದೇವೆ. ಮುಂದೆ ಇಂಧನದ ಕೊರತೆ ವಿಶ್ವವನ್ನು ಕಾಡಲಿದೆ. ಇದಕ್ಕೆ ಪರಿಹಾರ ಕುರಿತ ಚಿಂತನೆ ಹಾಗೂ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ.
ಇಂಧನ ಕೊರತೆ ದೇಶದ ಪ್ರಗತಿಗೆ ಮಾರಕವಾಗಿದ್ದು, ಇದನ್ನರಿತು, ಪರ್ಯಾಯ ಶಕ್ತಿಯ ಸಂಶೋಧನೆ ನಿರಂತರ ನಡೆಯಬೇಕಿದೆ. ದೇಶದ ಅಭಿವೃದ್ಧಿಗೆ ಶಕ್ತಿಯು ಅನಿವಾರ್ಯ, ಸಾಂಪ್ರದಾಯಿಕ ಶಕ್ತಿಯ ವಿರುದ್ಧ ಜೈವಿಕ ಇಂಧನ ಉತ್ಪಾದನೆ ಕುರಿತು ಸಮಾಜ ಚಿಂತನೆ ನಡೆಸಬೇಕಿದೆ. ವೈಜ್ಞಾನಿಕ ಯುಗದಲ್ಲಿ ನಡೆಯುತ್ತಿರುವ ನೂತನ ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾರ್ಗದರ್ಶನ  ಮಾಡಬೇಕಾದ ಕಾರ್ಯಕ್ಕೆ ಶಿಕ್ಷಕರು ಪ್ರಾಮುಖ್ಯತೆ ನೀಡಬೇಕಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಮನೋಭಾವನೆ ಬೆಳೆಸಿ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗೆ ಸಿದ್ಧತೆಗೊಳಿಸಬೇಕಾಗಿದೆ.
ಡಿಡಿಪಿಐ ರಾಜೀವ್ ನಾಯಕ ಮಾತನಾಡಿ, ಬಹುಮುಖ ಪ್ರತಿಭೆ  ಹೊಂದಿರುವ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಸಮಾವೇಶವು ಸಹಕಾರಿಯಾಗಿದೆ ಎಂದರು. ವಿದ್ಯಾದಾನ ಸಮಿತಿಯ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ ಮುಂತಾದವರು ಮಾತನಾಡಿದರು. ಜೆ.ಟಿ. ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ, ಸಂಪನ್ಮೂಲ ವ್ಯಕ್ತಿ ಡಾ. ಐ.ಐ. ಪಟ್ಟಣಶೆಟ್ಟಿ ಶಕ್ತಿ ಅನ್ವೇಷಿಸಿ, ಬಳಸಿ ಮತ್ತು ಉಳಿಸಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶ್ರೀನಿವಾಸ ಹುಯಿಲಗೋಳ, ಶಿಕ್ಷಣ ಇಲಾಖೆಯ ಜಿ.ಡಿ. ದಾಸರ ಪಾಲ್ಗೊಂಡಿದ್ದರು. ಡಿಡಿಪಿಐ ರಾಜೀವ್ ನಾಯಕ ಹಾಗೂ ಕರಾವಿಪ ರಾಜ್ಯ ಅಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಶಾರದಾ ಪ್ರಾರ್ಥಿಸಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿಜ್ಞಾನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.