ಮೇವುಂಡಿಯಲ್ಲಿ ಹೈಟೆಕ್ ಸರ್ಕಾರಿ ಪ್ರೌಢಶಾಲೆ
ಕನ್ನಡಪ್ರಭ ವಾರ್ತೆ, ಗದಗ, ಸೆ. 27
ಆಧುನೀಕರಣದ ಕಾಲಘಟ್ಟದಲ್ಲಿ ಎಲ್ಲರ ಚಿತ್ತ ಖಾಸಗಿ ಶಾಲೆಗಳತ್ತ ನೆಟ್ಟಿದ್ದರೆ, ಗ್ರಾಮೀಣ ಪ್ರದೇಶ ಒಂದರಲ್ಲಿ ಇರುವ ಶಾಲೆಯೊಂದು ಸಕಲ ಮೂಲ ಸೌಲಭ್ಯ ಹೊಂದಿ ಖಾಸಗಿ ಶಾಲೆಗಳನ್ನು ಹಿಂದಿಕ್ಕಿ ಹೈಟೆಕ್ ಶಾಲೆಯಾಗಿ ರೂಪುಗೊಂಡಿದೆ.
ಇಂತಹದೊಂದು ಮಾದರಿ ಶಾಲೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯಾಗಿದೆ. ಈ ಶಾಲೆಯಲ್ಲಿರುವ ಮೂಲ ಸೌಲಭ್ಯಗಳನ್ನು ನೋಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರೂ ನಿಬ್ಬೆರಗಾಗುವಂತಿದೆ.
1-6-2006ರಲ್ಲಿ ಪ್ರಾರಂಭವಾದ ಈ ಶಾಲೆ 2012 ಜೂನ್‌ವರೆಗೂ ಪ್ರಾಥಮಿಕ ಶಾಲಾ ಆವರಣದಲ್ಲಿಯೇ ನಡೆದಿದೆ. ಮುಖ್ಯೋಪಾಧ್ಯಾಯರಾಗಿ ಬಂದ ಶರಣು ಗೋಗೇರಿ ಅವರ ಕ್ರಿಯಾಶೀಲತೆ, ಇಚ್ಛಾಶಕ್ತಿ ಹಾಗೂ ಜನರೊಂದಿಗಿನ ಸಹಕಾರದಿಂದ ಶಾಲೆ ಅಭಿವೃದ್ಧಿಯತ್ತ ಸಾಗಿದೆ. 11 ಕೊಠಡಿ ಹೊಂದಿರುವ ಶಾಲೆಯಲ್ಲಿ ಗಣಕಯಂತ್ರ, ಗ್ರಂಥಾಲಯ, ಪ್ರಯೋಗಾಲಯ, ಸಭಾಂಗಣ, ಬಿಸಿಯೂಟ, ಮುಖ್ಯೋಪಾಧ್ಯಾಯರ, ಸಿಬ್ಬಂದಿ ಕೊಠಡಿ ಹಾಗೂ ಹೈಟೆಕ್ ಶೌಚಾಲಯ ಮತ್ತು ಹಲವು ಬಗೆಯ ಕುಡಿಯುವ ನೀರಿನ ಸೌಲಭ್ಯ, ಸಂಪೂರ್ಣ ಶಾಲೆಗೆ ಕಾಂಪೌಂಡ್ ಹಾಗೂ ಗಾರ್ಡನ್ ಸೌಲಭ್ಯ ಹೊಂದಿದೆ.
ಸ್ವಂತ ವೆಬ್ ಸೈಟ್: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೈಟೆಕ್ ಕಂಪ್ಯೂಟರ್ ಶಿಕ್ಷಣ ಹಾಗೂ ಮಾಹಿತಿ ಲಭ್ಯವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರಿ ಪ್ರೌಢ ಶಾಲೆಯು ಸ್ವಂತ ವೆಬ್‌ಸೈಟ್ ಹೊಂದಿದೆ.
ಈ ವೆಬ್‌ಸೈಟ್‌ದಲ್ಲಿ ಶಾಲೆಯ ಆಡಳಿತ, ಮಕ್ಕಳ ಮಾಹಿತಿ, ಸಿಬ್ಬಂದಿ ಮಾಹಿತಿ, ಸರ್ಕಾರಿ ಸುತ್ತೋಲೆಗಳು, ಮೂಲ ಸೌಲಭ್ಯಗಳು, ಮಕ್ಕಳ ವಿವಿಧ ಚಟುವಟಿಕೆ ಶಾಲಾ ಫಲಿತಾಂಶ ಇತ್ಯಾದಿ ಮಾಹಿತಿ ಇಲ್ಲಿ ಅಡಕವಾಗಿವೆ. ಇದರೊಟ್ಟಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ತರಗತಿಗಳು, ಮಕ್ಕಳಿಗೆ ವಿಶೇಷ ಕಂಪ್ಯೂಟರ್ ಬೋಧನೆ ಅದಕ್ಕಾಗಿ 16ಕ್ಕೂ ಹೆಚ್ಚು ಕಂಪ್ಯೂಟರ್ ಹೊಂದಲಾಗಿದೆ.
ಮುಖ್ಯವಾಗಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪುಸ್ತಕಗಳನ್ನು ಹೊಂದಿರುವ ಹೈಟೆಕ್ ಗ್ರಂಥಾಲಯವಿದೆ. ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಕಾಳಜಿ ಮೂಡಲಿ ಎನ್ನುವ ಉದ್ದೇಶದಿಂದ ಪ್ರತಿಯೊಂದು ಮಗುವಿಗೂ ಒಂದೊಂದು ಗಿಡವನ್ನು ದತ್ತು ನೀಡಲಾಗಿದೆ.
ಇಂದು ಸಮಾರಂಭ
ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆ ಮೇವುಂಡಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಆರ್‌ಎಂಎಸ್‌ಎ ಯೋಜನೆ ಕೊಠಡಿಗಳ ಅಡಿಗಲ್ಲು ಹಾಗೂ ಮೂಲ ಸೌಲಭ್ಯಗಳ ಉದ್ಘಾಟನಾ ಸಮಾರಂಭವು ಸೆ. 28ರ ಬೆಳಗ್ಗೆ 9.30ಕ್ಕೆ ಮೇವುಂಡಿಯ ಶಾಂತಾಬಾಯಿ ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಲಿದೆ. ಸಚಿವ ಎಚ್.ಕೆ. ಪಾಟೀಲ ನೂತನ ಶಾಲಾ ಕಟ್ಟಡ ಉದ್ಘಾಟಿಸುವರು. ಶಾಸಕ ಜಿ.ಎಸ್. ಪಾಟೀಲ ಆರ್‌ಎಂಎಸ್‌ಎ ಯೋಜನೆ ಕೊಠಡಿಗಳ ಅಡಿಗಲ್ಲು ಸಮಾರಂಭ ನೆರವೇರಿಸುವರು. ಶಾಸಕ ರಾಮಕೃಷ್ಣ ದೊಡ್ಡಮನಿ ಬಿಸಿಯೂಟದ ಕೊಠಡಿ ಅಡಿಗಲ್ಲು ಸಮಾರಂಭ ನೆರವೇರಿಸುವರು. ಶಾಲಾ ಕಟ್ಟಡಕ್ಕೆ ಭೂದಾನ ನೀಡಿದ ಬಸವರಾಜ ಕೊರ್ಲಹಳ್ಳಿ ಅವರನ್ನು ಸನ್ಮಾನಿಸಲಾಗುವುದು. ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ತಾಪಂ ಅಧ್ಯಕ್ಷ ತಾರಾಬಾಯಿ ಚವ್ಹಾಣ, ಉಪಾಧ್ಯಕ್ಷ ಅಕ್ಕಮಹಾದೇವಿ ಹಾರೋಗೇರಿ, ಗ್ರಾಪಂ ಅಧ್ಯಕ್ಷ ಶೇಖವ್ವ ಮುದಿಯಜ್ಜನವರ, ಮಿಥುನಗೌಡ ಪಾಟೀಲ, ಹೇಮಂತಗೌಡ ಪಾಟೀಲ, ಬಿಇಓ ಎಂ.ಎ. ರಡ್ಡೇರ ಮುಂತಾದವರು ಉಪಸ್ಥಿತರಿರುವರೆಂದು ಶಾಲಾ ಮುಖ್ಯೋಪಾಧ್ಯಾಯ ಶರಣು ಗೋಗೇರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

