ಗದಗ

ಕಾಂಗ್ರೆಸ್, ಬಿಜೆಪಿ ನಡುವೆ ಜಿದ್ದಾಜಿದ್ದಿ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಸೆ. 24
ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜಿನಾಮೆಯಿಂದ ಖಾಲಿಯಾಗಿದ್ದ ಹಮ್ಮಿಗಿ ಜಿಪಂ ಸದಸ್ಯ ಸ್ಥಾನಕ್ಕೆ ಉಪಚುನಾವಣೆಯು ಸೆ. 29 ಜರುಗಲಿದ್ದು, ಹಮ್ಮಿಗಿ ಕ್ಷೇತ್ರದಲ್ಲಿ ಈಗಾಗಲೇ ಆಡಳಿತದ ಚುಕ್ಕಾಣೆ ಹಿಡಿದಿದ್ದ ಕಾಂಗ್ರೆಸ್ ಸದಸ್ಯತ್ವದ ಸ್ಥಾನವನ್ನು ಉಳಿಸಿಕೊಳ್ಳಲು ಹವಣಿಸುತ್ತಿದ್ದು, 2ನೇ ಬಾರಿಯೂ ಜನತೆ ನನ್ನನ್ನು ಕೈ ಹಿಡಿಯಲಿದ್ದಾರೆ ಎನ್ನುವ ಗೆಲುವಿನ ಹುಮ್ಮಸ್ಸಿನಲ್ಲಿ ಬಿಜೆಪಿ ಅಭ್ಯರ್ಥಿಯೂ ಇದ್ದಾರೆ.
ಎರಡೂವರೆ ವರ್ಷದ ಹಿಂದೆ ಜಿಪಂ ಚುನಾವಣೆ ನಡೆದ ಸಂದರ್ಭದಲ್ಲಿ ಅಂದು ಹಮ್ಮಿಗಿ ಜಿಪಂ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೇಮಗಿರೀಶ ಹಾವಿನಾಳ ಸ್ಪರ್ದಿಸಿ ಅತ್ಯಂತ ಹೆಚ್ಚಿನ ಮತ ಪಡೆದುಕೊಂಡು ಆಯ್ಕೆಯಾಗಿದ್ದರು. ಅವರು ರೋಣ ವಿಧಾನಸಭೆ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಈ ಸ್ಥಾನಕ್ಕೆ ರಾಜಿನಾಮೆ  ಸಲ್ಲಿಸಿದ್ದರು.
ಅದರಿಂದ ಖಾಲಿಯಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಇದೀಗ ಆ ಸ್ಥಾನವನ್ನು ಮತ್ತೊಂದು ಪಕ್ಷಕ್ಕೆ ಬಿಟ್ಟುಕೊಡಬಾರದು, ಆ ಸ್ಥಾನ ಮತ್ತೆ ಕಾಂಗ್ರೆಸ್‌ಗೆ ಬರಬೇಕೆನ್ನುವ ಉದ್ದೇಶದಿಂದ ಹಮ್ಮಿಗಿ ಭಾಗದಲ್ಲಿ ಪ್ರಭಾವ ಬೀರಿದ ಸಿಂಗಟಾಲೂರು ಗ್ರಾಮದ ಕಾಂಗ್ರೆಸ್ ಮುಖಂಡ ಶಂಕರಗೌಡ ಪಾಟೀಲ ಅವರ ಮಗ ರುದ್ರಗೌಡ ಪಾಟೀಲಗೆ ಟಿಕೆಟ್ ನೀಡುವ ಮೂಲಕ ಜಿಲ್ಲಾ ಕಾಂಗ್ರೆಸ್ ಹಾಗೂ ತಾಲೂಕು ಕಾಂಗ್ರೆಸ್ ಉಪ ಚುನಾವಣೆಗೆ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ.
ಕಾಂಗ್ರೆಸ್‌ಗೆ ಪ್ರತಿಷ್ಠೆಯ ಚುನಾವಣೆ: ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ನಡೆದ 2 ಲೋಕಸಭಾ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಉಪಚುನಾವಣೆಗಳ ಸಂದರ್ಭದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವೇ ಈ ಎಲ್ಲ ಸ್ಥಾನಗಳನ್ನು ಪಡೆದುಕೊಂಡಿದ್ದರಿಂದ ಶಿರಹಟ್ಟಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಹಮ್ಮಿಗಿ ಜಿಪಂ ಚುನಾವಣೆಯೂ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಇದರಿಂದಾಗಿ ತಾಲೂಕು ಬ್ಲಾಕ್ ಕಾಂಗ್ರೆಸ್, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಇದೇ ಕ್ಷೇತ್ರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಈಗಾಗಲೇ ಕಾಂಗ್ರೆಸ್ ಸದಸ್ಯರನ್ನು ಹೊಂದಿದ್ದ ಹಮ್ಮಿಗಿ ಜಿಪಂ ಕ್ಷೇತ್ರಕ್ಕೆ ಮತ್ತೊಂದು ಬಾರಿ ತನ್ನ ಪಕ್ಷದ ಸದಸ್ಯರನ್ನೇ ಕೂಡಿಸಲು ಎಲ್ಲ ರೀತಿಯ ತಂತ್ರವನ್ನು ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಒಗ್ಗಟ್ಟಿನ ಪ್ರದರ್ಶನವಾಗಬೇಕಿದೆ: ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಜರುಗಿದ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲನ್ನಪ್ಪಿದ್ದು, ಇದಕ್ಕೆ ಜಿಲ್ಲಾ ಅಧ್ಯಕ್ಷರ ಹಾಗೂ ತಾಲೂಕಿನ ಬಿಜೆಪಿ ಮುಖಂಡರ ಮನಸ್ತಾಪಗಳೇ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ತನ್ನಲ್ಲಿರುವ ಆಂತರಿಕ ಭಿನ್ನಾಭಿಪ್ರಾಯವನ್ನು ಬಿಟ್ಟು ಇದೀಗ ಬಿಜೆಪಿಯ ಎಲ್ಲ ಹಿರಿಕಿರಿಯ ಕಾರ್ಯಕರ್ತರನ್ನು ಕರೆದುಕೊಂಡು ಒಗ್ಗಟ್ಟು ಪ್ರದರ್ಶನ ಮಾಡುವ ಅವಶ್ಯಕತೆ ಇದೆ.
ಈಗಾಗಲೇ ಹಮ್ಮಿಗಿ ಜಿಪಂ ಸದಸ್ಯನಾಗಿ 2 ವರ್ಷ 3 ತಿಂಗಳ ಕಾಲ ಅಧಿಕಾರ ನಿರ್ವಹಿಸಿದ ಹೇಮಗಿರೀಶ ಹಾವಿನಾಳ ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಹಮ್ಮಿಗಿ ಜಿಪಂ ಕ್ಷೇತ್ರದ ಉಪಚುನಾವಣೆಗೆ ಮತ್ತೊಮ್ಮೆ   ಕಣಕ್ಕೆ ಇಳಿದಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಈ ಉಪಚುನಾವಣೆ ಪ್ರತಿಷ್ಠೆಯಾಗಿದೆ ಎನ್ನಲಾಗುತ್ತಿದೆ.

ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಹಿರಿಯರಾದ ವಿ.ಎಲ್. ನಾಡಗೌಡ್ರ, ವಾಸಣ್ಣ ಕುರುಡಗಿ, ಮಿಥುನ್‌ಗೌಡ ಪಾಟೀಲ, ಭೀಮಸಿಂಗ್ ರಾಠೋಡ, ರಾಮು ಕಲಾಲ್, ಎಸ್.ಡಿ. ಮಕಾಂದಾರ ಸೇರಿದಂತೆ ಎಲ್ಲ ಮುಖಂಡರ ನೇತೃತ್ವದಲ್ಲಿ ಕ್ಷೇತ್ರದ ಗ್ರಾಮಗಳಿಗೆ ತೆರಳಿ ಮತಯಾಚಿಸಿದ್ದು, ಮತದಾರರಿಂದ ಉತ್ತಮವಾದ ಭರವಸೆ ದೊರೆತಿದೆ.
-ರುದ್ರಗೌಡ ಪಾಟೀಲ,
ಕಾಂಗ್ರೆಸ್ ಅಭ್ಯರ್ಥಿ

ಈ ಹಿಂದೆ ನಾನು 2 ವರ್ಷ 3 ತಿಂಗಳ ಕಾಲ ಜಿಪಂ ಸದಸ್ಯನಾಗಿ ಅಧಿಕಾರ ನಿರ್ವಹಿಸಿದ ಸಂದರ್ಭದಲ್ಲಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಹಮ್ಮಿಗಿ ಜಿಪಂ ಕ್ಷೇತ್ರದ ಅಭಿವೃದ್ಧಿ, ರೈತರ ಪರವಾಗಿ, ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡಿದ್ದ ನಿರಾಶ್ರಿತರ ಪರವಾಗಿ ಕೆಲಸ ಮಾಡಿದ್ದೇನೆ. ಅದೆಲ್ಲವನ್ನೂ ಅರಿತ ಮತದಾರರು ನನಗೆ ಈ ಬಾರಿಯೂ ಮತ ನೀಡಿ ಆಶೀರ್ವದಿಸಲಿದ್ದಾರೆ.
-ಹೇಮಗಿರೀಶ ಹಾವಿನಾಳ,
ಬಿಜೆಪಿ ಅಭ್ಯರ್ಥಿ
-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.