ಗದಗ

ಖಾತ್ರಿಯಲ್ಲಿ ಸಾಮಾಜಿಕ ಪರಿಶೋಧನೆ ಪ್ರಮುಖ

Published On :

ಗದಗ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಾಜಿಕ ಪರಿಶೋಧನೆಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಾಲೂಕು ಸಂಯೋಜಕ ಶ್ರೀಕಾಂತ ರಡ್ಡೇರ ಹೇಳಿದರು.
ಅವರು ತಾಲೂಕಿನ ಅಡವಿಸೋಮಾಪುರ ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಜರುಗಿದ 2012-13ನೇ ಸಾಲಿನ 1-10-2012 ರಿಂದ 31-3-2013ರ ವರೆಗಿನ 6 ತಿಂಗಳ ಅವಧಿಯ ಎನ್‌ಆರ್‌ಇಜಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಖರ್ಚು ವೆಚ್ಚವನ್ನು ಸಾಮಾಜಿಕ ಪರಿಶೋಧನೆ ಗ್ರಾಮಸಭೆಯ ಮೂಲಕ ಜನರಿಗೆ ತಿಳಿಸಿದರು.
ಈ ಅವಧಿಯಲ್ಲಿ ಒಟ್ಟು ರು. 31 ಲಕ್ಷವನ್ನು ಕಾಮಗಾರಿಗಳಿಗೆ ಉಪಯೋಗಿಸಲಾಗಿದೆ. ಇದರಲ್ಲಿ ರು. 17 ಲಕ್ಷ ಕೂಲಿಯ ಮೊತ್ತ, ರು. 14 ಲಕ್ಷ ಸಾಮಗ್ರಿಗಳಿಗಾಗಿ ಖರ್ಚಾಗಿರುತ್ತದೆ. ಇದರಲ್ಲಿ 313 ಕುಟುಂಬಗಳು ಯೋಜನೆಯಲ್ಲಿ ಕೆಲಸ ಮಾಡಿರುತ್ತವೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಾಜಿಕ ಪರಿಶೋಧನೆ ಮಹತ್ವ ಹಾಗೂ ಯೋಜನೆ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಪರಿಶೋಧನೆ ಗ್ರಾಮಸಭೆಗೆ ನೀಡಿದರು.
ಗ್ರಾಮದ ಹಿಂದೂ ರುದ್ರ ಭೂಮಿಯಲ್ಲಿ ಆದ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. 2013-14ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಲ್ಲಿನ ಮಾನ್ವಿ ಕೆರೆ ಅಭಿವೃದ್ಧಿ ಪಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಕಾಮಗಾರಿಗೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದಾಗ ಸಿಟ್ಟಿಗೆದ್ದ ಗ್ರಾಪಂ ವ್ಯಾಪ್ತಿಯ ನಾಗರಿಕರು ಮಾನ್ವಿ ಕೆರೆಯು ಬಹಳ ಹಿಂದಿನ ಕಾಲದಿಂದಲೂ ಇರುವ ಕೆರೆ, ಆ ಕೆರೆಯನ್ನು ಅಭಿವೃದ್ಧಿಪಡಿಸಲು ಹಾಕಿಕೊಂಡ ಕಾಮಗಾರಿಯನ್ನು ಮಾಡಬೇಕು ಮತ್ತು ಆ ತಕರಾರು ಅರ್ಜಿಯನ್ನು ಕಡೆಗಣಿಸಬೇಕೆಂದು ಹೇಳಿದರು.
ಪವನ ವಿದ್ಯುತ್ ಘಟಕ ಸ್ಥಾಪನೆಗೆ ವಿರೋಧ: ಗ್ರಾಪಂ ವ್ಯಾಪ್ತಿಯ ಫಾರೆಸ್ಟ್ ಸ.ನಂ. 106, 107 ಅಡವಿಸೋಮಾಪುರ ಮತ್ತು ಫಾರೆಸ್ಟ್ ಸ.ನಂ. 37 ಪಾಪನಾಶಿ ಗ್ರಾಮದಲ್ಲಿ 5 ಮೆಗಾವ್ಯಾಟ್ ಪವನ ವಿದ್ಯುತ್ ಯೋಜನೆಗೆ ಘಟಕ ಸ್ಥಾಪಿಸಲು ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗೆಯನ್ನು ದಿ. ಗದಗ ಕೋ ಆಪ್ ಇಂಡಸ್ಟ್ರೀಯಲ್ ಎಸ್ಟೇಟ ಲಿ. ಪಡೆದುಕೊಳ್ಳುವ ಕುರಿತು ಅಲ್ಲಿ ಯಾವುದೇ ರೀತಿಯ ಗಿರಿಜನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಮತ್ತು ಆದಿವಾಸಿ ಜನಾಂಗಕ್ಕೆ ಯಾವುದೇ ತೊಂದರೆಯಾಗುವುದಿಲ್ಲವೆಂದು ನಿರಾಕ್ಷೇಪಣಾ ಪತ್ರವನ್ನು ತಯಾರಿಸಿ ಗ್ರಾಪಂ ಕಳಿಸಿದೆ. ಈ ಕುರಿತು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರವನ್ನು ಗ್ರಾಮಸಭೆಯಲ್ಲಿ 3 ತಾಂಡಾಗಳ ರೈತರ ಅಭಿಪ್ರಾಯ ಸಂಗ್ರಹಿಸಿದ ನಂತರ ನಿರಾಕ್ಷೇಪಣಾ ಪತ್ರ ನೀಡುವುದಾಗಿ ಗ್ರಾಪಂ ಸರ್ವ ಸದಸ್ಯರು ತೀರ್ಮಾನಿಸಿದ್ದರು. ಅದರಂತೆ ಗ್ರಾಮಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಿದಾಗ ಗ್ರಾಪಂ ವ್ಯಾಪ್ತಿಯ ನಾಗರಿಕರು ಹಲವಾರು ವರ್ಷಗಳಿಂದ ಅಲ್ಲಿ ಭೂಮಿಯನ್ನು ಉಳಿಮೆ ಮಾಡಿಕೊಂಡು ಅದರಿಂದ ರೈತರಿಗೆ ತುಂಬಾ ಅನುಕೂಲವಾಗಿದೆ. ಈ ಭೂಮಿಯನ್ನು ನಾವು ನೀಡುವುದಿಲ್ಲವೆಂದು ರೈತರು ಸಭೆಗೆ ತಿಳಿಸಿದರು. ಮತ್ತು ಗ್ರಾಪಂ ಆಡಳಿತ ಇದಕ್ಕೆ ಒಪ್ಪಿಗೆಯನ್ನು ನೀಡಬಾರದು. ಹಾಗೇನಾದರೂ ಒಪ್ಪಿಗೆ ನೀಡಿದರೆ ಇಲ್ಲಿಯ ರೈತರು ಗ್ರಾಪಂ, ಜಿಲ್ಲಾಡಳಿತ ಮತ್ತು ದಿ. ಗದಗ ಕೋ ಆಪ್ ಇಂಡಸ್ಟ್ರೀಯಲ್ ಎಸ್ಟೇಟ್ ಲಿ. ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದರು. ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ರಾಮಪ್ಪ ಲಮಾಣಿ, ಮಂಜುನಾಥ ಹುಡೇದ, ಸಂಗಪ್ಪ ಅಬ್ಬಿಗೇರಿ, ಈರಣ್ಣ ಅರಳಿಕಟ್ಟಿ ಆಗಮಿಸಿದ್ದರು. ತಾಪಂ ಸದಸ್ಯ ಪ್ರಲ್ಹಾದ ಹೊಸಳ್ಳಿ, ಗ್ರಾಪಂ ಪಿಡಿಒ ಅಶ್ವಿನಿ ಕುರಡಗಿ, ಉಪಾಧ್ಯಕ್ಷೆ ನಾಗವ್ವ ಹುಡೇದ, ಸದಸ್ಯ ಚನ್ನಪ್ಪ ಅಂಗಡಿ, ಪಕೀರಪ್ಪ ಜಡಿ, ನಂದೀಶ್ವರಪ್ಪ ಬೆಳ್ಳಿ, ಮಲ್ಲಪ್ಪ ಹೊಸಳ್ಳಿ, ಮಾಬುಸಾಬ ಹರಿವಾಣ, ಮಾಲಾ ಮೇವುಂಡಿ, ಗಂಗವ್ವ ದೊಡ್ಡಮನಿ ಇದ್ದರು. ತುಕಾರಾಮ ಹುಲಗಣ್ಣವರ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.