ವಚನಗಳಲ್ಲಿ ಜೀವನ ಮೌಲ್ಯ ಕುರಿತು ಪ್ರವಚನ
ಗದಗ: ಏ. 14ರಿಂದ 17ರ ವರೆಗೆ ನಡೆಯಲಿರುವ ಜ. ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಏ. 7ರಿಂದ 13ರ ವರೆಗೆ ಸಂಜೆ 7.30ಕ್ಕೆ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ವಚನಗಳಲ್ಲಿ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಮಹಿಳಾ ಶರಣ ಸಾಧಕಿ ಬೀದರನ ಗಿರಿಜಾ ಧರ್ಮರಡ್ಡಿ ಅವರಿಂದ ಪ್ರವಚನ ಜರುಗಲಿದೆ. ಪ್ರತಿನಿತ್ಯ ಸಂಜೆ 7.30ಕ್ಕೆ ಈ ಪ್ರವಚನ ಕಾರ್ಯಕ್ಕೆ 13ರ ವರೆಗೆ ನಡೆಯಲಿದೆ. ಪ್ರತಿನಿತ್ಯವೂ ಸಂಗೀತ ಪಂಡಿತ ಹೊಂಬಳದ ಬಸವರಾಜ ಅಡವಳ್ಳಿ ಅವರಿಂದ ವಚನ ಸಂಗೀತ ನಡೆಯಲಿದೆ. ಚಂದ್ರು ಹೊಸಮನಿ ತಬಲಾ ಸಾಥ್ ನೀಡುವರು. 9ರಂದು ಬೆಳಗ್ಗೆ 8.30ಕ್ಕೆ ಶ್ರೀಮಠದ ಆವರಣದಲ್ಲಿ ಷಟಸ್ಥಲ ಧ್ವಜಾರೋಹಣ ನಡೆಯಲಿದೆ. 11ರಂದು ರಾತ್ರಿ 9ಕ್ಕೆ ಕಳಸಾರೋಹಣ ಹಾಗೂ ಬಸವಧ್ವಜಾರೋಹಣ ನಡೆಯಲಿದೆ ಎಂದು ಶ್ರೀಮಠದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ ಹಾಗೂ ಕಾರ್ಯದರ್ಶಿ ಎಂ.ಸಿ. ಐಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜ ವಿಜ್ಞಾನ ಕಾರ್ಯಾಗಾರ
ಮುಂಡರಗಿ: ವಿದ್ಯಾರ್ಥಿಗಳು ಅನವಶ್ಯಕ ವಿಷಯಗಳ ಕಡೆಗೆ ಗಮನ ಹರಿಸದೇ ಸ್ಪರ್ಧಾತ್ಮಕವಾಗಿರುವ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳುವ ಮೂಲಕ ಈ ಸಮಾಜದಲ್ಲಿ ಉನ್ನತ ಹುದ್ದೆಯನ್ನೇರಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಕಾಲೇಜು ಸುಧಾರಣಾ ಸಮಿತಿ ಸದಸ್ಯೆ ಶೋಭಾ ಮೇಟಿ ಹೇಳಿದರು. ಅವರು ಸ್ಥಳೀಯ ಜ. ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶದ ಅಡಿಯಲ್ಲಿ ಸಮಾಜ ವಿಜ್ಞಾನ ಕಾರ್ಯಾಗಾರದಲ್ಲಿ ಮುಂಡರಗಿ ಅಂದು-ಇಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂಡರಗಿ ತಾಲೂಕು ಮೂರು ದಶಕಗಳಲ್ಲಿ ಅಮೂಲಾಗ್ರವಾಗಿ ಬದಲಾವಣೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಬಂದಿವೆ. ಅನೇಕ ಸರ್ಕಾರಿ ಪ್ರೌಢಶಾಲೆಗಳನ್ನು ಮಂಜೂರು ಮಾಡಿಸುವ ಮೂಲಕ ಅದರಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಸಾಕಷ್ಟು ಅನುಕೂಲತೆ ಕಲ್ಪಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು. ಪ್ರಾ. ಎಸ್.ಜಿ. ಕಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಂಡರಗಿ ಚರಿತ್ರೆ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಪ್ರೊ. ಎ.ವೈ. ನವಲಗುಂದ, ರಿಯಾಜ ಪಾಷಾ ಮಾತನಾಡಿದರು. ಪ್ರೊ. ಮಲ್ಲವ್ವ ಜಲರಡ್ಡಿ ಇದ್ದರು. ಮೇಘಾ ಕುಲಕರ್ಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಆರ್.ಎಚ್. ಜಂಗನವಾರಿ ನಿರೂಪಿಸಿದರು. ಎ.ಎಸ್. ಬನ್ನಿಕೊಪ್ಪ ಸ್ವಾಗತಿಸಿದರು. ಎಂ. ಬದನಿಕಾಯಿ ವಂದಿಸಿದರು.
ಅತಿ ಮದ್ಯ ಸೇವನೆ: ಸಾವು
ಗಜೇಂದ್ರಗಡ: ಪಟ್ಟಣದ ಕಾಲಕಾಲೇಶ್ವರ ವೃತ್ತದ ಬಳಿಯ ಕುಷ್ಟಗಿ ರಸ್ತೆಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮುರಳೀಧರ ಅನಂತರಾವ್ ಜಾಲಿಹಾಳ(48) ಮೃತ ವ್ಯಕ್ತಿ. ಗಂಗಾವತಿ ತಾಲೂಕಿನ ಮರೋಳ ಗ್ರಾಮದವನು ಎಂದು ತಿಳಿದು ಬಂದಿದೆ. ಸಾವಿಗೆ ಅತಿಯಾದ ಮದ್ಯ ಸೇವನೆ ಕಾರಣ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

