ಕಾಂಗ್ರೆಸ್ನಿಂದ ಮಹಿಳೆಯರಿಗಿಲ್ಲ ರಕ್ಷಣೆ
ಬ್ಯಾಡಗಿ: ದೆಹಲಿಯಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಶೀಲಾದೀಕ್ಷಿತ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ನಡೆದುಕೊಂಡ ರೀತಿ ವಿಶ್ವವೇ ತಲೆ ತಗ್ಗುವಂತೆ ಮಾಡಿದ್ದು, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪತ್ನಿ ರೇವತಿ ಹೇಳಿದರು.
ಶಿವಕುಮಾರ ಉದಾಸಿ ಪರ ಶುಕ್ರವಾರ ಪಟ್ಟಣದಲ್ಲಿ ಮತಯಾಚನೆ ಸಂದರ್ಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಮಹಿಳೆ ಯರಿಗೆ ಯಾವುದೇ ನ್ಯಾಯ ಸಿಗುವ ಭರವಸೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಮತ್ತು 30 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಿ.ಎಂ. ಉದಾಸಿಯವರ ಅಭಿವೃದ್ಧಿ ಕಾರ್ಯಗಳು ಪತಿ ಶಿವಕುಮಾರ ಉದಾಸಿ ಗೆಲುವಿಗೆ ಸಹಕಾರಿಯಾಗಲಿವೆ ಎಂದರು. ರವೀಂದ್ರ ಪಟ್ಟಣಶೆಟ್ಟಿ, ಸುಧಾ ಕಳ್ಳಿಹಾಳ, ಮುರಿಗೆಪ್ಪ ಶೆಟ್ಟರ, ರಾಮಣ್ಣ ಕೋಡಿಹಳ್ಳಿ, ಬಸವರಾಜ ಛತ್ರದ, ಬಸವರಾಜ ಹಂಜಿ, ಪ್ರಶಾಂತ ಯಾದವಾಡ, ರೋಹಿಣಿ ಹುಣಶೀಮರದ ಮತ್ತಿತರರು ಇದ್ದರು.
ಸಲೀಂ ಅಹ್ಮದ್ ಪರ ಪ್ರಚಾರ
ಲಕ್ಷ್ಮೇಶ್ವರ: ಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ದು, ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಅವರ ಪರವಾಗಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ರಾಮಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ನೇತೃತ್ವದಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.
ಗುರುವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಮನೆಗೆ ತೆರಳಿದ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಮಕೃಷ್ಣ ದೊಡ್ಡಮನಿ, ಕಾಂಗ್ರೆಸ್ಗೆ ನೂರಾರು ವರ್ಷಗಳ ಇತಿಹಾಸವಿದ್ದು, ಸಮೃದ್ಧ ದೇಶ ನಿರ್ಮಾಣದಲ್ಲಿ ಪಕ್ಷವು ವಿಶಿಷ್ಟ ಸೇವೆ ಸಲ್ಲಿಸಿದೆ. ಜಾತ್ಯತೀತದಲ್ಲಿ ನಂಬಿಕೆ ಇರಿಸಿಕೊಂಡಿರುವ ಕಾಂಗ್ರೆಸ್ ದೇಶದ ಎಲ್ಲ ವರ್ಗಗಳ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಬಡವ, ದೀನ ದಲಿತ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದುರ್ಬಲರ ರಕ್ಷಣೆಗೆ ಮುಂದಾಗಿದ್ದು, ದೇಶದ ಪ್ರಗತಿಗೆ ಶ್ರಮಿಸುವ ಪಕ್ಷವಾಗಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ದಿಸೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಸಲೀಂ ಅಹ್ಮದ ಅವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಅಂಗಡಿ, ಲಕ್ಷ್ಮಣಗೌಡ ಪಾಟೀಲ, ಸೋಮು ಬೆಟಗೇರಿ, ನೀಲೇಶ ಕಾಳೆ, ಬಸಣ್ಣ ಬೆಟಗೇರಿ, ನಾಗರಾಜ ಮಡಿವಾಳರ, ಶಂಕ್ರಮ್ಮ ದೊಡ್ಡಮನಿ, ಜಗದೀಶ ದೊಡ್ಡಮನಿ, ಶೇಖರಗೌಡ ಪಾಟೀಲ, ಎಚ್.ಟಿ. ವೆಂಕರಡ್ಡಿ, ಬಸವರಾಜ ಬನ್ನಿಕೊಪ್ಪ, ರಾಮಣ್ಣ ಜಿಡ್ಡಿಮನಿ ಮುಂತಾದವರು ಹಾಜರಿದ್ದರು.
ಜಾತ್ಯತೀತದಲ್ಲಿ ನಂಬಿಕೆ ಇರಿಸಿಕೊಂಡಿರುವ ಕಾಂಗ್ರೆಸ್ ದೇಶದ ಎಲ್ಲ ವರ್ಗಗಳ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಬಡವ, ದೀನ ದಲಿತ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದುರ್ಬಲರ ರಕ್ಷಣೆಗೆ ಮುಂದಾಗಿದ್ದು, ದೇಶದ ಪ್ರಗತಿಗೆ ಶ್ರಮಿಸುವ ಪಕ್ಷವಾಗಿದೆ.
-ರಾಮಕೃಷ್ಣ ದೊಡ್ಡಮನಿ, ಶಾಸಕರು
ನಮೋ ಬ್ರಿಗೇಡ್ ಪ್ರಚಾರ
ಗದಗ: ನಗರದ 33ನೇ ವಾರ್ಡ್ನ ವಿವಿಧ ಭಾಗದಲ್ಲಿ ನಮೋ ಬ್ರಿಗೇಡ್ ಜಿಲ್ಲಾ ಘಟಕದ ಆಶ್ರಯದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಬುಧವಾರ ಗದಗ ಜಿಲ್ಲಾ ನಮೋ ಬ್ರಿಗೇಡ್ ಸಂಚಾಲಕ ಕಿಶನ ಮೇರವಾಡೆ ನೇತೃತ್ವದಲ್ಲಿ ಪ್ರಚಾರ ನಡೆಸಲಾಯಿತು.
ಕಿಶನ್ ಮೆರವಾಡೆ ಮಾತನಾಡಿ, ದೇಶಕ್ಕೆ ಸಮರ್ಥ ನಾಯಕತ್ವದ ಕೊರತೆ ಕಾಡುತ್ತಿದೆ. ಅಂತಹ ಕೊರತೆ ನೀಗಿಸಲು ನರೇಂದ್ರ ಮೋದಿ ಪರಿಹಾರವಾಗಿದ್ದಾರೆ. ಯುಪಿಎ ಸರ್ಕಾರದ 10 ವರ್ಷದ ಆಳ್ವಿಕೆಯಲ್ಲಿ ದೇಶ ಹಲವಾರು ಸಂಕಷ್ಟ ಎದುರಿಸುತ್ತಿದೆ. ಇಂತಹ ದುರಾಡಳಿತ ಕೊನೆಗಾಣಿಸಲು ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದು ಅತ್ಯಂತ ಅನಿವಾರ್ಯ ಹಾಗೂ ಸಮಂಜಸವಾದ ಕಾರ್ಯವಾಗಿದೆ. ಮೋದಿ ಅಲೆ ಸಹಿಸದೆ ಕಾಂಗ್ರೆಸ್ ನಾಯಕರು ಮೋದಿಯವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿರುವುದು ಖಂಡನೀಯ. ಅಪಪ್ರಚಾರ ನಂಬದೆ ಜನತೆ ಬಿಜೆಪಿಯ ಶಿವಕುಮಾರ ಉದಾಸಿಗೆ ಮತ ಹಾಕಬೇಕು ಎಂದರು. ಸಂಗಣ್ಣ ಬಂಗಾರಶೆಟ್ರ, ವಿಠ್ಠಲ ಬಾಂಡಗೆ, ಪ್ರವೀಣ ಬನ್ಸಾಲಿ ಜಗನ್ನಾಥಸಾ ಭಾಂಡಗೆ, ಆನಂದ ಶೇಠ, ಸಯ್ಯದ ಕೊಪ್ಪಳ, ವಿನಾಯಕ ಬಾಕಳೆ, ಸಂಜು ಮಲ್ಲಾಪುರ, ಮಂಜು ಮೇರವಾಡೆ, ಸಂತೋಷ ಖಟವಟೆ, ರಾಜು ಖಟವಟೆ, ವಿಕ್ಕಿ ಶೇಠ ಇದ್ದರು.
ಬಿಜೆಪಿಗೆ ಸಿದ್ಧಾಂತಗಳಿಲ್ಲ: ಸಲೀಂ ಅಹ್ಮದ್
ರೋಣ: ತತ್ವ, ಸಿದ್ಧಾಂತಗಳಿಲ್ಲದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ಅವಧಿಯುದ್ದಕ್ಕೂ ಕುರ್ಚಿಗಾಗಿ ಕಿತ್ತಾಟ, ಭ್ರಷ್ಟಾಚಾರ, ಅರಾಜಕತೆ, ದಬ್ಬಾಳಿಕೆಯಿಂದಾಗಿ ಅಭಿವೃದ್ಧಿ ಕುಂಟಿತವಾಗಿತ್ತು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಆರೋಪಿಸಿದರು.
ತಾಲೂಕಿನ ಸವಡಿಯಲ್ಲಿ ಗುರುವಾರ ರೋಣ ಮತಕ್ಷೇತ್ರದ ಕಾಂಗ್ರೆಸ್ ಪ್ರಚಾರ, ಮತ ಯಾಚನೆಗಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜನತೆ ಬದಲಾವಣೆ ಬಯಸಿ ಬಿಜೆಪಿಗೆ ಅಧಿಕಾರ ಕೊಟ್ಟರೆ ಸಚಿವ, ಶಾಸಕರು ಮಾಡಿದ್ದೇನು? ಅನಾಚಾರ, ಅನೈತಿಕತೆ, ಅಶ್ಲೀಲ ಚಿತ್ರ ವೀಕ್ಷಣೆ, ಮುಖ್ಯಮಂತ್ರಿ, ಸಚಿವರ ಜೈಲುವಾಸ, ಗಣಿ ಲೂಟಿ, ರೆಸಾರ್ಟ್ ರಾಜಕಾರಣ ಮುಂತಾದ ಹೀನ ಕೃತ್ಯಗಳ ಮೂಲಕ ರಾಜ್ಯ ಲೂಟಿ ಮಾಡಿದ ಬಿಜೆಪಿಗರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ರಾಜ್ಯ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು ತಮ್ಮ ಗೆಲವಿಗೆ ಸಹಕಾರಿಯಾಗಲಿವೆ. ಜನಸೇವೆಗೆ ತಮಗೊಂದು ಅವಕಾಶ ನೀಡಿ ಎಂದು ಮತದಾರರಲ್ಲಿ ವಿನಂತಿಸಿದರು. ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಮಾತನಾಡಿದರು.
ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ, ದಶರಥ ಗಾಣಿಗೇರ, ಜಿಪಂ ಸದಸ್ಯ ಡಾ. ಆರ್.ಬಿ.ಬಸವರಡ್ಡೇರ, ರವಿ ದಂಡಿನ, ಶಂಕರಗೌಡ ಪಾಟೀಲ, ಪ್ರಭು ಮೇಟಿ, ಫಕ್ಕೀರಪ್ಪ ಹೆಬಸೂರ, ಮಿಥುನ್ ಪಾಟೀಲ, ಬಸವರಾಜ ಕಡೇಮನಿ, ವೀರಣ್ಣ ಶೆಟ್ಟರ್, ಮಂಜುಳಾ ಹುಲ್ಲನ್ನವರ, ಲಕ್ಷ್ಮೀ ಗಡಗಿ, ಯಮನವ್ವ ಜುಮ್ನಕಟ್ಟಿ ಇತರರಿದ್ದರು. ವಿ.ಬಿ. ಸೇಮನಕಟ್ಟಿಮಠ ನಿರೂಪಿಸಿ, ವಂದಿಸಿದರು.
ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ: ಸಲೀಂ
ನರೇಗಲ್ಲ: ಕ್ಷೇತ್ರದಲ್ಲಿ ಯಾವ ಕಾರ್ಯವನ್ನೂ ಮಾಡದ ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದರು.
ಅವರು ಗುರುವಾರ ಸಂಜೆ ಸ್ಥಳೀಯ ಕೊಂತಿ ಮಲ್ಲಪ್ಪನ ಗುಡಿಯ ಎದುರಿಗಿನ ಬಯಲಿನಲ್ಲಿ ಸೇರಿದ್ದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯವರು ನುಡಿದಂತೆ ನಡೆಯುವವರಲ್ಲ. ಈ ಹಿಂದೆ ಒಂದೇ ಒಂದು ಅವಕಾಶವನ್ನು ನೀಡಿ ಎಂದು ಅವರು ಕೇಳಿದಾಗ ನೀವು ನೀಡಿದಿರಿ. ಅದರ ಪ್ರತಿಫಲವನ್ನೂ ಉಂಡ ನೀವುಗಳು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠವನ್ನೂ ಕಲಿಸಿದಿರಿ. ಬಿಜೆಪಿಯಲ್ಲಿನ ನಿಜವಾದ ಹಿರಿಯ ನಾಯಕರೆಲ್ಲ ಈಗ ಔಟ್ಡೇಟೆಡ್ ಆಗಿದ್ದಾರೆ. ರಾಜ್ಯ ಮುಖಂಡರ ಯಾವ ಭಾವಚಿತ್ರಗಳೂ ಅವರಿಗೆ ಮತ ನೀಡುತ್ತಿಲ್ಲ. ಅದಕ್ಕಾಗಿ ದೂರದ ಮೋದಿಯವರ ಭಾವಚಿತ್ರವನ್ನು ಇಟ್ಟುಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ನನಗೆ ನೀವುಗಳು 3 ಲಕ್ಷಕ್ಕೂ ಹೆಚ್ಚಿನ ಮತಗಳನ್ನು ನೀಡಿ ಆಶೀರ್ವದಿಸಿದ್ದೀರಿ. ಗೆಲುವಿನ ಹತ್ತಿರಕ್ಕೆ ತಂದಿದ್ದೀರಿ. ಈ ಬಾರಿ ಮಾತ್ರ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ಕಳೆದ ಬಾರಿಯ ಸೋಲನ್ನು ಬಡ್ಡಿ ಸಮೇತ ತೀರಿಸಿಕೊಳ್ಳುವಂತೆ ನೀವುಗಳು ನನಗೆ ಮತ ನೀಡಿ ಆರಿಸಿದರೆ ಹಾವೇರಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದರು. ರಾಜ್ಯ ಕಾಂಗ್ರೆಸ್ ಎಸ್.ಟಿ. ಘಟಕದ ಟಿ. ಈಶ್ವರ, ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿದರು.
ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಅಧ್ಯಕ್ಷತೆ ವಹಿಸಿದ್ದರು. ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಪಾಟೀಲ, ರವಿ ದಂಡಿನ, ಡಾ. ಕೆ.ಬಿ. ಧನ್ನೂರ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್.ಪಾಟೀಲ, ನರೇಗಲ್ಲ ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ, ಮಾಜಿ ಅಧ್ಯಕ್ಷೆ ಎ.ವಿ. ಪಾಟೀಲ, ಪಪಂ ಸದಸ್ಯ ಸುನೀಲ ಬಸವರಡ್ಡೇರ, ಎಂ.ಎನ್. ಹುಲಕೋಟಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

