ಶೇಂಗಾ ಬೆಲೆ ಕುಸಿತಕ್ಕೆ ಕಂಗಾಲಾದ ರೈತರು
ಲಕ್ಷ್ಮೇಶ್ವರ: ಶೇಂಗಾ ಬೆಳೆ ರೈತನಿಗೆ ಆರ್ಥಿಕತೆಯೊಂದಿಗೆ ಜಾನುವಾರುಗಳಿಗೆ ಬೇಕಾಗುವ ಶೇಂಗಾ ಹೊಟ್ಟಿಗೆ ಹೆಚ್ಚು ಉಪಯುಕ್ತವಾಗಿದ್ದು, ಇದನ್ನೇ ನಂಬಿ ಶೇಂಗಾ ಬಿತ್ತನೆ ಮಾಡಿರುವ ಲಕ್ಷ್ಮೇಶ್ವರ ಹೋಬಳಿಯ ರೈತರಿಗೀಗ ಬೆಲೆ ಕುಸಿತದ ಭಯ ಪ್ರಾರಂಭವಾಗಿದೆ.
ಹೌದು..ಹತ್ತಾರು ಸಂಕಷ್ಟ ದಾಟಿದ ಬೆಳೆಗೆ ಉತ್ತಮ ಬೆಲೆ ಸಿಗದೇ ಇರುವುದು ರೈತ ಸಮುದಾಯದವನ್ನು ತೀವ್ರ ಕಂಗಾಲಾಗಿಸಿದೆ. ಇದು ಕೇವಲ ಮಂಜಲಾಪುರ ಗ್ರಾಮದ ರೈತರ ಸಮಸ್ಯೆಯಾಗಿಲ್ಲ ಶಿರಹಟ್ಟಿ ತಾಲೂಕು, ಲಕ್ಷ್ಮೇಶ್ವರ ಹೋಬಳಿಯಲ್ಲಿನ ರೈತರೇ ಹೆಚ್ಚಾಗಿ ಶೇಂಗಾ ಬೆಳೆಯುತ್ತಾರೆ. ಇದಕ್ಕೆ ಪೂರಕ ಎನ್ನುವ ರೀತಿ ಕೆಂಪು ಮಿಶ್ರಿತ ಮಣ್ಣಿನಿಂದ ಕೂಡಿದ ಜಮೀನುಗಳಿದ್ದು, ಇದರಿಂದಾಗಿಯೇ ರೈತರು ಹೆಚ್ಚೆಚ್ಚು ಶೇಂಗಾ ಬೆಳೆದು ಇಂದು ಬೆಲೆ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ.
2500 ಹೇ. ಬಿತ್ತನೆ: ಲಕ್ಷ್ಮೇಶ್ವರ ಹೋಬಳಿಯೊಂದರಲ್ಲಿಯೇ 2500 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದ್ದು, ಬಹುತೇಕ ಎಲ್ಲಾ ಬೆಳೆಯೂ ಕಟಾವು ಹಂತಕ್ಕೆ ಬಂದು ಶೇಂಗಾ ಕಿತ್ತು ಕಾಯಿ ಬೇರ್ಪಡಿಸಿ ಮಾರುಕಟ್ಟೆಗೆ ತರಲು ಸಾಕಷ್ಟು ಹಣ ಖರ್ಚು ಮಾಡಿದ್ದು, ಸಧ್ಯ ಮಾರುಕಟ್ಟೆಯಲ್ಲಿರುವ ದರವನ್ನು ಗಮನಿಸಿದಲ್ಲಿ ರೈತರಿಗೆ ಅವರು ಮಾಡಿದ ಖರ್ಚಿನಷ್ಟು ಹಣ ಮರಳಿ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ಇದಕ್ಕಾಗಿ ರೈತರು ಕಟಾವು ಮಾಡಿದ ಶೇಂಗಾ ಬೆಳೆಯನ್ನು ಮನೆಯಲ್ಲಿಯೇ ಇಟ್ಟುಕೊಂಡು ಮಾರುಕಟ್ಟೆ ದರ ಕಾಯುವಂತಾಗಿದೆ.
ಪದೇ ಪದೇ ಬೆಲೆ ಕುಸಿತ: ಗದಗ ಸೇರಿದಂತೆ ಉ-ಕದ ಬಹುತೇಕ ರೈತರು ಪ್ರತಿ ವರ್ಷ ಬೆಲೆ ಕುಸಿತದ ಬಿಸಿ ಎದುರಿಸುತ್ತಿದ್ದು, ರೈತನ ಬೆಳೆ ಹೊಲದಲ್ಲಿರುವಾಗ ಉತ್ತಮ ಬೆಲೆ ಇರುತ್ತದೆ. ಇನ್ನೇನು ರೈತರ ಬೆಳೆ ಮಾರುಕಟ್ಟೆಗೆ ಬರುತ್ತಿದ್ದಂತೆ ಕುಸಿತ ಉಂಟಾಗುತ್ತಿದ್ದು, ಇದು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವವರನ್ನು ಕಂಗೆಡಿಸಿದೆ. ಈಗಾಗಲೇ ಬೆಳ್ಳುಳ್ಳಿ, ಈರುಳ್ಳಿ, ಮುಂಗಾರು ಹಂಗಾಮಿನ ಹೆಸರು, ಗೋವಿನದ ಬೆಲೆಗಳಲ್ಲಿಯೂ ಭಾರೀ ಇಳಿಕೆಯಾಗಿದ್ದು, ಯಾವ ಬೆಳೆ ಬಿತ್ತಿದರೂ ರೈತರ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ದಲ್ಲಾಳಿಗಳ ಕರಾಮತ್ತು: ಸರ್ಕಾರ ಎಪಿಎಂಸಿಗಳ ಮೂಲಕ ಹಲವಾರು ಕಟ್ಟುನಿಟ್ಟಿನ ಕಾನೂನು ಜಾರಿಗೆ ತಂದಿದೆ. ಆದರೆ, ಅವುಗಳನ್ನು ಅನುಷ್ಠಾನ ಮಾಡುತ್ತಿರುವ ಅಧಿಕಾರಿಗಳ ಮೇಲೆ ಹಿಡಿತವೇ ಇಲ್ಲ. ಹಾಗಾಗಿ ಅಧಿಕಾರಿಗಳು ರೈತರ ಬೆಳೆಗಳನ್ನು ಖರೀದಿಸುವ ವರ್ತಕರೊಂದಿಗೆ ಪರೋಕ್ಷವಾಗಿ ಶಾಮೀಲಾಗಿ, ರೈತರ ಬೆಳೆ ಬಂದಾಗ ಮಾತ್ರ ಬೆಲೆ ಕುಸಿತ ಮಾಡಿ ಕಡಿಮೆ ಬೆಲೆಗೆ ರೈತನ ಬೆಳೆ ಖರೀದಿಸಿ, ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನಾದರೂ ದಲ್ಲಾಳಿಗಳ ಕರಾಮತ್ತಿನಿಂದ ನಲುಗುತ್ತಿರುವ ರೈತರ ರಕ್ಷಣೆಗೆ ಮೊದಲ ಆದ್ಯತೆ ಸಿಗಬೇಕಿದೆ.
-ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

