ಮಾದರಿ ಮತಕ್ಷೇತ್ರ ಆಗಿಸುವ ಕನಸು: ಸಲೀಂ ಅಹ್ಮದ್
ಗಜೇಂದ್ರಗಡ: ಹಾವೇರಿ ಲೋಕಸಭಾ ಮತಕ್ಷೇತ್ರವನ್ನು ಭಾರತದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಕನಸು ಕಂಡಿದ್ದೇನೆ. ಇದನ್ನು ಸಾಕಾರಾಗೊಳಿಸಲು, ಜನ ಸೇವೆ ಮಾಡಲು ಒಮ್ಮೆ ಅವಕಾಶ ಮಾಡಿಕೊಡಿ ಎಂದು ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ವಿನಂತಿಸಿದರು. ಅವರು ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಶುಕ್ರವಾರ ರಾತ್ರಿ ಚುನಾವಣಾ ಪ್ರಚಾರಾರ್ಥ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಮೋದಿ ಮುಖವಾಡ ಹಿಡಿದು ಓಟು ಕೇಳಲು ಆಗಮಿಸುವ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಕ್ಷೇತ್ರದ ಜನರ ನಂಬಿಕೆಗೆ ದ್ರೋಹ ಬಗೆದು ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಜನತೆಗೆ ಮುಖ ತೋರಿಸಲು ಆಗದ ತಾವೂ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಸಾಧನೆ ಮಾಡಿದ್ದಾರೆ. ಅವರ ಕೊಡುಗೆ ಏನು? ಎಂಬುದನ್ನು ಜನ ಅರಿತು ಯೋಚಿಸಿ ತಮಗೆ ಮತ ನೀಡಲು ಮುಂದಾಗಬೇಕು ಎಂದರು. ಸಚಿವ ಎಚ್.ಕೆ. ಪಾಟೀಲ, ಮಾಜಿ ಸಂಸದ ಆರ್.ಎಸ್. ಪಾಟೀಲ, ಪ. ಜಾತಿ ರಾಜ್ಯಾಧ್ಯಕ್ಷ ಟಿ. ಈಶ್ವರ, ಶಾಸಕ ಜಿ.ಎಸ್. ಪಾಟೀಲ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಸೊನ್ನದ, ಅಶೋಕ ಬಾಗಮಾರ ಮಾತನಾಡಿದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ, ರವಿ ದಂಡಿನ, ಪುರಸಭೆ ಸದಸ್ಯ ಮಕ್ತುಂಭಿ ಹಣಗಿ, ಶಾರದಾ ರಾಠೋಡ, ಸುಜಾತಾ ಚುಂಚಾ, ಶಾರಮ್ಮ ತಳವಾರ, ಪ್ರಭು ಮೇಟಿ, ಮಿಥುನಗೌಡ ಪಾಟೀಲ, ಶ್ರೀಧರ ಗಂಜಿಗೌಡ್ರ, ಶ್ರೀಕಾಂತ ಅವಧೂತ, ಚಂಬಣ್ಣ ಚವಡಿ, ಶಶಿಧರ ವಕ್ಕಲರ, ಸುಭಾನಸಾಬ ಆರಗಿದ್ದಿ, ವೀರಣ್ಣ ಶೆಟ್ಟರ, ಮುರ್ತುಜಾ ಡಾಲಾಯತ, ದತ್ತು ಬಾಕಳೆ, ಪ್ರಶಾಂತ ರಾಠೋಡ, ಉಮೇಶ ರಾಠೋಡ, ರವಿ ಗಡೇದವರ ಉಪಸ್ಥಿತರಿದ್ದರು.
ಅಕ್ರಮ ಮದ್ಯ ಸರಬರಾಜು: ಸೂಕ್ತ ಕ್ರಮಕ್ಕೆ ಆಗ್ರಹ
ಬ್ಯಾಡಗಿ: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ನಡೆಯುತ್ತಿದ್ದು, ಚುನಾವಣಾಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದಾಗಿ ನ್ಯಾಯವಾದಿ ಬಿ.ಎಂ. ಗೌರಾಪುರ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾತ್ರಿ ಹಗಲೆನ್ನದೇ ಎಗ್ಗಿಲ್ಲದೇ ಗ್ರಾಮೀಣ ಪ್ರದೇಶಗಳಿಗೆ ಆಟೋ, ಕಾರು ಹಾಗೂ ಮೋಟರ್ ಸೈಕಲ್ಗಳ ಮೇಲೆ ಮದ್ಯ ಸಾಗಾಟ ರಾಜಾರೋಷದಿಂದ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗೂಡಂಗಡಿಗಳೇ ಮಾರಾಟ ಕೇಂದ್ರಗಳಾಗಿದ್ದು ರಾಜಕೀಯ ಪಕ್ಷಗಳು ಗೌಪ್ಯವಾಗಿ ಇಂತಹ ಗೂಡಂಗಡಿಗಳನ್ನು ಖರೀದಿಸಿದ್ದಾರೆ. ಪಕ್ಷದ ಅಧಿಕೃತ ಚೀಟಿ ಕೊಟ್ಟವರಿಗೆ ಉಚಿತವಾಗಿ ಮದ್ಯ ಸರಬರಾಜು ಮಾಡಲಾಗುತ್ತಿದ್ದು ಎಲ್ಲ ಊಟದ ಹೋಟೆಲ್ಗಳಲ್ಲೂ ಅಕ್ರಮ ಮದ್ಯವನ್ನು ಸರಬರಾಜು ಮಾಡಲಾಗುತ್ತಿದೆ ಎಂದರು. ಇಂತವುಗಳಿಗೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆಯ ಅಧಿಕಾರಿಗಳೇ ಅಪ್ರತ್ಯಕ್ಷವಾಗಿ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಹೀಗಾಗಿ ಮದ್ಯ ಮಾರಾಟಗಾರರು ನಿರ್ಭಯದಿಂದ ಎಗ್ಗಿಲ್ಲದೇ ಸಾಗಾಟ ಮಾಡುತ್ತಿದ್ದು ಗ್ರಾಮೀಣ ಪ್ರದೇಶದ ಕೆಲವೆಡೆ ಸಂಗ್ರಹಿಸಿಡಲಾಗುತ್ತಿರುವ ಶಂಕೆ ವ್ಯಕ್ತಪಡಿಸಿದರು. ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಕಡಿವಾಣ ಹಾಕುವಂತೆ ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಮತ್ತು ಬೆಳಗಾವಿಯ ಅಬಕಾರಿ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಅಕ್ರಮ ಮದ್ಯ ಸಾಗಾಟಕ್ಕೆ ಕಡಿವಾಣ ಹಾಕಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ ಅವರು, ಕೆಲ ಪೋಟೋಗಳನ್ನು ಮಾಧ್ಯಮಗಳಿಗೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

